ಜ.12: ಸ್ಥಾಯಿ ಸಮಿತಿಗೆ ಕರಡು ಸಲ್ಲಿಕೆ; ಫೆಬ್ರವರಿಯಲ್ಲಿ ಬಜೆಟ್ ಮಂಡಿಸುವ ಸಾಧ್ಯತೆ
ಬೆಂಗಳೂರು, ಜ. 8: ಬಿಬಿಎಂಪಿಯ 2019-20 ನೆ ಸಾಲಿನ ಆಯವ್ಯಯ ಕರಡು ಪ್ರತಿಯನ್ನು ನಾಳೆ ಪಾಲಿಕೆಯ ಆಯುಕ್ತರಿಗೆ ಸಲ್ಲಿಸುವ ಸಾಧ್ಯತೆಯಿದ್ದು, ಜ.12 ಕ್ಕೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ ಕರಡು ಸಲ್ಲಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಧಿಕಾರಿಗಳು ನೀಡುವ ಮಾಹಿತಿಯನ್ನಾಧರಿಸಿ ಆಯವ್ಯಯ ಕೋಶವು 2019-20ನೇ ಸಾಲಿನಲ್ಲಿ ಮಾಡಬೇಕಾದ ಹೊಸ ಯೋಜನೆಗಳು, ಅದಕ್ಕೆ ತಗಲುವ ವೆಚ್ಚ, ಬಿಬಿಎಂಪಿಗೆ ಯಾವೆಲ್ಲ ಸಂಪನ್ಮೂಲಗಳಿಂದ ಎಷ್ಟು ಆದಾಯ ಬರಲಿದೆ ಎಂಬೆಲ್ಲ ಮಾಹಿತಿ ಇರುವ ಕರಡು ಆಯವ್ಯಯವನ್ನು ಸಿದ್ಧಪಡಿಸಿ ಆಯುಕ್ತರಿಗೆ ಸಲ್ಲಿಸುತ್ತದೆ. ಕೋಶ ಸಲ್ಲಿಸಿದ ಕರಡು ಆಯವ್ಯಯವನ್ನು ಆಯುಕ್ತರು ಆದಾಯಕ್ಕೆ ತಕ್ಕ ರೀತಿ ಬದಲಾವಣೆ ಮಾಡಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ ಸಲ್ಲಿಸಲಿದ್ದಾರೆ.
ಕೇಂದ್ರ ಮತ್ತು ರಾಜ್ಯ ಬಜೆಟ್ ಮಂಡನೆ ನಂತರ ಮಂಡಿಸಲಾಗುವ ಬಿಬಿಎಂಪಿ ಆಯವ್ಯಯ ಸಿದ್ಧಪಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ. 2018-19ನೇ ಸಾಲಿನ ಬಜೆಟ್‌ನಲ್ಲಿ ಉಳಿದ ಅನುದಾನ, 2019-20ನೇ ಸಾಲಿಗೆ ಬೇಕಾಗುವ ಅನುದಾನಗಳ ಕುರಿತು ಪ್ರತಿ ವಿಭಾಗಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.
ಪಾಲಿಕೆಯು ತನ್ನ ವಾರ್ಷಿಕ ಆಯವ್ಯಯದ ಸಿದ್ಧತೆಗಳನ್ನು ಜನವರಿಯಲ್ಲಿ ಆರಂಭಿಸುತ್ತಾರೆ. ಆದರೆ, ಈ ಬಾರಿ ಲೋಕಸಭೆ ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತಿರುವುದರಿಂದ ತ್ವರಿತವಾಗಿ ಬಜೆಟ್ ಮಂಡನೆಗೆ ಚಿಂತನೆ ನಡೆಸಲಾಗಿದೆ.
ಈ ಸಂಬಂಧ 2018 ಡಿಸೆಂಬರ್‌ನಲ್ಲಿಯೇ ಮುಖ್ಯ ಲೆಕ್ಕಾಧಿಕಾರಿಗಳು ಪಾಲಿಕೆಯ ಎಲ್ಲ ವಿಭಾಗಗಳಿಗೂ ಮುಂದಿನ ಬಜೆಟ್‌ನಲ್ಲಿ ಮಾಡುವ ಖರ್ಚು, ಅನುಷ್ಠಾನಗೊಳಿಸುವ ಹೊಸ ಯೋಜನೆಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದಾರೆ.
