ಪೆಟ್ರೋಲ್-ಡೀಸೆಲ್ ಮೇಲಿನ ತೆರಿಗೆ ಹೆಚ್ಚಳಕ್ಕೆ ಖಂಡನೆ

Update: 2019-01-07 17:09 GMT

ಬೆಂಗಳೂರು, ಜ. 7: ರಾಜ್ಯದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರವು ಪೆಟ್ರೋಲ್ ಮತ್ತು ಡೀಸೆಲ್‌ಗಳ ಮೇಲೆ ತೆರಿಗೆಯನ್ನು ಏರಿಕೆ ಮಾಡಿರುವುದನ್ನು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಪಕ್ಷವು ತೀವ್ರವಾಗಿ ಖಂಡಿಸಿದೆ.

ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಇಳಿಕೆಯಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಇದರಿಂದ ಜನರು ನಿಟ್ಟುಸಿರು ಬಿಡುವಂತಾಗಿತ್ತು. ತೈಲ ಬೆಲೆ ಏರಿಕೆಯ ವಿರುದ್ಧ ಸೆಪ್ಟೆಂಬರ್ 10ರಂದು ಭಾರತಾದ್ಯಂತ ಯಶಸ್ವಿ ಹರತಾಳವೂ ನಡೆದಿತ್ತು. ಜನಾಕ್ರೋಶಕ್ಕೆ ಮಣಿದು ರಾಜ್ಯ ಮತ್ತು ಕೇಂದ್ರ ಸರಕಾರಗಳು ಪೆಟ್ರೋಲ್ ಮತ್ತು ಡೀಸೆಲ್‌ಗಳ ಮೇಲಿನ ತೆರಿಗೆಯನ್ನು ತಲಾ 2 ರೂ.ನಷ್ಟು ಇಳಿಕೆ ಮಾಡಿದ್ದವು. ಆದರೆ ಈಗ ಜಾಗತಿಕ ಮಟ್ಟದಲ್ಲಿ ಆಗಿರುವ ಇಳಿಕೆಯ ಲಾಭವನ್ನು ಜನರಿಗೆ ವರ್ಗಾಯಿಸುವ ಬದಲಿಗೆ ಸರಕಾರವು ತೆರಿಗೆ ಏರಿಕೆ ಮಾಡಿರುವುದು ಜನವಿರೋಧಿ ಕ್ರಮವಾಗಿದೆ.

ಪೆಟ್ರೋಲಿನ ಮೇಲಿನ ತೆರಿಗೆಯನ್ನು ಶೇ.28.75ರಿಂದ ಶೇ.32ಕ್ಕೆ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಶೇ.17.73ರಿಂದ ಶೇ.21ಕ್ಕೆ ಏರಿಕೆ ಮಾಡಲಾಗಿದೆ. ಇದರ ಪರಿಣಾಮವಾಗಿ ಪ್ರತಿ ಲೀಟರಿಗೆ ಸುಮಾರು 2ರೂ.ನಷ್ಟು ಏರಿಕೆಯಾಗಿದೆ. ಕೇಂದ್ರ ಮತ್ತು ರಾಜ್ಯಗಳ ತೆರಿಗೆ ಸೇರಿ ಜನರು ಪೆಟ್ರೋಲ್, ಡೀಸೆಲ್‌ಗಳ ಮೇಲೆ ಒಟ್ಟಾರೆ ಸುಮಾರು ಶೇ.100ರಷ್ಟು ತೆರಿಗೆ ಪಾವತಿಸುತ್ತಿದ್ದಾರೆ. ಈ ತೆರಿಗೆಗಳನ್ನು ಕಡಿತ ಮಾಡುವ ಬದಲಿಗೆ ಹೆಚ್ಚಿಸಿರುವುದು ಖಂಡನೀಯ.

ಸರಕಾರ ತನ್ನ ದುಂದುವೆಚ್ಚ, ಭ್ರಷ್ಟಾಚಾರಗಳನ್ನು ತೊಲಗಿಸಿ, ಖರ್ಚನ್ನು ಕಡಿಮೆ ಮಾಡುವ ಬದಲಿಗೆ ತೆರಿಗೆ ಹೆಚ್ಚಿಸಿರುವುದು ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಡೀಸೆಲ್ ಬೆಲೆ ಇಳಿಕೆಯಾದಾಗ ದರ ಕಡಿತ ಮಾಡದ ಕೆಎಸ್ಸಾರ್ಟಿಸಿ, ಈಗ ಮತ್ತೆ ದರ ಏರಿಕೆ ಚಿಂತನೆ ನಡೆಸುತ್ತಿರುವುದನ್ನು ಸಲ್ಲ. ಕೂಡಲೇ ತೆರಿಗೆ ಏರಿಕೆಯನ್ನು ಹಿಂಪಡೆಯಬೇಕೆಂದು ಸಮಿತಿ ರಾಜ್ಯ ಕಾರ್ಯದರ್ಶಿ ಕೆ.ಉಮಾ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News