ತೆರಿಗೆ ಪಾವತಿಸಿ, ಇಲ್ಲದಿದ್ದರೆ ದಾಳಿ ಮುಂದುವರೆಯಲಿದೆ: ಐಟಿ ಇಲಾಖೆ ಮಹಾ ನಿರ್ದೇಶಕ ಬಾಲಕೃಷ್ಣನ್

Update: 2019-01-07 16:54 GMT

ಬೆಂಗಳೂರು, ಜ.7: ಬಹುತೇಕ ತೆರಿಗೆ ಅನ್ನು ಪಾವತಿ ಮಾಡಬೇಕೆಂದು ಚಿತ್ರರಂಗದ ಎಲ್ಲ ಸದಸ್ಯರಿಗೂ ಮನವಿ ಮಾಡುತ್ತೇವೆ. ಒಂದು ವೇಳೆ, ತಪ್ಪಿಸಿಕೊಳ್ಳಲು ಯತ್ನಿಸಿದರೆ, ದಾಳಿ ಮುಂದುವರೆಯಲಿದೆ ಎಂದು ಆದಾಯ ತೆರಿಗೆ ಇಲಾಖೆ ಮಹಾ ನಿರ್ದೇಶಕ(ಡಿಜಿ) ಬಿ.ಆರ್.ಬಾಲಕೃಷ್ಣನ್ ತಿಳಿಸಿದರು.

ಸೋಮವಾರ ನಗರದ ಆದಾಯ ತೆರಿಗೆ ಇಲಾಖೆಯ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಂದು ಸಿನೆಮಾ ಶೇಕಡ 30ರಿಂದ 40 ರಷ್ಟು ನಗದಿನಲ್ಲಿ ವ್ಯವಹಾರ ನಡೆಸುತ್ತಿದೆ. ಜೊತೆಗೆ, ಸಿನೆಮಾ ಚಟುವಟಿಕೆಗಳು ಸಂಪೂರ್ಣ ನಗದು ವಹಿವಾಟು ಚಾಲ್ತಿ ಇದೆ. ಚಿತ್ರಮಂದಿರಗಳಲ್ಲಿ ಸಂಗ್ರಹವಾದ ಹಣವೂ ನಿರ್ಮಾಪಕರಿಗೆ ನಗದು ಮೂಲಕವೇ ತಲುಪಲಿದೆ. ಅಷ್ಟೇ ಅಲ್ಲದೆ, ನಟರು ಕೂಡಾ ಸಂಭಾವನೆಯನ್ನು ನಗದು ರೂಪದಲ್ಲೇ ಪಡಯುತ್ತಾರೆ. ಅಲ್ಲದೇ, ಸಿನೆಮಾ, ಧ್ವನಿಸುರುಳಿ ಹಕ್ಕುಗಳ ಮಾರಾಟ ಪ್ರಕ್ರಿಯೆಯ ಲೆಕ್ಕಾಚಾರವನ್ನು ನಿರ್ಮಾಪಕರು ಎಲ್ಲಿಯೂ ಉಲ್ಲೇಖ ಮಾಡಿಲ್ಲ ಎಂದು ತಿಳಿಸಿದರು.

ಸಚಿವ ಡಿ.ಕೆ.ಶಿವಕುಮಾರ್ ಮೇಲಿನ ಐಟಿ ದಾಳಿ ವಿಚಾರವಾಗಿ ಮಾತನಾಡಿದ ಅವರು, ವೈಯಕ್ತಿಕವಾಗಿ ಯಾವುದೇ ಮೊಕದ್ದಮೆಯ ಮಾಹಿತಿ ನೀಡಲು ಸಾಧ್ಯವಿಲ್ಲ. ಆದರೆ, ಆ ಪ್ರಕರಣದ ಎಲ್ಲ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದರು.

ಮೂರನೇ ಸ್ಥಾನ: ತೆರಿಗೆ ಸಂಗ್ರಹದ ವಿಚಾರದಲ್ಲಿ ದೇಶದಲ್ಲಿ ನಮ್ಮ ವಿಭಾಗ (ಕರ್ನಾಟಕ ಮತ್ತು ಗೋವಾ) ಮೂರನೆ ಸ್ಥಾನದಲ್ಲಿದೆ. ಮೊದಲ ಸ್ಥಾನ ಮುಂಬೈ ಹಾಗೂ ನವದೆಹಲಿ ಎರಡನೆ ಸ್ಥಾನದಲ್ಲಿದೆ. ಸಾಫ್ಟ್‌ವೇರ್, ಆಟೊಮೊಬೈಲ್ಸ್ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಚ್ಚಾಗಿ ತೆರಿಗೆ ಸಂಗ್ರಹ ಮಾಡಲಾಗಿದೆ ಎಂದು ಬಾಲಕೃಷ್ಣನ್ ಮಾಹಿತಿ ನೀಡಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News