ಫೆಬ್ರವರಿಯಲ್ಲಿ ಬಜೆಟ್ ಮಂಡನೆ:
ಬಿಬಿಎಂಪಿಯು ಕೇಂದ್ರ ಮತ್ತು ರಾಜ್ಯ ಸರಕಾರಗಳು ಆಯವ್ಯಯ ಮಂಡಿಸಿದ ಬಳಿಕ ತನ್ನ ಬಜೆಟ್ ಮಂಡನೆ ಮಾಡುವುದು ವಾಡಿಕೆ. ಅದರ ಪ್ರಕಾರ ಫೆ. 8 ರಂದು ರಾಜ್ಯ ಬಜೆಟ್ ಮಂಡನೆಯಾಗುವ ಸಾಧ್ಯತೆ ಇದ್ದು, ಫೆಬ್ರವರಿ 2ನೇ ವಾರದಲ್ಲಿ ಬಿಬಿಎಂಪಿ ಬಜೆಟ್ ಮಂಡನೆಗೆ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ.
ಯಾವೆಲ್ಲ ಅಂಶಗಳ ಬಗ್ಗೆ ಮಾಹಿತಿ?: ಆಯುಕ್ತರು ನೀಡಿರುವ ಆದೇಶದಂತೆ ಬಿಬಿಎಂಪಿ ಪ್ರತಿ ವಿಭಾಗಗಳು, ವಲಯವಾರು ಅಧಿಕಾರಿಗಳು ಹೊಸ ಕಾಮಗಾರಿಗಳ ಕುರಿತು ಮಾಹಿತಿ ನೀಡಬೇಕಿದೆ. ಆಡಳಿತಾತ್ಮಕ ವೆಚ್ಚಗಳಾದ ವೇತನ, ಪಿಂಚಣಿ, ಭತ್ತೆ ಸೇರಿ ಇನ್ನಿತರ ವಿಷಯಗಳಿಗೆ ಎಷ್ಟು ಅನುದಾನ ಮೀಸಲಿಡಬೇಕು, ಸಾರ್ವಜನಿಕರಿಗೆ ಅನುಕೂಲವಾಗುವ ಕಾಮಗಾರಿಗಳು, ತ್ಯಾಜ್ಯ ನಿರ್ವಹಣೆ, ಕಲ್ಯಾಣ ಕಾರ್ಯಕ್ರಮ, ಶಿಕ್ಷಣ, ಆರೊಗ್ಯ ಸಂಬಂಧಿ ಯೊಜನೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.
ಸ್ಥಾಯಿ ಸಮಿತಿಯೇ ಇಲ್ಲ: ಅಧಿಕಾರಿಗಳ ಜತೆಗೆ ಚರ್ಚಿಸಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಬಜೆಟ್ ಪ್ರತಿ ಸಿದ್ಧಪಡಿಸಲಾಗುತ್ತಿದೆ. ಆದರೆ, ಸ್ಥಾಯಿ ಸಮಿತಿಗಳಿಗೆ ಸದಸ್ಯರು ನೇಮಕವಾಗಿದ್ದರೂ ಅಧ್ಯಕ್ಷರು ನೇಮಕವಾಗಿಲ್ಲ. ಹೀಗಾಗಿ, ಅಧ್ಯಕ್ಷರು ಆಯ್ಕೆಯಾಗದಿದ್ದಲ್ಲಿ ಬಜೆಟ್ ಸಿದ್ಧಪಡಿಸುವ ಹೊಣೆ ಹಾಗೂ ಅದನ್ನು ಮಂಡಿಸುವ ಹೊಣೆಯೂ ಮೇಯರ್ ಹಾಗೂ ಆಯುಕ್ತರು ಹೊರಬೇಕಾಗುತ್ತದೆ.