×
Ad

ಬಡವರ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು: ಸಚಿವ ಎಚ್.ಡಿ.ರೇವಣ್ಣ

Update: 2019-01-07 20:38 IST

ಬೆಂಗಳೂರು, ಜ.7: ರಾಜ್ಯ ಸರಕಾರದ ವತಿಯಿಂದ ಆರಂಭಿಸಲು ಉದ್ದೇಶಿಸಿರುವ ಆಂಗ್ಲ ಮಾಧ್ಯಮ ಶಾಲೆಗಳಿಗೆ ನನ್ನ ಬೆಂಬಲ ಅಚಲವಾದದ್ದು, ಹಳ್ಳಿಯಲ್ಲಿರುವ ರೈತರು, ಕೂಲಿ ಕಾರ್ಮಿಕರ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬುದು ನಮ್ಮ ಉದ್ದೇಶ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರಕಾರಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ವಿರೋಧ ವ್ಯಕ್ತಪಡಿಸಿದವರು, ರಾಜ್ಯದಲ್ಲಿ ಇರುವ ಎಲ್ಲ ಖಾಸಗಿ ಇಂಗ್ಲಿಷ್ ಶಾಲೆಗಳನ್ನು ಮುಚ್ಚುವಂತೆ ನಿರ್ಣಯ ಕೈಗೊಂಡಿದ್ದರೆ ನಾನು ಮೆಚ್ಚುತ್ತಿದ್ದೆ ಎಂದರು.

ಹಳ್ಳಿಯಲ್ಲಿರುವ ಬಡ ರೈತರ ಮಕ್ಕಳ ಬಗ್ಗೆ ಕಾಳಜಿ ಇಟ್ಟುಕೊಂಡು ನಿರ್ಣಯ ಕೈಗೊಳ್ಳಬೇಕಿತ್ತು. ಬಡವರ ಮಕ್ಕಳಿಗೆ ಒಂದು ನ್ಯಾಯ, ಶ್ರೀಮಂತರ ಮಕ್ಕಳಿಗೆ ಒಂದು ನ್ಯಾಯವೇ? ಖಾಸಗಿ ಶಾಲೆಗಳ ಬಗ್ಗೆ ಇಲ್ಲದ ನಿರ್ಣಯ ಸರಕಾರಿ ಶಾಲೆಗಳ ಬಗ್ಗೆ ಏಕೆ? ಸರಕಾರಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಅವರು ಹೇಳಿದರು. ಇಲ್ಲದಿದ್ದರೆ, ರಾಜ್ಯದಲ್ಲಿ ಬಡವರು, ಶ್ರೀಮಂತರು ಎಂಬ ಭೇದಭಾವವಿಲ್ಲದೆ, ಎಲ್ಲರಿಗೂ ಒಂದೇ ಮಾದರಿಯ ಶಿಕ್ಷಣ ಕೊಡುವ ವ್ಯವಸ್ಥೆಯನ್ನು ಜಾರಿಗೆ ತರಬೇಕು. ರೇವಣ್ಣ, ಕುಮಾರಣ್ಣ, ಪರಮೇಶ್ವರಣ್ಣನ ಮಕ್ಕಳು ಇಂಗ್ಲಿಷ್ ಓದಬಹುದು. ಆದರೆ, ಹೊಟ್ಟೆಗೆ ಕೂಳು ಇಲ್ಲದ ಬಡಪಾಯಿಯ ಮಕ್ಕಳು ಮಾತ್ರ ಯಾಕೆ ಓದಬಾರದು ಎಂದು ರೇವಣ್ಣ ಪ್ರಶ್ನಿಸಿದರು.

ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯವನ್ನು ನಾನು ಖಂಡಿಸುತ್ತೇನೆ. ಬಡವರು, ಕೂಲಿ ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸಲು 60 ಸಾವಿರ ರೂ.ಗಳಿಂದ 1 ಲಕ್ಷ ರೂ.ಗಳವರೆಗೆ ಡೊನೇಷನ್ ಎಲ್ಲಿಂದ ತಂದು ಕಟ್ಟಲು ಸಾಧ್ಯ. ನನ್ನ ನಿರ್ಣಯ ಬಡವರ ಮಕ್ಕಳಿಗೆ ಗುಣಮಟ್ಟದ ವಿದ್ಯಾದಾನ ಮಾಡಬೇಕು. ಇದನ್ನು ಸಿದ್ದರಾಮಯ್ಯ ಅವರಿಗೂ ಮನವಿ ಮಾಡುತ್ತೇನೆ. ಸಾಹಿತಿಗಳೇ ಕುಳಿತುಕೊಂಡು ಯಾವ ರೀತಿ ಶಿಕ್ಷಣ ನೀಡಬೇಕು ಎಂಬುದನ್ನು ನಿರ್ಧರಿಸಲಿ ಎಂದು ಅವರು ಹೇಳಿದರು.

ಇಲಾಖೆ ಕೆಲಸಗಳು ಸ್ಥಗಿತಗೊಂಡರೂ ಪರವಾಗಿಲ್ಲ...

ಶಾಲೆಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ನೀಡಿ, ಬಡವರ ಮಕ್ಕಳಿಗೆ ಶಿಕ್ಷಣ ನೀಡಿ ಎಂದು ನಾನು ಮನವಿ ಮಾಡುತ್ತೇನೆ. ಬಡವರಿಗೆ ಮುದ್ದೆ, ಶ್ರೀಮಂತರಿಗೆ ಅನ್ನ ಎಂಬ ತಾರತಮ್ಯ ಯಾಕೆ? ಒಂದು ವರ್ಷ ಕಾಲ ಲೋಕೋಪಯೋಗಿ ಇಲಾಖೆಯಲ್ಲಿನ ಎಲ್ಲ ಕೆಲಸಗಳು ಸ್ಥಗಿತಗೊಂಡರೂ ಪರವಾಗಿಲ್ಲ, ರಾಜ್ಯದಲ್ಲಿ ಇನ್ನೂ ಒಂದು ಸಾವಿರ ಶಾಲೆಗಳನ್ನು ನಿರ್ಮಿಸೋಣ.

-ಎಚ್.ಡಿ.ರೇವಣ್ಣ ಲೋಕೋಪಯೋಗಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News