ಆರೆಸ್ಸೆಸ್ ಕಚೇರಿಗೆ ಪೊಲೀಸ್ ದಾಳಿ: ತಲವಾರು, ಬಾಂಬ್ ತಯಾರಿಗೆ ಬಳಸುವ ರಾಸಾಯನಿಕ ಪತ್ತೆ

Update: 2019-01-10 10:39 GMT

ತಿರುವನಂತಪುರಂ, ಜ.10: ಇತ್ತೀಚೆಗೆ ಶಬರಿಮಲೆ ಕರ್ಮ ಸಮಿತಿ ಕರೆ ನೀಡಿದ್ದ ಹರತಾಳದ ಸಂದರ್ಭ ಕೇರಳದ ನೆಡುಮಂಗಡ್ ಪೊಲೀಸ್ ಠಾಣೆಗೆ ಬಾಂಬ್ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಲ್ಲಿನ ಆರೆಸ್ಸೆಸ್ ಕಚೇರಿಯ ಮೇಲೆ ದಾಳಿ ನಡೆಸಿದ್ದಾರೆ. ಈ ಸಂದರ್ಭ  ಹಲವಾರು ಕತ್ತಿ, ತಲವಾರು ಹಾಗೂ ಕಚ್ಛಾ ಬಾಂಬ್ ತಯಾರಿಯಲ್ಲಿ ಬಳಸಲಾಗುವ ಹೈಡ್ರೋಜನ್ ಪೆರಾಕ್ಸೈಡ್  ರಾಸಾಯನಿಕವನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಪೊಲೀಸ್ ಠಾಣೆ ಮೇಲಿನ ದಾಳಿ ಪ್ರಕರಣದ ಆರೋಪಿ ಪ್ರವೀಣ್ ಎಂಬಾತ ಇದೇ ಕಚೇರಿಯಲ್ಲಿ ಅಡಗಿಕೊಂಡಿದ್ದ ಎಂಬುದಕ್ಕೆ ಪೊಲೀಸರು ಪುರಾವೆಯನ್ನೂ ಸಂಗ್ರಹಿಸಿದ್ದಾರೆ. ಆತನಿಗೆ ಕಳುಹಿಸಲಾಗಿದ್ದ ಕೊರಿಯರ್ ನ ರಶೀದಿಯನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಆತ ಆರೆಸ್ಸೆಸ್ ಕಚೇರಿಯಲ್ಲಿ ಅಡಗಿಕೊಂಡಿದ್ದಾನೆಂಬ ಮಾಹಿತಿಯ ಹಿನ್ನೆಲೆಯಲ್ಲಿ ದಾಳಿ ನಡೆದಿತ್ತು. ಹರತಾಳದ ದಿನ ನೆಡುಮಂಗಡ್ ಪೊಲೀಸ್ ಠಾಣೆಯತ್ತ ನಾಲ್ಕು ಬಾಂಬುಗಳನ್ನು ಎಸೆಯಲಾಗಿತ್ತು. ಈ ಸಂದರ್ಭ ಅಲ್ಲಿದ್ದ ಪೊಲೀಸ್ ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿ ಓಡಬೇಕಾಗಿ ಬಂದಿತ್ತು. ಸಿಸಿಟಿವಿ ದೃಶ್ಯಾವಳಿಯಲ್ಲಿ ಪ್ರವೀಣ್ ಬಾಂಬ್ ಎಸೆಯುತ್ತಿರುವುದು ಕಂಡು ಬಂದಿತ್ತು. ತಲೆಮರೆಸಿಕೊಂಡಿರುವ ಆರೋಪಿಯನ್ನು ಇನ್ನೂ ಪತ್ತೆ ಹಚ್ಚಲಾಗಿಲ್ಲ.

ಪೊಲೀಸ್ ಠಾಣೆಯ ಸಮೀಪ ಕಚ್ಛಾ ಬಾಂಬ್ ಎಸೆದಿದ್ದ ಎನ್. ನಿಶಾಂತ್ ಎಂಬ ಆರೆಸ್ಸೆಸ್ ಕಾರ್ಯಕರ್ತನನ್ನು ಈ ಹಿಂದೆ ಪೊಲೀಸರು ಬಂಧಿಸಿದ್ದರು. ಪ್ರತಿಭಟನೆ ವೇಳೆ ಪೊಲೀಸ್ ಜೀಪನ್ನು ಸುತ್ತುವರಿದಿದ್ದ ಬಿಜೆಪಿ ಕಾರ್ಯಕರ್ತ ಪಿ. ಪ್ರತೀಶ್ ಎಂಬಾತನನ್ನು ಕೂಡ ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News