×
Ad

ಲೋಕಸಭಾ ಚುನಾವಣೆಗೆ ಪಕ್ಷ ಸಂಘಟನೆ: ಕೆ.ಸಿ.ವೇಣುಗೋಪಾಲ್

Update: 2019-01-08 20:48 IST

ಬೆಂಗಳೂರು, ಜ.8: ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ, ಬಲವರ್ಧನೆಗೊಳಿಸಲು ಇಂದು ನಡೆಸಲಾಗಿರುವ ಸಭೆ ತುಂಬಾ ಮಹತ್ವದ್ದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ತಿಳಿಸಿದರು.

ಮಂಗಳವಾರ ನಗರದ ಗುರುನಾನಕ್ ಭವನದಲ್ಲಿ ಆಯೋಜಿಸಲಾಗಿದ್ದ ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಸಭೆಯ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಲೋಕಸಭೆಗೆ ಚುನಾವಣೆ ಘೋಷಣೆಯಾಗಲು ಇನ್ನು ಕೇವಲ ಎರಡು ತಿಂಗಳು ಮಾತ್ರ ಬಾಕಿಯಿದೆ. ಪಕ್ಷವನ್ನು ತಳಮಟ್ಟದಿಂದ ಯಾವ ರೀತಿ ಸಂಘಟಿಸಬೇಕು, ಜನಸಾಮಾನ್ಯರ ಬಳಿ ಯಾವ ಕಾರ್ಯಕ್ರಮಗಳ ಮೂಲಕ ಹೋಗಬೇಕು ಎಂಬುದುರ ಕುರಿತು ಚರ್ಚೆ ಮಾಡಿದ್ದೇವೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಜ.26 ರಿಂದ ಫೆ.15ರವರೆಗೆ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದೇವೆ. ಪ್ರತಿಯೊಬ್ಬರ ಬಳಿಯೂ ನಮ್ಮ ಕಾರ್ಯಕರ್ತರು ಹೋಗಿ, ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರದ ವೈಫಲ್ಯಗಳು ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಯಾವ ಕಾರಣಗಳಿಗಾಗಿ ಮತ್ತೆ ಅಧಿಕಾರಕ್ಕೆ ತರಬೇಕು ಎಂಬುದರ ಕುರಿತು ಮಾಹಿತಿ ಒದಗಿಸಲಿದ್ದಾರೆ ಎಂದು ವೇಣುಗೋಪಾಲ್ ಹೇಳಿದರು.

ಇನ್ನೆರಡು ವಾರಗಳಲ್ಲಿ ಬೂತ್, ಬ್ಲಾಕ್ ಹಾಗೂ ಜಿಲ್ಲಾಮಟ್ಟದ ಸಮಿತಿಗಳನ್ನು ಬಲವರ್ಧನೆಗೊಳಿಸಲಾಗುವುದು. ಪಕ್ಷ ಸಂಘಟನೆ ಎಲ್ಲಿ ಪ್ರಬಲವಾಗಿಲ್ಲವೋ ಅಂತಹ ಕಡೆ ವಿಶೇಷ ಗಮನ ಹರಿಸಿ, ಹೊಸ ಸಮಿತಿಗಳನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ನಿಗಮ-ಮಂಡಳಿಗಳ ನೇಮಕಾತಿ ವಿಚಾರದಲ್ಲಿ ಇರುವ ಗೊಂದಲವನ್ನು ನಾವು ಬಗೆಹರಿಸಿಕೊಳ್ಳುತ್ತೇವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳನ್ನು ಗೆಲ್ಲಬೇಕು ಎಂಬುದು ನಮ್ಮ ಗುರಿ. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಿಂದ ನಾವು ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News