×
Ad

ಅಲ್ಪಸಂಖ್ಯಾತರ ಆಯೋಗಕ್ಕೆ ಶೀಘ್ರವೇ ಅಧ್ಯಕ್ಷರ ನೇಮಕ: ಝಮೀರ್‌ ಅಹ್ಮದ್‌ ಖಾನ್

Update: 2019-01-08 18:36 IST

ಬೆಂಗಳೂರು, ಜ.8: ವಿಧಾನಪರಿಷತ್ ಸದಸ್ಯ ನಸೀರ್‌ ಅಹ್ಮದ್ ಅವರಿಂದ ತೆರವಾಗಿರುವ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಹೊಸಬರನ್ನು ಒಂದು ತಿಂಗಳ ಒಳಗಾಗಿ ನೇಮಕ ಮಾಡಲಾಗುವುದು ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್. ಝಮೀರ್‌ ಅಹ್ಮದ್‌ ಖಾನ್ ತಿಳಿಸಿದರು.

ಮಂಗಳವಾರ ನಗರದ ವಿಶ್ವೇಶ್ವರಯ್ಯ ಗೋಪುರದಲ್ಲಿರುವ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಕಚೇರಿಯಲ್ಲಿ ಅಲ್ಪಸಂಖ್ಯಾತರಿಗಾಗಿ ಸರಕಾರದ ಯೋಜನೆಗಳ ಮಾಹಿತಿ ಒದಗಿಸುವ ಪುಸ್ತಕ ಹಾಗೂ 15 ಅಂಶಗಳ ಕಾರ್ಯಕ್ರಮಗಳ ವಿವರ ಹೊಂದಿರುವ ಉರ್ದು ಭಾಷಾಂತರ ಪ್ರತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಮಿತ್ರ ಪಕ್ಷ ಜೆಡಿಎಸ್ ಪಾಲಾಗಿರುವುದರಿಂದ, ಅದಕ್ಕೆ ಯಾರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂಬುದರ ಕುರಿತು ಆ ಪಕ್ಷದ ಮುಖಂಡರು ತೀರ್ಮಾನ ಮಾಡಲಿದ್ದಾರೆ. ಸದ್ಯಕ್ಕೆ ನನ್ನ ಅಧೀನದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಕಾರ್ಯನಿರ್ವಹಿಸುತ್ತಿದೆ ಎಂದು ಝಮೀರ್‌ ಅಹ್ಮದ್‌ ಖಾನ್ ತಿಳಿಸಿದರು.

ಹೊಸದಿಲ್ಲಿಗೆ ನಿಯೋಗ: ಕೇಂದ್ರ ಸರಕಾರದಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಜಾರಿಗೊಳಿಸಲಾಗಿರುವ ಯೋಜನೆಗಳ ಕುರಿತು ಸಮರ್ಪಕವಾದ ಮಾಹಿತಿ ಸಂಗ್ರಹಿಸಲು ಶೀಘ್ರದಲ್ಲೆ ರಾಜ್ಯದ ಅಲ್ಪಸಂಖ್ಯಾತ ಮುಖಂಡರ ನಿಯೋಗದೊಂದಿಗೆ ಹೊಸದಿಲ್ಲಿಗೆ ಭೇಟಿ ನೀಡಿ, ಸಂಬಂಧಪಟ್ಟ ಸಚಿವರು, ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಅವರು ಹೇಳಿದರು.

ವಿಧಾನಪರಿಷತ್ ಸದಸ್ಯ ಹಾಗೂ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ನಸೀರ್‌ ಅಹ್ಮದ್ ಮಾತನಾಡಿ, ದೇಶದಲ್ಲೆ ಮೊಟ್ಟಮೊದಲ ಬಾರಿಗೆ ಅಲ್ಪಸಂಖ್ಯಾತರ ವ್ಯವಹಾರಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ಸಚಿವ ಸಂಪುಟ ಉಪ ಸಮಿತಿಯನ್ನು ನಮ್ಮ ಅಧಿಕಾರವಧಿಯಲ್ಲಿ ರಚಿಸಲು ಪ್ರಯತ್ನಿಸಿದೆವು ಎಂದರು.

