ವ್ಯಕ್ತಿತ್ವವನ್ನು ಸಂಸ್ಕರಿಸುವುದೇ ಶಿಕ್ಷಣದ ಗುರಿ: ಬೆಂಗಳೂರು ವಿವಿ ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್
ಬೆಂಗಳೂರು, ಜ. 7: ಕೇವಲ ಪಠ್ಯಗಳನ್ನಷ್ಟೇ ಕಲೆಹಾಕಿ ಕಲಿಯುವುದಕ್ಕಷ್ಟೇ ಶಿಕ್ಷಣ ಸೀಮಿತವಾಗಬಾರದು. ಮಾನವೀಯತೆ, ಸೌಹಾರ್ದತೆ, ಸ್ನೇಹಪರತೆ, ಮತೀಯ ಸಹಿಷ್ಣುತೆ, ಸಮಾಜಮುಖಿ ಚಿಂತನೆ ಮುಂತಾದ ಮೌಲ್ಯಗಳನ್ನು ಉದ್ದೀಪನಗೊಳಿಸಿ ವ್ಯಕ್ತಿತ್ವವನ್ನು ಸಂಸ್ಕರಿಸುವ ಗುರಿಯನ್ನು ಹೊಂದಿರಬೇಕು. ಆಗ ಮಾತ್ರ ಶಿಕ್ಷಣ ಪರಿಪೂರ್ಣತೆಯನ್ನು ಪಡೆದುಕೊಳ್ಳುತ್ತದೆ ಎಂದು ಬೆಂಗಳೂರು ವಿವಿ ಕುಲಪತಿ ಡಾ. ಕೆ.ಆರ್.ವೇಣುಗೋಪಾಲ್ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ಜಯನಗರದ ನ್ಯಾಷನಲ್ ಪದವಿ ಕಾಲೇಜಿನಲ್ಲಿ ನಡೆದ ಒಂಬತ್ತನೆಯ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಶ್ರೇಷ್ಠ ದರ್ಜೆಯ ಫಲ ಪ್ರಾಪ್ತಿ ಆಕಸ್ಮಿಕವಲ್ಲ. ಅದೊಂದು ನಿತ್ಯ ನಿರಂತರ ಪ್ರಕ್ರಿಯೆ. ದೇಶೀಯ ಶಿಕ್ಷಣಕ್ಕೆ ಹೆಸರಾದ ನ್ಯಾಷನಲ್ ಕಾಲೇಜು ಈ ಎಲ್ಲ ಮೌಲ್ಯಗಳನ್ನು ಅಳವಡಿಸಿಕೊಂಡು ಆಂತರಿಕ ಅರಿವನ್ನು ವಿಸ್ತರಿಸುವತ್ತ ಹೆಚ್ಚಿನ ಒತ್ತು ನೀಡುತ್ತಿದೆ ಎಂದರು.
ಬಿಎ, ಬಿಎಸ್ಸಿ, ಬಿಸಿಎ, ಬಿಕಾಂ ಮತ್ತು ಸ್ನಾತಕೋತ್ತರ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಒಟ್ಟು 178 ವಿದ್ಯಾರ್ಥಿಗಳಿಗೆ ಪದವಿ ಪತ್ರಗಳನ್ನು ಮತ್ತು ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ನೀಡಿ ಗೌರವಿಸಲಾಯಿತು. ನ್ಯಾಷನಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎ.ಎಚ್.ರಾಮರಾವ್, ಗೌರವ ಕಾರ್ಯದರ್ಶಿಗಳಾದ ಡಾ.ಪಿ.ಸದಾನಂದಮಯ್ಯ, ಪ್ರೊ.ಎಸ್.ಎನ್.ನಾಗರಾಜರೆಡ್ಡಿ. ಪ್ರಾಂಶುಪಾಲ ಡಾ.ಬಿ.ಆರ್.ಪರಿಣೀತಾ, ಉಪಪ್ರಾಂಶುಪಾಲ ಪ್ರೊ.ಎಚ್.ಪುಂಡರೀಕ ಭಟ್ಟ ಉಪಸ್ಥಿತರಿದ್ದರು.