×
Ad

ಆದಿಕೇಶವಲು ಮೊಮ್ಮಗ ಗೀತಾ ವಿಷ್ಣು ಸೇರಿ 9 ಜನರ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ

Update: 2019-01-07 22:21 IST

ಬೆಂಗಳೂರು, ಜ.7: ಆದಿಕೇಶವಲು ಮೊಮ್ಮಗ ಗೀತಾ ವಿಷ್ಣು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ನಟ ದೇವರಾಜ್ ಪುತ್ರ ಪ್ರಣಮ್ ಕೂಡ ಎ-4 ಆರೋಪಿ ಆಗಿದ್ದಾನೆ.

2017ರಲ್ಲಿ ಸೌತ್ ಎಂಡ್ ಸರ್ಕಲ್‌ನಲ್ಲಿ ಗೀತಾ ವಿಷ್ಣು ಕಾರು ಅಪಘಾತವಾಗಿತ್ತು. ಅಲ್ಲದೇ, ರಸ್ತೆಯ ಪಕ್ಕದಲ್ಲಿದ್ದ ಬಿಬಿಎಂಪಿ ನಾಮಫಲಕಕ್ಕೂ ಗೀತಾವಿಷ್ಣು ಢಿಕ್ಕಿ ಹೊಡೆದಿದ್ದ. ಈ ಹಿನ್ನೆಲೆಯಲ್ಲಿ ಗೀತಾ ವಿಷ್ಣುಗೆ ಸಾರ್ವಜನಿಕರು ಹಿಡಿದು ಥಳಿಸಿದ್ದರು. ತದನಂತರ ಜಯನಗರ ಪೊಲೀಸರು, ಗೀತಾ ವಿಷ್ಣುನನ್ನ ರಕ್ಷಿಸಿ, ಅಪಘಾತ ಪ್ರಕರಣವಾದ್ದರಿಂದ ಬಂಧಿಸಿದ್ದರು.

ಆತನನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆತ ಗಾಂಜಾ ಮತ್ತಿನಲ್ಲಿ ಕಾರು ಅಪಘಾತ ಮಾಡಿದ್ದ ಎಂಬ ಸತ್ಯ ಬಯಲಾಗಿತ್ತು. ಅಲ್ಲದೇ ಬೆಂಝ್ ಕಾರಿನಲ್ಲಿ ಗಾಂಜಾ ಇಟ್ಟಿದ್ದ ಎಂದು ದೃಢಪಟ್ಟಿತ್ತು. ಕೂಡಲೇ ಪೊಲೀಸರು ಕಾರಿನಲ್ಲಿದ್ದ 10 ಸಾವಿರ ಬೆಲೆ ಬಾಳುವ 110 ಗ್ರಾಂ ತೂಕ ಗಾಂಜಾ ವಶಪಡಿಸಿಕೊಂಡಿದ್ದರು.

ಬಳಿಕ ಪೊಲೀಸರು ಗೀತಾ ವಿಷ್ಣು ವಿರುದ್ಧ ಎನ್‌ಡಿಪಿಎಸ್ ಆ್ಯಕ್ಟ್ ಹಾಗೂ 212 ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿದ್ದರು. ಅಪಘಾತದಲ್ಲಿ ಗೀತಾ ವಿಷ್ಣುಗೂ ಗಾಯಗಾಳಾಗಿದ್ದವು. ಈ ಹಿನ್ನೆಲೆಯಲ್ಲಿ ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗಿತ್ತು. ಆದರೆ ಅಲ್ಲೂ ಒಳಸಂಚು ರೂಪಿಸಿ ಗೀತಾ ವಿಷ್ಣು ಪರಾರಿಯಾಗಿದ್ದ. ಈ ಬಗ್ಗೆ ಕಬ್ಬನ್ ಪಾರ್ಕ್‌ಪೊಲೀಸ್ ಠಾಣೆಯಲ್ಲಿ ಐಪಿಸಿ 120ಬಿ, 224, 225 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದಾದ ಬಳಿಕ ಪ್ರಕರಣವನ್ನ ಸಿಸಿಬಿಗೆ ಹಸ್ತಾಂತರಿಸಲಾಗಿತ್ತು.

ಸದ್ಯ ಆರೋಪಿಗಳ ರಕ್ತದ ಮಾದರಿಯಲ್ಲಿ ಗಾಂಜಾ ಸೇವನೆ ದೃಢಪಟ್ಟ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಒಟ್ಟು 9 ಜನರನ್ನ ಆರೋಪಿಯನ್ನಾಗಿ ಮಾಡಿದ್ದಾರೆ. ಎ-1 ಗೀತಾ ವಿಷ್ಣು, ಎ-2 ಮುಹಮ್ಮದ್ ಫೈಝಲ್, ಎ-3 ಶಶಾಂಕ್, ಎ-4 ಪ್ರಣಮ್ ದೇವರಾಜ್, ಎ-5 ಮುಹಮ್ಮದ್ ಜುನೈದ್, ಎ-6 ವಿನೋದ್, ಎ-7 ಡಾ.ರಾಜೇಶ್ ನಾಯ್ಡು, ಎ-8 ಶ್ರೀಮತಿ ಚೈತನ್ಯ, ಎ-9 ಆನಂದ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News