ಜ.16ರ ವರೆಗೆ ಅಜಿತ್ ಹನುಮಕ್ಕನವರ್ ತನಿಖೆ ನಡೆಸದಂತೆ ಹೈಕೋರ್ಟ್ ಆದೇಶ

Update: 2019-01-07 15:23 GMT
ಅಜಿತ್ ಹನುಮಕ್ಕನವರ್

ಬೆಂಗಳೂರು, ಜ.7: ಖಾಸಗಿ ಸುದ್ದಿ ವಾಹಿನಿಯಲ್ಲಿ ಚರ್ಚಾ ಕಾರ್ಯಕ್ರಮದಲ್ಲಿ ಪ್ರವಾದಿ ಮುಹಮ್ಮದ್ (ಸ) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕ ಅಜಿತ್ ಹನುಮಕ್ಕನವರ್ ವಿರುದ್ಧ ಜ.16ರವರೆಗೆ ತನಿಖೆ ನಡೆಸದಂತೆ ಹೈಕೋರ್ಟ್ ಆದೇಶ ನೀಡಿದೆ.

ಪ್ರಕರಣ ರದ್ದುಕೋರಿ ಅಜಿತ್ ಹನುಮಕ್ಕನವರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ ಕುಮಾರ್ ಅವರಿದ್ದ ನ್ಯಾಯಪೀಠ, ಈ ಆದೇಶ ನೀಡಿತು.

ಪ್ರಕರಣ ಮಂಗಳೂರು ದಕ್ಷಿಣ ಠಾಣೆಯಿಂದ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಗೆ ವರ್ಗಾವಣೆ ಮಾಡಿರುವ ಹಿನ್ನೆಲೆಯಲ್ಲಿ ಪ್ರಕರಣ ಕುರಿತು ಹೈಗ್ರೌಂಡ್ಸ್ ಠಾಣಾ ಪೊಲೀಸರು ಜರುಗಿಸಿರುವ ಕ್ರಮದ ಕುರಿತು ಹೆಚ್ಚಿನ ಮಾಹಿತಿ ಪಡೆದು, ಜ.16ರಂದು ತಿಳಿಸುವಂತೆ ಸರಕಾರಿ ಅಭಿಯೋಜಕರಿಗೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.

ಇತ್ತೀಚೆಗೆ ಪ್ರೊ.ಭಗವಾನ್ ಎಂಬವರು ಹಿಂದೂ ಸಮುದಾಯ ಆದರ್ಶ ಪುರುಷರ ಬಗ್ಗೆ ಅವಹೇಳನಕಾರಿಯಾಗಿ ಪ್ರಸ್ತಾಪಿಸಿದ್ದಾರೆಂದು ಆರೋಪಿಸಿ ಖಾಸಗಿ ಸುದ್ದಿವಾಹಿನಿ ನಿರೂಪಕ ಅಜಿತ್ ಹನುಮಕ್ಕನವರ್ ಚರ್ಚಾ ಕಾರ್ಯಕ್ರಮದಲ್ಲಿ ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಕೀಳುಮಟ್ಟದಲ್ಲಿ ಶಬ್ದಗಳನ್ನು ಪ್ರಸ್ತಾಪಿಸಿ ತನ್ನ ವಿಕೃತಿಯನ್ನು ಮೆರೆದಿದ್ದಾರೆ. ಅಲ್ಲದೆ, ಹನುಮಕ್ಕನವರ್ ಉದ್ದೇಶಪೂರ್ವಕವಾಗಿ ಇಸ್ಲಾಮ್‌ನ್ನು ಹಾಗೂ ಮುಸ್ಲಿಮರ ನಂಬಿಕೆಗಳನ್ನು ಅವಮಾನಗೊಳಿಸಿ ಮುಸ್ಲಿಮರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ್ದಾರೆ. ಹೀಗಾಗಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಂಗಳೂರು ದಕ್ಷಿಣ ಠಾಣೆಯಲ್ಲಿ ದೂರು ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News