ಜಿಲ್ಲಾ-ತಾಲೂಕು ಆಸ್ಪತ್ರೆಗೆ ಕಾರ್ಯ ನಿರ್ವಾಹಕರನ್ನು ನೇಮಿಸಿಕೊಳ್ಳುವಂತೆ ಇಲಾಖೆ ಸುತ್ತೋಲೆ

Update: 2019-01-07 16:44 GMT

ಬೆಂಗಳೂರು, ಜ.7: ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಜಿಲ್ಲಾ ಮತ್ತು ತಾಲೂಕ್ ಆಸ್ಪತ್ರೆಗಳಿಗೆ ಅಗತ್ಯ ಕಾರ್ಯ ನಿರ್ವಾಹಕರನ್ನು ನೇಮಿಸಿಕೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಎಂಸಿಎ, ಎಂಬಿಎ, ಪಿಜಿಡಿಬಿಎ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಹಣಾಧಿಕಾರಿಗಳು ಐವರು ಸದಸ್ಯರನ್ನೊಳಗೊಂಡ ನೇಮಕಾತಿ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಕರ್ನಾಟಕ ಪಾರದರ್ಶಕ ಕಾಯಿದೆ ಅನ್ವಯ ಹೊರ ಗುತ್ತಿಗೆ ಆಧಾರದ ಮೇರೆಗೆ ಮಾನವ ಸಂಪನ್ಮೂಲ ಕಾರ್ಯನಿರ್ವಾಹಕರನ್ನು ಪಡೆಯಲು ಸೂಚಿಸಲಾಗಿದೆ. ಸರ್ವರಿಗೂ ಆರೋಗ್ಯ ಸೇವೆ ನೀಡುವ ದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರಕಾರ ಜಾರಿಗೊಳಿಸಿರುವ ಆರೋಗ್ಯ ಯೋಜನೆಗಳಡಿಯಲ್ಲಿ 291 ಸಾಮಾನ್ಯ ಹಾಗೂ ದ್ವಿತೀಯ, 254 ಕ್ಲಿಷ್ಟಕರ ದ್ವಿತೀಯ, 900 ತೃತೀಯ ಹಾಗೂ 169 ತುರ್ತು ಚಿಕಿತ್ಸಾ ಸೇವೆಗಳನ್ನು ಒದಗಿಸಲಾಗುತ್ತದೆ.

ಸಾಮಾನ್ಯ ದ್ವಿತೀಯ ಹಂತದ ಚಿಕಿತ್ಸೆಗಳನ್ನು ಸರಕಾರಿ ಆಸ್ಪತ್ರೆಯಲ್ಲಿ ಒದಗಿಸಿದಾಗ ಶೇ. 50ರಷ್ಟು ಹಣ ಹಾಗೂ ಕ್ಲಿಷ್ಟಕರ, ತೃತೀಯ ಹಂತದ ಚಿಕಿತ್ಸೆಗಳಿಗೆ ಶೇ.75ರಷ್ಟು ಹಣವನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಿಂದ ಪ್ಯಾಕೇಜ್ ರೂಪದಲ್ಲಿ ನೀಡಲಾಗುವುದು. ಉಳಿದ ಹಣವನ್ನು ಆಸ್ಪತ್ರೆ ಅಭಿವೃದ್ಧಿಗೆ ಬಳಕೆ ಮಾಡಲಾಗುವುದು. ಟ್ರಸ್ಟ್‌ನಿಂದ ಹಣ ಮರುಪಾವತಿಗಾಗಿ ಸೇವೆ ಪಡೆಯವ ರೋಗಿಗಳ ಬಗ್ಗೆ ಮಾಹಿತಿ, ಚಿಕಿತ್ಸೆ ವಿವರ ಹಾಗೂ ದಾಖಲಾತಿಯನ್ನು ಪೋರ್ಟಲ್‌ನಲ್ಲಿ ದಾಖಲಿಸಬೇಕಾಗುತ್ತದೆ.

ಹೀಗಾಗಿ, ಪ್ರತಿ ತಾಲ್ಲೂಕ್ ಆಸ್ಪತ್ರೆಗೆ ಒಬ್ಬರು, 400 ಹಾಸಿಗೆ ಸಾಮರ್ಥ್ಯವಿರುವ ಜಿಲ್ಲಾ ಆಸ್ಪತ್ರೆಗೆ ಇಬ್ಬರು ಹಾಗೂ ಅದಕ್ಕಿಂತ ಅಧಿಕ ಸಂಖ್ಯೆ ಹಾಸಿಗೆ ಇರುವ ಆಸ್ಪತ್ರೆಗೆ ಮೂವರು ಕಾರ್ಯನಿರ್ವಾಹಕರನ್ನು ಪಡೆಯಲು ಇಲಾಖೆ ತೀರ್ಮಾನಿಸಿದೆ. ಇದಕ್ಕಾಗಿ ಶೇ.75 ಅಂಕಗಳೊಂದಿಗೆ ಬಿ.ಕಾಂ ಅಥವಾ ಬಿಬಿಎ ಪದವಿ ಪಡೆದಿರುವ ಜತೆಗೆ ಐಟಿ ಸಿಸ್ಟಮ್ ಹಾಗೂ ಮೈಕ್ರೋಸ್‌ಟಾ ಆಫೀಸ್ ತರಬೇತಿ ಪಡೆದಿರುವ 25 ರಿಂದ 35 ವರ್ಷ ವಯೋಮಿತಿ ಹೊಂದಿದವರು ಕಾರ್ಯನಿರ್ವಾಕರ ಹುದ್ದೆಗೆ ಅರ್ಹರಾಗಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News