ಕಾಂಗರೂನಾಡಿನಲ್ಲಿ ಟೆಸ್ಟ್ ಸರಣಿ ಜಯಿಸಿದ ಭಾರತದ ಪ್ರಥಮ ನಾಯಕ ಕೊಹ್ಲಿ

Update: 2019-01-07 07:04 GMT

ಸಿಡ್ನಿ, ಜ.7: ಏಳು ದಶಕಗಳ ಬಳಿಕ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಆಸ್ಟ್ರೇಲಿಯ ನೆಲದಲ್ಲಿ ಟೆಸ್ಟ್ ಸರಣಿ ಜಯಿಸಿ ಹಿಂದೆಂದೂ ಮಾಡದ ಸಾಧನೆ ಮಾಡಿದೆ. 1947ರಲ್ಲಿ ಮೊದಲ ಬಾರಿ ಆಸ್ಟ್ರೇಲಿಯಕ್ಕೆ ಟೆಸ್ಟ್ ಪ್ರವಾಸ ಕೈಗೊಳ್ಳಲು ಆರಂಭಿಸಿದ ಭಾರತ ಈ ತನಕ ಒಟ್ಟಾರೆ 11 ಬಾರಿ ಸರಣಿ ಜಯಿಸಲು ಯತ್ನಿಸಿತ್ತು. ಇದೀಗ ಕೊಹ್ಲಿ ಸಾರಥ್ಯದಲ್ಲಿ ಭಾರತದ 72 ವರ್ಷಗಳ ಕನಸು ಈಡೇರಿದೆ. ಆಸೀಸ್ ನಾಡಿನಲ್ಲಿ ಟೆಸ್ಟ್ ಸರಣಿ ಜಯಿಸಿದ ಭಾರತದ ಮೊತ್ತ ಮೊದಲ ನಾಯಕ ಕೊಹ್ಲಿ.

ಕಳೆದ ವರ್ಷ ಇಂಗ್ಲೆಂಡ್ ಹಾಗೂ ದ.ಆಫ್ರಿಕದಲ್ಲಿ ಟೆಸ್ಟ್ ಸರಣಿ ಗೆಲ್ಲಲು ವಿಫಲವಾಗಿದ್ದ ಭಾರತ ಈಗ ಆಸ್ಟ್ರೇಲಿಯದಲ್ಲಿ ಟೆಸ್ಟ್ ಸರಣಿ ಗೆದ್ದು ನಾವು ಸ್ವದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಸೈ ಎಂದು ತೋರಿಸಿಕೊಟ್ಟಿದೆ.

ಭಾರತ, ಆಸ್ಟ್ರೇಲಿಯದಲ್ಲಿ ಟೆಸ್ಟ್ ಸರಣಿ ಜಯಿಸಿದ ಐದನೇ ತಂಡವಾಗಿದೆ. ಇಂಗ್ಲೆಂಡ್ ಅತ್ಯಂತ ಹೆಚ್ಚು ಬಾರಿ(13) ಸರಣಿ ಜಯಿಸಿದೆ. ವೆಸ್ಟ್‌ಇಂಡೀಸ್(4),ದಕ್ಷಿಣ ಆಫ್ರಿಕ(3) ಹಾಗೂ ನ್ಯೂಝಿಲೆಂಡ್(1) ಆನಂತರದ ಸ್ಥಾನದಲ್ಲಿವೆ.

ನಾಲ್ಕು ವರ್ಷಗಳ ಹಿಂದೆ ಎಂ.ಎಸ್. ಧೋನಿಯಿಂದ ನಾಯಕತ್ವ ವಹಿಸಿಕೊಂಡ ಬಳಿಕ ಕೊಹ್ಲಿ ಜಯಿಸಿದ ನಾಲ್ಕನೇ ವಿದೇಶಿ ಸರಣಿ ಇದಾಗಿದೆ. 2015ರಲ್ಲಿ ಶ್ರೀಲಂಕಾದಲ್ಲಿ 2-1 ಅಂತರದ ಸರಣಿ ಜಯಿಸಿದ್ದ ಕೊಹ್ಲಿ ವೆಸ್ಟ್‌ಇಂಡೀಸ್(2016) ಹಾಗೂ ಶ್ರೀಲಂಕಾ(2017),ಇದೀಗ ಆಸ್ಟ್ರೇಲಿಯ(2018/19)ವಿರುದ್ಧ ಸರಣಿ ಜಯ ದಾಖಲಿಸಿದೆ.

2014ರಲ್ಲಿ ಧೋನಿ ನಾಯಕತ್ವದಲ್ಲಿ ವಿಶ್ವದ ನಂ.1 ತಂಡವಾಗಿ ಆಸ್ಟ್ರೇಲಿಯಕ್ಕೆ ಪ್ರವಾಸ ಕೈಗೊಂಡಿದ್ದ ಭಾರತ 0-2 ಅಂತರದಿಂದ ಸರಣಿ ಸೋತಿತ್ತು. ಈಗ ಕೊಹ್ಲಿ ನಾಯಕತ್ವದಲ್ಲಿ ಆಟಗಾರರ ಸಂಘಟಿತ ಪ್ರಯತ್ನದ ಫಲವಾಗಿ ಸರಣಿ ದಿಗ್ವಿಜಯ ಸಾಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News