×
Ad

ಭಾರತ್ ಬಂದ್ ವಿಫಲ: ಜನತೆಗೆ ಬಿಜೆಪಿ ಅಭಿನಂದನೆ

Update: 2019-01-08 18:47 IST

ಬೆಂಗಳೂರು, ಜ. 8: ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ‘ಭಾರತ್ ಬಂದ್’ಗೆ ಮೈತ್ರಿ ಸರಕಾರ ಪರೋಕ್ಷ ಬೆಂಬಲ ನೀಡುವ ಮೂಲಕ ಪ್ರಧಾನಿ ಮೋದಿ ವಿರುದ್ಧ ಜನರನ್ನು ಎತ್ತಿಕಟ್ಟುವ ಷಡ್ಯಂತ್ರವನ್ನು ಜನತೆ ವಿಫಲಗೊಳಿಸಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

 ಮಂಗಳವಾರ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಮಾತನಾಡಿದ ಅವರು, ಎಡಪಕ್ಷಗಳ ನೇತೃತ್ವದ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್ ವಿಫಲವಾಗಿದೆ. ಬಂದ್ ವಿಫಲಗೊಳಿಸಿದ ಜನರನ್ನು ಅಭಿನಂದಿಸುವೆ ಎಂದು ಹೇಳಿದರು.

ಮೀಸಲಾತಿ ವಿಚಾರದಲ್ಲಿ ಪ್ರಧಾನಿ ಮೋದಿ ಅವರ ನಿರ್ಧಾರದಿಂದಾಗಿ ಬಡಜನರ ಆಕ್ರೋಶ ಸಮಾಧಾನ ಸ್ಥಿತಿಗೆ ಬಂದಿದೆ. ಆದರೆ ದುರ್ದೈವದ ಸಂಗತಿ ಎಂದರೆ ಒಂದು ಕಡೆ ಜಾತಿಯನ್ನು ಎತ್ತಿಕಟ್ಟಿ ಹೋರಾಟ ಮಾಡಿಸುವವರೇ ಇದನ್ನು ವಿರೋಧಿಸುತ್ತಿದ್ದಾರೆ ಎಂದು ರವಿ ಟೀಕಿಸಿದರು.

2014 ರಿಂದ ಮೂರು ಜಾತಿ ಹೋರಾಟ ನಡೆದಿದ್ದು, ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯಕ್ಕೆ ಮೀಸಲಾತಿ, ಹರಿಯಾಣದಲ್ಲಿ ಜಾಟ್ ಸಮುದಾಯಕ್ಕೆ ಮತ್ತು ಗುಜರಾತ್‌ನಲ್ಲಿ ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಹೋರಾಟ ನಡೆಸಿದ್ದಾರೆ.

ಅಲ್ಪೇಶ್ ಠಾಕೂರ್ ಹಿಂದುಳಿದ ಸಮುದಾಯದ ನೇತೃತ್ವ ವಹಿಸಿದ್ದರೆ, ಹಾರ್ದಿಕ್ ಪಟೇಲ್ ಪಟೇಲ್ ಸಮುದಾಯದ ನೇತೃತ್ವ ಹಾಗೂ ಜಿಗ್ನೇಶ್ ಮೇವಾನಿ ದಲಿತ ಸಮುದಾಯದ ನೇತೃತ್ವ ವಹಿಸಿ ಹೋರಾಟ ನಡೆಸಿದ್ದರು. ಮೀಸಲಾತಿಗೆ ಆಗ್ರಹಿಸುವ ವೇಳೆ ಪರಸ್ಪರ ವಿರುದ್ಧವಿದ್ದ ಇವರೆಲ್ಲ ಬಿಜೆಪಿ ವಿರುದ್ಧ ಒಗ್ಗೂಡಿದ್ದರು ಎಂದು ಟೀಕಿಸಿದರು.

ಮೋದಿ ನಿರ್ಧಾರವನ್ನು ಸ್ವಾಗತಿಸಬೇಕಿದ್ದ ಇವರೆಲ್ಲರೂ ಇದೀಗ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಜಾತಿ-ಜಾತಿಗಳನ್ನು ಎತ್ತಿಕಟ್ಟಿ ಮೀಸಲಾತಿ ಹೋರಾಟ ಮಾಡುತ್ತಿದ್ದವರಿಗೆ ಈಗ ಪ್ರಧಾನಿ ಮೋದಿ ಉತ್ತರ ಕೊಟ್ಟಿದ್ದಾರೆ. ಅಂಬೇಡ್ಕರ್ ಆಶಯದಂತೆ ಎಲ್ಲ ವರ್ಗದ ಬಡವರಿಗೆ ಮೀಸಲು ಕಲ್ಪಿಸಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News