ಅನಧಿಕೃತ ವಾಣಿಜ್ಯ ಚಟುವಟಿಕೆ ನಡೆಸುವ ಅಂಗಡಿಗಳಿಗೆ ಬೀಗ: ಡಿಸಿಎಂ ಡಾ.ಜಿ.ಪರಮೇಶ್ವರ್

Update: 2019-01-08 16:01 GMT

ಬೆಂಗಳೂರು, ಜ.8: ವಸತಿ ಪ್ರದೇಶಗಳಲ್ಲಿ ಹಾಗೂ ಅನಧಿಕೃತವಾಗಿ ವಾಣಿಜ್ಯ (ಕಮರ್ಷಿಯಲ್) ಚಟುವಟಿಕೆ ನಡೆಸುವವರ ಪರವಾನಿಗೆ ರದ್ದುಗೊಳಿಸಿ ಕೂಡಲೇ ಅಂತಹ ಅಂಗಡಿ(ಶಾಪ್‌ಗಳು)ಗಳಿಗೆ ಬೀಗ ಹಾಕುವಂತೆ ಅಧಿಕಾರಿಗಳಿಗೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ಆದೇಶಿಸಿದರು.

ಮಂಗಳವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ನಡೆಸುವವರ ಟ್ರೇಡ್ ಲೈಸನ್ಸ್ ರದ್ದು, ಪಾದಚಾರಿ ಒತ್ತುವರಿ ತೆರವು ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಬಿಡಿಎ, ಬಿಬಿಎಂಪಿ, ಬೆಸ್ಕಾಂ, ಬೆಂಗಳೂರು ಜಲಮಂಡಳಿ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿದರು.

ಟ್ರೇಡ್ ಲೈಸನ್ಸ್ ಇಲ್ಲದ ಅಂಗಡಿಗಳಿಗೆ ವಿದ್ಯುತ್ ಹಾಗೂ ನೀರಿನ ಸಂಪರ್ಕ ನೀಡಿರುವ ಬಗ್ಗೆಯೂ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಅವರು, ಇನ್ನು ಮುಂದೆ ಲೈಸನ್ಸ್ ಇಲ್ಲದವರಿಗೆ ಯಾವುದೇ ಸಂಪರ್ಕ ಕೊಡುವಂತಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಅನಧಿಕೃತ ಶಾಪ್‌ಗಳು, ಬಾರ್-ರೆಸ್ಟೋರೆಂಟ್, ಪಬ್‌ಗಳು ತೆರೆದಿರಬಾರದು ಎಂದು ಅಧಿಕಾರಿಗಳಿಗೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬಹುತೇಕ ರಸ್ತೆಗಳ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡು ಅಂಗಡಿ ಇಟ್ಟಿದ್ದಾರೆ. ಎಷ್ಟು ಪಾದಚಾರಿ ಮಾರ್ಗಗಳು ಒತ್ತುವರಿಯಾಗಿವೆ ಎಂಬ ಸೂಕ್ತ ಮಾಹಿತಿ ಕೂಡ ಇಲ್ಲ. ಹೀಗಾಗಿ ಕೂಡಲೇ ಇದರ ಸಮೀಕ್ಷೆ ನಡೆಸಿ, ಒತ್ತುವರಿಗೊಂಡ ಪಾದಚಾರಿ ಮಾರ್ಗವನ್ನು ತೆರವುಗೊಳಿಸುವ ಕೆಲಸ ಪ್ರಾರಂಭಿಸಿ ಎಂದು ಪರಮೇಶ್ವರ್ ಸೂಚನೆ ನೀಡಿದರು.

ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಭಿಕ್ಷಾಟನೆ ಮಾಡುವವರನ್ನು ವಶಕ್ಕೆ ಪಡೆದು ಅವರನ್ನು ನಿರಾಶ್ರಿತ ಕೇಂದ್ರಕ್ಕೆ ಸೇರಿಸಿ. ಸಮಾಜ ಕಲ್ಯಾಣ ಇಲಾಖೆಯವರು ಈ ಕೆಲಸ ಮಾಡಲಿದ್ದಾರೆ. ಕೂಡಲೇ ಅವರ ಸಹಕಾರದಿಂದ ಭಿಕ್ಷಾಟನೆ ಮಾಡುವವರನ್ನು ವಶಕ್ಕೆ ಪಡೆಯುವ ಕೆಲಸವಾಗಲಿ ಎಂದು ಅವರು ಹೇಳಿದರು. ಅನಧಿಕೃತ ಆಪ್ಟಿಕಲ್ ಫೈಬರ್ ಕೇಬಲ್‌ಗಳ ತೆರವು ಕಾರ್ಯ ಮುಂದುವರೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, 8 ಸಾವಿರ ಕಿ.ಮೀ. ಮಾರ್ಗದಲ್ಲಿ ಅನಧಿಕೃತ ಕೇಬಲ್ ತೆರವುಗೊಳಿಸಲಾಗಿದೆ. ಈ ಕೆಲಸ ಮುಂದುವರೆಸಿ ಎಂದರು.

ನಗರದಲ್ಲಿ ಪ್ಲಾಸ್ಟಿಕ್ ಬ್ಯಾನ್ ಮಾಡಿದ್ದರೂ, ಕೆಲ ಕೈಗಾರಿಕೆಗಳು ಪ್ಲಾಸ್ಟಿಕ್ ತಯಾರಿಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಕೆರೆಗಳಿಗೆ ಕೊಳಚೆ ನೀರನ್ನು ಹರಿಬಿಡುವ ಕೈಗಾರಿಕೆ, ಕಾರ್ಖಾನೆಗಳಿಗೆ ಬೀಗ ಹಾಕಿಸಿ. ನೋಟಿಸ್ ನೀಡಿದರೆ ಯಾವುದೇ ಪ್ರಯೋಜನವಿಲ್ಲ. ರಾತ್ರೋರಾತ್ರಿ ಮಾಲಿನ್ಯನಿಯಂತ್ರಣ ಮಂಡಳಿಯವರು ಪೊಲೀಸರ ಸಹಕಾರದೊಂದಿಗೆ ಕೈಗಾರಿಕೆಗಳಿಗೆ ಬೀಗ ಹಾಕಿಸಿದರೆ ಕೊಳಚೆ ನೀರನ್ನು ಕೆರೆಗೆ ಬಿಡುವುದನ್ನು ನಿಯಂತ್ರಣಕ್ಕೆ ತರಬಹುದು ಎಂದು ಪರಮೇಶ್ವರ್ ಹೇಳಿದರು.

ಧೂಮಪಾನ ನಿಷೇಧ ಕಾಯ್ದೆ ಅನ್ವಯ ನಗರದಲ್ಲಿ ಕಟ್ಟುನಿಟ್ಟಾಗಿ ಧೂಮಪಾನವನ್ನು ಸಾರ್ವಜನಿಕ ಸ್ಥಳದಲ್ಲಿ ನಿಷೇಧವಾಗಬೇಕು. ಈ ಸಂಬಂಧ ಜಾಗೃತಿ ಕಾರ್ಯಕ್ರಮ ಹೆಚ್ಚಿಸುವಂತೆ ಸೂಚಿಸಿದ ಅವರು, ಕೆಳಮಹಡಿಯನ್ನು ವಾಹನ ನಿಲ್ದಾಣಕ್ಕೆ ಬಳಸದೇ ಆ ಜಾಗದಲ್ಲಿ ಇತರೆ ವಾಣಿಜ್ಯ ಚಟುವಟಿಕೆ ನಡೆಸುತ್ತಿರುವುದನ್ನು ರದ್ದುಗೊಳಿಸಿ ಕ್ರಮ ಕೈಗೊಳ್ಳಿ ಎಂದರು. ಸಭೆಯಲ್ಲಿ ಮೇಯರ್ ಗಂಗಾಂಬಿಕೆ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News