ಬೆಂಗಳೂರು: ಪೊಲೀಸರಿಂದ ರೌಡಿ ಕೈ, ಕಾಲಿಗೆ ಗುಂಡೇಟು
ಬೆಂಗಳೂರು, ಜ.7: ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪ ಹೊಂದಿದ್ದ ರೌಡಿಶೀಟರ್ ತಬ್ರೇಝ್(27) ಕೈ, ಕಾಲಿಗೆ ಪಿಸ್ತೂಲಿನಿಂದ ಗುಂಡು ಹೊಡೆದು ಇಲ್ಲಿನ ಕಾಡುಗೊಂಡನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕೈ ಹಾಗೂ ಕಾಲಿಗೆ ಗುಂಡೇಟು ತಗುಲಿ ಗಾಯಗೊಂಡಿರುವ ಆರೋಪಿ ತಬ್ರೇಝ್, ಇಲ್ಲಿನ ವಿನೋಬನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಲೀಂ ಎಂಬಾತನ ಜೊತೆ ಸೇರಿ ರಿಯಲ್ ಎಸ್ಟೇಟ್ ಉದ್ಯಮಗಳನ್ನು ನಡೆಸುತ್ತಿದ್ದ ತಬ್ರೇಝ್, ಅಪರಾಧ ಕೃತ್ಯವೊಂದರಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದನು. ಆತನ ಬಂಧನಕ್ಕೆ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿತ್ತು. ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಎಚ್‌ಬಿಆರ್ ಲೇಔಟ್ ಅರಣ್ಯ ಇಲಾಖೆ ಕಚೇರಿಯ ಹಿಂಭಾಗ ಅಡಗಿರುವ ಮಾಹಿತಿ ಬಂದಿದೆ.
ಮಾಹಿತಿ ಆಧರಿಸಿ ಸಿಬ್ಬಂದಿಯೊಂದಿಗೆ ತೆರಳಿದ ಕೆಜಿ ಹಳ್ಳಿ ಪೊಲೀಸ್ ಠಾಣಾ ಎಸ್ಸೈ ಎಡ್ವಿನ್ ಪ್ರದೀಪ್ ಅವರು, ತಬ್ರೇಝ್ ಅನ್ನು ಬಂಧಿಸಲು ಮುಂದಾಗಿದ್ದಾರೆ. ತಬ್ರೇಝ್ ಅನ್ನು ಹಿಡಿಯಲು ಮುಖ್ಯಪೇದೆ ಶಿವಕುಮಾರ್ ಹೋಗಿದ್ದು, ಅವರಿಂದ ತಪ್ಪಿಸಿಕೊಳ್ಳಲು ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಎಡ್ವಿನ್ ಪ್ರದೀಪ್ ಅವರು ಸೂಚನೆ ನೀಡಿದರೂ, ಚಾಕು ಹಿಡಿದು ಪೊಲೀಸರತ್ತ ನುಗ್ಗಲು ಯತ್ನಿಸಿದ್ದಾನೆ. ಕೂಡಲೇ ಮತ್ತೆರಡು ಸುತ್ತು ಗುಂಡು ಹಾರಿಸಿ ತಬ್ರೇಝ್ ಅನ್ನು ಬಂಧಿಸಲಾಗಿದೆ. ಈತನ ವಿರುದ್ಧ ಕೊಲೆ, ಸುಲಿಗೆ, ಬೆದರಿಕೆ, ಕೊಲೆಯತ್ನ ಸೇರಿದಂತೆ, 14ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸಂಬಂಧ ದೂರುಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.