ಸಚಿವ ಸಂಪುಟದ ಉಪ ಸಮಿತಿಯ ಅಧ್ಯಕ್ಷರಾಗಿ ಈ ಹಿಂದೆ ಡಾ.ಜಿ.ಪರಮೇಶ್ವರ್ ಹಾಗೂ ರಮೇಶ್‌ಕುಮಾರ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಇದೀಗ, ಗೃಹ ಸಚಿವರಾಗಿರುವ ಎಂ.ಬಿ.ಪಾಟೀಲ್ ಅಧ್ಯಕ್ಷತೆಯಲ್ಲಿ ಈ ಸಚಿವ ಸಂಪುಟ ಉಪ ಸಮಿತಿಯಿದ್ದು, ಅಲ್ಪಸಂಖ್ಯಾತರಿಗೆ ನ್ಯಾಯ ಒದಗಿಸುವ ಕೆಲಸವಾಗಬೇಕು ಎಂದು ಅವರು ಹೇಳಿದರು.

ನ್ಯಾ.ರಂಗನಾಥ್ ಮಿಶ್ರಾ ಆಯೋಗದ ಶಿಫಾರಸ್ಸಿನಂತೆ ಸರಕಾರದ ನೇಮಕಾತಿಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ.15ರಷ್ಟು ಪಾಲು ಸಿಗಬೇಕು. ಈ ನಿಟ್ಟಿನಲ್ಲಿ ಸರಕಾರಕ್ಕೆ ನಾವು ಶಿಫಾರಸ್ಸುಗಳನ್ನು ಮಾಡಿದ್ದೇವೆ. ಸಚಿವ ಸಂಪುಟ ಉಪ ಸಮಿತಿ ಎದುರು ನಮ್ಮ 24 ಶಿಫಾರಸ್ಸುಗಳು ಮಂಡನೆಯಾಗಿವೆ. ಈ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಸಚಿವರಿಗೆ ನಸೀರ್‌ ಅಹ್ಮದ್ ಮನವಿ ಮಾಡಿದರು.

ಎಸ್ಸಿ-ಎಸ್ಟಿಗಳಿಗೆ ಬಜೆಟ್‌ನಲ್ಲಿ ಹಂಚಿಕೆಯಾಗುವ ಅನುದಾನವನ್ನು ಸಂಪೂರ್ಣವಾಗಿ ಖರ್ಚು ಮಾಡಬೇಕು. ಇಲ್ಲದಿದ್ದಲ್ಲಿ, ಸಂಬಂಧಪಟ್ಟ ಅಧಿಕಾರಿಗಳನ್ನೆ ಹೊಣೆ ಮಾಡಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದಿನ ಸರಕಾರದಲ್ಲಿ ಕಾನೂನು ಮಾಡಲಾಗಿತ್ತು. ಅದೇ ರೀತಿಯ ಕಾನೂನು ಅಲ್ಪಸಂಖ್ಯಾತರ ಕಲ್ಯಾಣಕ್ಕೂ ಅನ್ವಯಿಸುವಂತೆ ಜಾರಿಗೆ ತರಲು ಕ್ರಮ ಕೈಗೊಳ್ಳುವಂತೆ ಅವರು ಕೋರಿದರು.

''ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಶರೀಫ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಜ.18ರಂದು ಸಂಜೆ 5 ಗಂಟೆಗೆ ನಗರದ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ಆಯೋಜಿಸಲಾಗಿದ್ದು, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಝಾದ್, ರಾಜ್ಯಸಭಾ ಸದಸ್ಯ ಅಹ್ಮದ್‌ ಪಟೇಲ್, ಜಮ್ಮು-ಕಾಶ್ಮೀರ ಮಾಜಿ ಸಿಎಂಗಳಾದ ಮೆಹಬೂಬಾ ಮುಫ್ತಿ, ಫಾರೂಕ್ ಅಬ್ದುಲ್ಲಾ, ಸಿಪಿಎಂ ನಾಯಕ ಸೀತಾರಾಂ ಯೆಚೂರಿ, ಮೌಲಾನ ಅರ್ಶದ್ ಮದನಿ, ಮೌಲಾನ ಮಹಮೂದ್ ಮದನಿ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಪ್ರಧಾನ ಕಾರ್ಯದರ್ಶಿ ಮೌಲಾನ ವಲಿ ರಹ್ಮಾನಿ, ಆರ್ಚ್ ಬಿಷಪ್, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸೇರಿದಂತೆ ಇನ್ನಿತರ ಪ್ರಮುಖರು ಪಾಲ್ಗೊಳ್ಳಲಿದ್ದಾರೆ''.
-ನಸೀರ್‌ಅಹ್ಮದ್, ವಿಧಾನಪರಿಷತ್ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News