ಪ್ರಧಾನಿ ಮೋದಿಗೆ ‘ಸುಪ್ರೀಂ’ ಕಪಾಳ ಮೋಕ್ಷ: ಕೆ.ಸಿ.ವೇಣುಗೋಪಾಲ್
ಬೆಂಗಳೂರು, ಜ.8: ಸಿಬಿಐ ಮುಖ್ಯಸ್ಥರನ್ನು ರಾತ್ರೋರಾತ್ರಿ ವಜಾಗೊಳಿಸಿದ್ದ ಕೇಂದ್ರ ಸರಕಾರದ ತೀರ್ಮಾನವನ್ನು ರದ್ದುಗೊಳಿಸುವ ಮೂಲಕ ಸುಪ್ರೀಂಕೋರ್ಟ್, ಪ್ರಧಾನಿ ನರೇಂದ್ರಮೋದಿಯ ಮುಖಕ್ಕೆ ನೇರವಾಗಿ ಕಪಾಳ ಮೋಕ್ಷ ಮಾಡಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹೇಳಿದರು.
ಮಂಗಳವಾರ ನಗರದ ಗುರುನಾನಕ್ ಭವನದಲ್ಲಿ ಆಯೋಜಿಸಲಾಗಿದ್ದ ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಸಭೆಯ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ಕುರಿತು ನಾವು ಕಳೆದ ಮೂರು ದಿನಗಳಿಂದ ಲೋಕಸಭೆಯಲ್ಲಿ ಚರ್ಚೆ ಮಾಡುತ್ತಿದ್ದೇವೆ. ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, ಸದನದಲ್ಲಿ ಕೇಳಿರುವ ಯಾವ ಪ್ರಶ್ನೆಗೂ ಕೇಂದ್ರ ಸರಕಾರಕ್ಕೆ ಉತ್ತರಿಸಲು ಸಾಧ್ಯವಾಗಿಲ್ಲ ಎಂದು ಅವರು ತಿಳಿಸಿದರು.
ಎಚ್‌ಎಎಲ್ ಸಂಸ್ಥೆಗೆ ಒಂದು ಲಕ್ಷ ಕೋಟಿ ರೂ.ಗಳನ್ನು ನೀಡಿರುವುದಾಗಿ ರಕ್ಷಣಾ ಸಚಿವೆ ಸಂಸತ್ತಿನಲ್ಲಿ ಹೇಳಿಕೆ ನೀಡುತ್ತಾರೆ. ಆನಂತರ, ಒಂದು ಲಕ್ಷ ಕೋಟಿ ರೂ.ಅಲ್ಲ, 26 ಸಾವಿರ ಕೋಟಿ ರೂ.ನೀಡಿರುವುದಾಗಿ ಹೇಳುತ್ತಾರೆ. ಜನರನ್ನು ದಿಕ್ಕು ತಪ್ಪಿಸಲು ಇಂತಹ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ವೇಣುಗೋಪಾಲ್ ಹೇಳಿದರು.
ಕಳೆದ ಎರಡು ದಶಕಗಳಲ್ಲಿ ಮೊಟ್ಟಮೊದಲ ಬಾರಿಗೆ ಸಾಲ ಪಡೆದು ಸಿಬ್ಬಂದಿಗೆ ಸಂಬಳ ನೀಡುವ ಪರಿಸ್ಥಿತಿ ಬಂದಿದೆ ಎಂದು ಎಚ್‌ಎಎಲ್ ಅಧ್ಯಕ್ಷರು ಸಾರ್ವಜನಿಕವಾಗಿ ನೀಡಿರುವ ಹೇಳಿಕೆ ಎಲ್ಲರಿಗೂ ಗೊತ್ತಿದೆ. ಎಚ್‌ಎಎಲ್ ಬಳಿಯಿದ್ದ 7 ಸಾವಿರ ಕೋಟಿ ರೂ.ಗಳ ಆವರ್ತನಿಧಿಯನ್ನು ಕೇಂದ್ರ ಸರಕಾರ ಪಡೆದುಕೊಂಡಿದೆ. ರಫೇಲ್ ಒಪ್ಪಂದವು ಭ್ರಷ್ಟಾಚಾರದ ಸ್ಪಷ್ಟ ಪ್ರಕರಣವಾಗಿದೆ ಎಂದು ಅವರು ದೂರಿದರು.
ರಫೇಲ್ ಒಪ್ಪಂದದ ಕುರಿತು ನಾವು ಜಂಟಿ ಸಂಸದೀಯ ಸಮಿತಿ ತನಿಖೆಗೆ ಆಗ್ರಹಿಸುತ್ತಿದ್ದೇವೆ. ಆದರೆ, ಲೋಕಸಭೆಯಲ್ಲಿ ಸ್ಪಷ್ಟ ಬಹುಮತ ಹೊಂದಿರುವ ಬಿಜೆಪಿ ಹಿಂದೇಟು ಹಾಕುತ್ತಿರುವುದೇಕೆ ? ಬಹುಷಃ ಸತ್ಯ ಹೊರಗೆ ಬರುತ್ತದೆ ಎಂಬುದು ಅವರನ್ನು ಕಾಡುತ್ತಿರಬೇಕು ಎಂದು ವೇಣುಗೋಪಾಲ್ ಹೇಳಿದರು.
ತನ್ನನ್ನು ಚೌಕಿದಾರ್ ಎನ್ನುತ್ತಿದ್ದ ಪ್ರಧಾನಿಯ ಪಾರದರ್ಶಕತೆ ಬಗ್ಗೆ ಜನ ಪ್ರಶ್ನಿಸುತ್ತಿದ್ದಾರೆ. ಎಚ್‌ಎಎಲ್ ಅನ್ನು ನಿರ್ಲಕ್ಷಿಸುವ ಮೂಲಕ ಕೇಂದ್ರ ಸರಕಾರವು ಕರ್ನಾಟಕದ ಗೌರವಕ್ಕೆ ಧಕ್ಕೆ ತಂದಿದೆ. ಈ ವಿಷಯವನ್ನು ಕಾಂಗ್ರೆಸ್ ಸುಮ್ಮನೆ ಬಿಡುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಇದು ಪ್ರಮುಖ ಪ್ರಚಾರ ವಿಷಯವಾಗಿರಲಿದೆ ಎಂದು ಅವರು ಹೇಳಿದರು.
ನಾವು ಜನರ ಮುಂದೆ ಈ ವಿಷಯವನ್ನು ತೆಗೆದುಕೊಂಡು ಹೋಗುತ್ತೇವೆ. ವಾಸ್ತವ ಪರಿಸ್ಥಿತಿಯನ್ನು ವಿವರಿಸುತ್ತೇವೆ. ಕೇಂದ್ರ ಸರಕಾರದ ಬಳಿ ರಫೇಲ್ ಕುರಿತು ಎಲ್ಲ ಅಂಕಿ ಅಂಶಗಳು ಇದ್ದರೆ ಯಾಕೆ ಭಯ ಪಡುತ್ತಿದ್ದಾರೆ. ಬೋಫೋರ್ಸ್, 2 ಜಿ ತರಂಗಾಂತರ ಹಂಚಿಕೆಯ ಕುರಿತು ಜಂಟಿ ಸಂಸದೀಯ ಸಮಿತಿಯಿಂದ ತನಿಖೆಯಾಗಿದೆ ತಾನೇ ಎಂದು ವೇಣುಗೋಪಾಲ್ ಪ್ರಶ್ನಿಸಿದರು.