‘ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ನಿರ್ದೇಶಕರ ಸಂಸ್ಥೆಯಿಂದ ಇಂಗ್ಲೆಂಡ್ ನಲ್ಲಿ ತೆರಿಗೆ ವಂಚನೆ: ಆರೋಪ

Update: 2019-01-07 08:00 GMT

ಮುಂಬೈ, ಜ.7: ವಿವಾದಿತ ಚಿತ್ರ ‘ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್'ನ ನಿರ್ದೇಶಕ ವಿಜಯ್ ರತ್ನಾಕರ್ ಗುಟ್ಟೆ ಅವರದ್ದೆಂದು ಹೇಳಲಾದ ಕಂಪೆನಿ ವಿಆರ್‍ಜಿ ಡಿಜಿಟಲ್ ಕಾರ್ಪೊರೇಶನ್ ಪ್ರೈವೇಟ್ ಲಿಮಿಟೆಡ್ ಭಾರತದ ತೆರಿಗೆ ಕಾನೂನುಗಳನ್ನು ಉಲ್ಲಂಘಿಸಿದ ಆರೋಪಗಳನ್ನು ಎದುರಿಸುತ್ತಿದೆ. ಬ್ರಿಟಿಷ್ ಫಿಲ್ಮ್ ಇನ್‍ಸ್ಟಿಟ್ಯೂಟ್ ಅನ್ನು ವಂಚಿಸಲು ಹಾಗೂ ಇಂಗ್ಲೆಂಡಿನಲ್ಲಿ ತೆರಿಗೆ ರಿಯಾಯಿತಿ ಪಡೆಯುವ ಸಲುವಾಗಿ ಕೆಲ ದೇಶೀಯ ಸಂಸ್ಥೆಗಳೊಂದಿಗೆ ಸುತ್ತು ಬಳಸಿ ವ್ಯವಹಾರಗಳನ್ನು ನಡೆಸಿದೆ ಎಂದು ಆಪಾದಿಸಲಾಗಿದೆ.

ಇಂಗ್ಲೆಂಡ್ ನಲ್ಲಿನ ನಿಯಮಗಳ ಪ್ರಕಾರ  ಬ್ರಿಟಿಷ್ ಚಿತ್ರಗಳು ಎಂದು ಪರಿಗಣಿಸಲ್ಪಟ್ಟ ಚಿತ್ರಗಳಿಗೆ ಶೇ 25ರಷ್ಟು ತೆರಿಗೆ ವಿನಾಯಿತಿ ದೊರಕುತ್ತದೆ. ಇದಕ್ಕಾಗಿ ಚಿತ್ರ ನಿರ್ಮಾಣ ಕಂಪೆನಿಗಳು ಇಂಗ್ಲೆಂಡ್ ತೆರಿಗೆ ವ್ಯಾಪ್ತಿಯಲ್ಲಿರಬೇಕಲ್ಲದೆ ಚಿತ್ರ ನಿರ್ಮಾಣದ ಶೇ 10ರಷ್ಟು ಭಾಗವನ್ನು ಇಂಗ್ಲೆಂಡಿನಲ್ಲೇ ವ್ಯಯಿಸಬೇಕಾಗಿದೆ.

ಸ್ಥಳೀಯ ನ್ಯಾಯಾಲಯದ ಮುಂದೆ ಜಿಎಸ್‍ ಟಿ ಇಂಟಲಿಜೆನ್ಸ್ ನಿರ್ದೇಶನಾಲಯವು ಸಲ್ಲಿಸಿರುವ ರಿಮಾಂಡ್ ಅಪ್ಲಿಕೇಶನ್ ನಲ್ಲಿ ತಿಳಿಸಲಾದಂತೆ ವಿಆರ್‍ಜಿ ಡಿಜಿಟಲ್ ಕಾರ್ಪೊರೇಶನ್, ಬಾಂಬೆ ಕಾಸ್ಟಿಂಗ್ ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಪ್ರೈ ಲಿ (ಬಿಸಿಟಿಎಂಪಿಎಲ್ ) ಹಾಗೂ ಹೊರೈಝಾನ್ ಔಟ್ ಸೋರ್ಸ್ ಸೊಲ್ಯೂಶನ್ಸ್  ಸುತ್ತು ಬಳಸಿ ವ್ಯವಹಾರ ನಡೆಸಿ ಬಿಸಿಟಿಎಂಪಿಎಲ್ `ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಚಿತ್ರಕ್ಕೆ ಹೆಚ್ಚಿನ ಹೂಡಿಕೆ ಮಾಡಿದೆ  ಎಂದು  ಸಾಬೀತುಪಡಿಸಲು ಯತ್ನಿಸಿತ್ತು. ಈ ಸಂಸ್ಥೆ ಬೊಹ್ರಾ ಬ್ರೋಸ್ ಗ್ರೂಪಿಗೆ ಸೇರಿದ್ದಾಗಿದೆ. ಇಂಗ್ಲೆಂಡಿನಲ್ಲಿ ತೆರಿಗೆ ವಿನಾಯಿತಿ ಪಡೆಯಲು ಹೀಗೆ ಮಾಡಲಾಗಿತ್ತೆಂದು ಆರೋಪಿಸಲಾಗಿದೆ.

ಸಕ್ಕರೆ ಉದ್ಯಮಿ ರತ್ನಾಕರ್ ಗುಟ್ಟೆ ಪುತ್ರನಾಗಿರುವ ವಿಜಯ್ ಗುಟ್ಟೆ ವಿಆರ್‍ ಜಿ ಡಿಜಿಟಲ್ ಆಡಳಿತ ಮಂಡಳಿಯಲ್ಲಿ ನವೆಂಬರ್ 2018ರ ತನಕ ಇದ್ದರು. ಜಿಎಸ್‍ಟಿ ಇಂಟಲಿಜೆನ್ಸ್ ನಿರ್ದೇಶನಾಲಯ ಗುಟ್ಟೆಯನ್ನು ಆಗಸ್ಟ್ 2ರಂದು ಬಂಧಿಸಿದ್ದರೂ ಇದೀಗ ಅವರು ಜಾಮೀನಿನ ಮೇಲಿದ್ದಾರೆ.

ಸಂಸ್ಥೆ ಅಗತ್ಯ ಪ್ರಕ್ರಿಯೆಗಳನ್ನು ಪಾಲಿಸಿದೆ ಹಾಗೂ ನೈಜ ದಾಖಲೆಗಳನ್ನು ಸಲ್ಲಿಸಿಯೇ ತೆರಿಗೆ  ವಿನಾಯಿತಿ ಪಡೆದಿದೆ ಎಂದು ಗುಟ್ಟೆ ಹೇಳಿಕೊಂಡಿದ್ದಾರೆ. ತೆರಿಗೆ ವಿನಾಯಿತಿಗಳ ಬಗ್ಗೆ ತನಗೆ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಬ್ರಿಟಿಷ್ ಫಿಲ್ಮ್ ಇನ್‍ಸ್ಟಿಟ್ಯೂಟ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News