ಅಜ್ಮೀರಾ ಗ್ರೂಪ್ಸ್ ವಂಚನೆ ಪ್ರಕರಣ: ಹೂಡಿಕೆದಾರರಿಗೆ ಹಣ ವಾಪಸ್
ಬೆಂಗಳೂರು, ಜ.7: ಅಜ್ಮೀರಾ ಗ್ರೂಪ್ಸ್ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಆರೋಪಿಗಳ ಚರಾಸ್ತಿ ಮತ್ತು ಚಿರಾಸ್ತಿ ಮುಟ್ಟಗೋಲು ಹಾಕಿಕೊಂಡಿದ್ದು, ಹೂಡಿಕೆ ಮಾಡಿ ಹಣ ಕಳೆದುಕೊಂಡ ಸಂತ್ರಸ್ಥರಿಗೆ ಹಣ ವಾಪಸ್ ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.
ಈ ಸಂಬಂಧ ಸೋಮವಾರ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಸಿಸಿಬಿ, ಅಜ್ಮೀರಾ ಗ್ರೂಪ್ಸ್‌ನಲ್ಲಿ ಹಣ ಹೂಡಿಕೆ ಮಾಡಿ ವಂಚನೆಗಳೊಳಗಾಗಿರುವ ಸದಸ್ಯರು ಪ್ರಕರಣದ ತನಿಖಾಧಿಕಾರಿ ಸಿಸಿಬಿ ಸಹಾಯಕ ಪೊಲೀಸ್ ಆಯುಕ್ತ ಪಿ.ಟಿ. ಸುಬ್ರಮಣ್ಯ ಬಳಿ ಸೂಕ್ತ ದಾಖಲೆಗಳೊಂದಿಗೆ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಏನಿದು ಪ್ರಕರಣ?: ಬೆಂಗಳೂರಿನ ಜಯನಗರದಲ್ಲಿ ಅಜ್ಮೀರಾ ಗ್ರೂಪ್ಸ್ ಎಂಬುವ ಸಂಸ್ಥೆಯನ್ನು ತಬ್ರೇಝ್ ಪಾಷಾ ಮತ್ತು ಅಬ್ದುಲ್ ದಸ್ತಗೀರ್ ಎಂಬುವರು 2017ರಲ್ಲಿ ಹುಟ್ಟುಹಾಕಿ, ಸಾರ್ವಜನಿಕರು ಹಣ ಹೂಡಿಕೆ ಮಾಡಿದರೆ, ಪ್ರತಿ ತಿಂಗಳು ಅಧಿಕ ಬಡ್ಡಿ ನೀಡುವುದಾಗಿ ನಂಬಿಸಿ, ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿಸಿಕೊಂಡು, ಹಣ ನೀಡದೆ, ವಂಚನೆ ಮಾಡಿದ್ದರು. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ(ಮನಿ ಲೆಂಡರಿಂಗ್ ಅಕ್ಟ್) ಅಡಿ ಮೊಕದ್ದಮೆ ದಾಖಲಾಗಿತ್ತು.
ಬಳಿಕ ಈ ಗಂಭೀರ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು. ಈ ಸಂಬಂಧ ತನಿಖೆ ನಡೆಸಿದ ಸಿಸಿಬಿ ಪೊಲೀಸರು, ಆರೋಪಿಗಳ ವಿರುದ್ಧ ಕಲಂ 9ಕೆಪಿಐಡಿ ಅಕ್ಟ್ 2004ನ್ನು ಸೇರಿಸಿ ತನಿಖೆ ಕೈಗೊಳ್ಳಲಾಗಿತ್ತು. ಈ ಕಾಯ್ದೆ ಪ್ರಕಾರ ಆರೋಪಿ ಹೊಂದಿರುವ ಚರಾಸ್ತಿ ಮತ್ತು ಚಿರಾಸ್ತಿಗಳನ್ನು ಮುಟ್ಟಗೋಲು ಹಾಕಿಕೊಂಡು ಅವುಗಳನ್ನು ನ್ಯಾಯಾಲಯದ ಅಧೀನದಡಿ ಸಂತ್ರಸ್ಥರಿಗೆ ಒದಗಿಸಲಾಗುತ್ತಿದೆ ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.