ಅನಧಿಕೃತ ವಾಣಿಜ್ಯ ಚಟುವಟಿಕೆ: ಅಧಿಕಾರಿಗಳೊಂದಿಗೆ ಶೀಘ್ರದಲ್ಲೇ ಸಭೆ; ಉಪಮುಖ್ಯಮಂತ್ರಿ ಪರಮೇಶ್ವರ್

Update: 2019-01-07 16:20 GMT

ಬೆಂಗಳೂರು, ಜ. 7: ಜನವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಸಂಬಂಧ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ), ಜಲಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ), ಬಿಬಿಎಂಪಿ ಹಾಗೂ ಬೆಸ್ಕಾಂ ಅಧಿಕಾರಿಗಳ ಜತೆ ಶೀಘ್ರದಲ್ಲೆ ಸಭೆ ನಡೆಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಸೋಮವಾರ ಇಲ್ಲಿನ ಸದಾಶಿವನಗರ ಬಿಡಿಎ ಕ್ವಾಟ್ರಸ್‌ನಲ್ಲಿ ಇಂದಿರಾನಗರ ರೆಸಿಡೆನ್ಸ್ ವೆಲ್‌ಫೇರ್‌ಗ್ರೂಪ್‌ನ ಸದಸ್ಯರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಜನವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಕೆಲವೆಡೆ ಟ್ರೇಡ್ ಲೈಸನ್ಸ್ ಇಲ್ಲದೆ ವಾಣಿಜ್ಯ ಚಟುವಟಿಕೆ ನಡೆಸದಂತೆ ರಾಜ್ಯ ಸರಕಾರದ ಆದೇಶವಿದ್ದರೂ, ಕೆಲವೆಡೆ ಜನವಸತಿ ಪ್ರದೇಶದಲ್ಲಿ ಲೈಸೆನ್ಸ್ ರಹಿತವಾಗಿ ಇಡಲಾಗಿದೆ. ಇದನ್ನು ತೆರವುಗೊಳಿಸಲು ಕಾರ್ಯಪಡೆ ರಚಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.

ಇದಕ್ಕೂ ಮೀರಿ ಕೆಲ ಕಠಿಣ ನಿಯಮಗಳನ್ನು ಜಾರಿ ಮಾಡುವ ಉದ್ದೇಶದಿಂದ ಸಂಬಂಧಪಟ್ಟ ಎಲ್ಲ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಕೆಲವು ಬೀದಿಗಳಲ್ಲಿ ಹತ್ತಕ್ಕೂ ಹೆಚ್ಚು ಬಾರ್, ಪಬ್‌ಗಳಿರುವ ಬಗ್ಗೆಯೂ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಇಂದಿರಾನಗರ ವ್ಯಾಪ್ತಿಯಲ್ಲಿ ಅನಧಿಕೃತ ಅಂಗಡಿ, ಪಬ್, ಬಾರ್, ಹೊಟೇಲ್ ಹಾಗೂ ಇತರೆ ಚಟುವಟಿಕೆಯಿಂದ ತೊಂದರೆಯಾಗುತ್ತಿದ್ದು, ಅವುಗಳ ನಿಯಂತ್ರಣಕ್ಕೆ ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಇಂದಿರಾನಗರ ರೆಸಿಡೆನ್ಸ್ ವೆಲ್‌ಫೇರ್ ಗ್ರೂಪ್‌ನ ಸದಸ್ಯರು ಇದೇ ವೇಳೆ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News