ಶಬರಿಮಲೆಯಲ್ಲಿ ಆನೆ ದಾಳಿಗೆ ಯಾತ್ರಾರ್ಥಿ ಬಲಿ

Update: 2019-01-09 15:13 GMT

ಶಬರಿಮಲೆ, ಜ. 9: ಶಬರಿಮಲೆಗೆ ಕಾಡು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯಾತ್ರಿಯೊಬ್ಬರು ಕರಿಮಲೆಯಲ್ಲಿ ಮಂಗಳವಾರ ರಾತ್ರಿ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ. ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಯಾತ್ರಿಯನ್ನು ಪರಮಶಿವಂ (35) ಎಂದು ಗುರುತಿಸಲಾಗಿದೆ.

ಅವರು ತಮಿಳುನಾಡಿನ ಸೇಲಂ ಜಿಲ್ಲೆಯ ಪಾಲಪಟ್ಟಿ ಪೂರ್ವ ಬೀದಿಯ ನಿವಾಸಿ. ಅವರ 10 ವರ್ಷದ ಪುತ್ರ ಕಾಡಾನೆ ದಾಳಿಯಿಂದ ಪಾರಾಗಿದ್ದಾನೆ ಎಂದು ಪಂಬಾ ಅರಣ್ಯದ ರೇಂಜ್ ಅಧಿಕಾರಿ ಎಂ. ಅಜೀಶ್ ಹೇಳಿದ್ದಾರೆ. ತಂದೆ ಹಾಗೂ ಮಗ 15 ಮಂದಿ ಯಾತ್ರಾರ್ಥಿಗಳ ಜೊತೆಗೆ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಆಗಮಿಸಿದ್ದರು. ಎರಡು ದಿನಗಳ ಹಿಂದೆ ಅವರು ಯಾತ್ರೆ ಆರಂಭಿಸಿದ್ದರು ಮುಕ್ಕುಝಿಯಿಂದ 3 ಕಿ.ಮೀ. ದೂರದಲ್ಲಿರುವ ಕರಿಯಿಲಮತೋಡು ಹಾಗೂ ಕರಿಮಲೆ ನಡುವಿನ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಆನೆ ದಾಳಿ ನಡೆಸುತ್ತಿರುವ ಸಂದರ್ಭ ಯಾತ್ರಿಗಳು ತಾತ್ಕಾಲಿಕವಾಗಿ ರಚಿಸಲಾಗಿದ್ದ ಸಣ್ಮ ಅಂಗಡಿಯಲ್ಲಿ ಆಶ್ರಯ ಪಡೆದುಕೊಂಡಿದ್ದರು. ಆನೆ ದಾಳಿ ನಡೆಸುವಾಗ ಅವರು ಆ ಅಂಗಡಿಯಿಂದ ಪರಾರಿಯಾಗಿದ್ದರು. ಆದರೆ, ಪರಮಶಿವಂ ಅವರಿಗೆ ಓಡಲು ಸಾಧ್ಯವಾಗಿರಲಿಲ್ಲ. ಬೊಬ್ಬೆ ಕೇಳಿ ಅಯ್ಯಪ್ಪ ಸೇವಾ ಸಂಘದ ಕಾರ್ಯಕರ್ತರು ಅರಣ್ಯಾಧಿಕಾರಿಯೊಂದಿಗೆ ಸ್ಥಳಕ್ಕೆ ಧಾವಿಸಿದ್ದರು. ಆನೆ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಪರಮಶಿವಂ ಅವರನ್ನು ಮುಂಡಕ್ಕಾಯಂ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲು ಕೊಂಡೊಯ್ಯಲಾಯಿತು. ಆದರೆ, ಅವರು ದಾರಿ ಮಧ್ಯೆ ಮೃತಪಟ್ಟರು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News