ಭಾರತ್ ಬಂದ್‌ಗೆ ಕರೆ: ಬೆಂಗಳೂರು ಆಟೋ ಚಾಲಕರ ಒಕ್ಕೂಟದ ಬೆಂಬಲವಿಲ್ಲ

Update: 2019-01-07 16:16 GMT

ಬೆಂಗಳೂರು, ಜ.7: ದೇಶದಾದ್ಯಂತ ಜ.8 ಹಾಗೂ 9 ರಂದು ವಿವಿಧ ಸಂಘಟನೆಗಳು ಹಮ್ಮಿಕೊಂಡಿರುವ ಎರಡು ದಿನಗಳ ಭಾರತ್ ಬಂದ್‌ಗೆ ಬೆಂಗಳೂರು ಆಟೋ ಚಾಲಕರ ಸಂಘ ಸಂಸ್ಥೆಗಳ ಒಕ್ಕೂಟ ಬೆಂಬಲವಿಲ್ಲ ಎಂದು ತಿಳಿಸಿದೆ.

ಸೋಮವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಎನ್.ಮಾಯಲಗು ಮಾತನಾಡಿ, ರಾಜಕೀಯ ಪಕ್ಷವೊಂದರ ಹೋರಾಟಕ್ಕೆ ಬೆಂಬಲ ನೀಡುವುದರ ಬಗ್ಗೆ ಆಟೋರಿಕ್ಷಾ ಚಾಲಕರು ಎರಡು ದಿನಗಳ ಊಟದ ತುತ್ತನ್ನು ಕಿತ್ತುಕೊಳ್ಳುವ ಸ್ವಾರ್ಥ ಹುನ್ನಾರದ ಮುಷ್ಕರ ಇದಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು ಆಟೋರಿಕ್ಷಾ ಚಾಲಕರ ಸಮಸ್ಯೆಗಳ ಬಗ್ಗೆ ಸಭೆ ಕರೆಯಲು ನಿರ್ಧರಿಸಿದ್ದರು. ಹೀಗಾಗಿ, ಜನ ವಿರೋಧಿ ಹೋರಾಟದಲ್ಲಿ ಆಟೋ ಚಾಲಕರನ್ನು ದುರ್ಬಳಕೆ ಮಾಡಿಕೊಳ್ಳಲು ರಾಜಕೀಯ ಪಕ್ಷವೊಂದು ಮುಂದಾಗಿರುವುದಕ್ಕೆ ಒಕ್ಕೂಟ ತೀವ್ರ ವಿರೋಧ ವ್ಯಕ್ತಪಡಿಸಿದೆ ಎಂದು ತಿಳಿಸಿದರು.

ಆಟೋರಿಕ್ಷಾ ಚಾಲಕರು ವರ್ಷಾನುಗಟ್ಟಲೆ ಬಾಡಿಗೆ ಆಟೋರಿಕ್ಷಾ ಚಾಲನೆ ಮಾಡಿ, ಕಡಿಮೆ ಹಣದಲ್ಲಿ ಹೊಸ ಆಟೋ ರಿಕ್ಷಾ ಕೊಳ್ಳುವ ಕನಸನ್ನು ಹಾಳು ಮಾಡಲು ಮುಷ್ಕರದ ಮೂಲಕ ಮುಂದಾಗಿದೆ. ಕಾಳಸಂತೆಯಲ್ಲಿ 40 ರಿಂದ 45 ಸಾವಿರ ರೂಪಾಯಿ ಕೊಟ್ಟು ಹಳೆಯ ಪರ್ಮಿಟ್ ಹೆಸರಿನಲ್ಲಿ ಚಾಲಕರಿಂದ ಹಣ ವಸೂಲಿ ಮಾಡಲಾಗುತ್ತಿದೆ. ಖಾಸಗಿ ಫೈನಾನ್ಸ್ ಹಾಗೂ ಆರ್‌ಟಿಓ ಬ್ರೋಕರ್‌ಗಳು ಈ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಹೀಗಾಗಿ, ಚಾಲಕರ ಸಂಘ ವಿರೋಧ ವ್ಯಕ್ತಪಡಿಸಿದೆ ಎಂದು ಹೇಳಿದರು.

ಇದೇ ವೇಳೆ ಮುಷ್ಕರದ ನೆಪದಲ್ಲಿ ಆಟೋ ಚಾಲಕರು ತಮ್ಮ ಕರ್ತವ್ಯ ಮರೆಯದೆ ಹಾಗೂ ಪ್ರಯಾಣಿಕರಿಂದ ದುಪ್ಪಟ್ಟು ಶುಲ್ಕ ವಸೂಲಿ ಮಾಡದೆ ತಮ್ಮ ಕರ್ತವ್ಯ ಪಾಲಿಸಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News