ರಾಜಧಾನಿಯಲ್ಲಿ ತರಕಾರಿಗಳ ಬೆಲೆ ದಿಢೀರ್ ಏರಿಕೆ

Update: 2019-01-10 15:47 GMT

ಬೆಂಗಳೂರು, ಜ.10: ರಾಜಧಾನಿಯಲ್ಲಿ ತರಕಾರಿಗಳ ಬೆಲೆ ದಿಢೀರ್ ಎಂದು ಏರಿಕೆಯಾಗಿದ್ದು, ಈರುಳ್ಳಿ, ಆಲೂಗಡ್ಡೆ ಬೆಲೆ ಕಡಿಮೆಯಾಯಿತೆಂದು ನಿಟ್ಟುಸಿರು ಬಿಡುತ್ತಿದ್ದ ಜನತಗೆ ಟೊಮ್ಯಾಟೊ ಬೆಲೆ ಚಳಿಯಲ್ಲೂ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ.

ಕೆಜಿಗೆ ಹತ್ತರಿಂದ ಇಪ್ಪತ್ತು ರೂ.ಗೆ ಸಿಗುತ್ತಿದ್ದ ಟೊಮ್ಯಾಟೋ ಈಗ 50 ರಿಂದ 80ರೂ. ದಾಟಿದೆ. ಮಾರುಕಟ್ಟೆಗೆ ಉತ್ತಮ ಟೊಮ್ಯಾಟೋ ಬರುತ್ತಿಲ್ಲ. ಬರುತ್ತಿರುವ ಟೊಮ್ಯಾಟೋ ಬೆಲೆ ಗಗನಮುಖಿಯಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಟೊಮ್ಯಾಟೋ ಸಿಗದೆ ಜನ ಪರದಾಡುತ್ತಿದ್ದಾರೆ.

ರೈತಾಪಿ ವರ್ಗದವರಿಗೆ ಬಂಪರ್ ಬೆಲೆ ಸಿಗುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ. ಆದರೆ, ಫಸಲು ಕೂಡ ಸರಿಯಾಗಿ ಇಲ್ಲ. ಸಾಕಷ್ಟು ಚಳಿ ಇರುವುದರಿಂದ ಟೊಮ್ಯಾಟೋ ಗಿಡದಲ್ಲಿ ಸರಿಯಾಗಿ ಬೆಳೆ ಬರುತ್ತಿಲ್ಲ. ಇದೂ ಒಂದು ಕಾರಣವಾದರೆ, ಕಳೆದ ಮೂರ್ನಾಲ್ಕು ಸಂದರ್ಭಗಳಲ್ಲಿ ಸರಿಯಾದ ಬೆಲೆ ಸಿಗದೆ ರೈತರು ಟೊಮ್ಯಾಟೋ ಬೆಳೆಯುವುದನ್ನು ಕಡಿಮೆ ಮಾಡಿದ್ದಾರೆ. ಹಾಗಾಗಿ ಮಾರುಕಟ್ಟೆಗೆ ಹೆಚ್ಚಿನ ಬೆಳೆ ಬರದ ಕಾರಣ ಬೆಲೆ ಹೆಚ್ಚಾಗಿದೆ ಎಂದು ವರ್ತಕರು ಹೇಳಿದ್ದಾರೆ.

ಅದೇನೇ ಇರಲಿ ಬೆಲೆ ಏರಿಕೆ ಬರೆ ಮಾತ್ರ ಜನರನ್ನು ತಟ್ಟುತ್ತಿದೆ. ಇದಿಷ್ಟೇ ಅಲ್ಲದ ಇನ್ನಿತರ ತರಕಾರಿಗಳ ಬೆಲೆಯೂ ಕೂಡ ಏರಿಕೆಯಾಗಿದೆ. ಬೀನ್ಸ್ 50 ರಿಂದ 60ರೂ., ಕ್ಯಾರೆಟ್ 40 ರಿಂದ 50ರೂ., ಅವರೆಕಾಯಿ 50ರೂ., ಬೆಂಡೆಕಾಯಿ 80ರೂ., ಶುಂಠಿ 140 ರಿಂದ 160ರೂ., ನುಗ್ಗೆಕಾಯಿ 120 ರಿಂದ 150ರೂ., ಬಟಾಣಿ 40 ರಿಂದ 50ರೂ. ಒಟ್ಟಾರೆ ಕಳೆದ ವಾರ ಅಗ್ಗವಾಗಿ ಸಿಗುತ್ತಿದ್ದ ತರಕಾರಿಗಳ ಬೆಲೆ ಈಗ ಇದ್ದಕ್ಕಿದ್ದಂತೆ ಏರಿಕೆಯಾಗಿ ಗ್ರಾಹಕರಿಗೆ ಬಿಸಿ ಮುಟ್ಟಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News