×
Ad

ಬೆಂಗಳೂರು ಉಪನಗರ ರೈಲು ಯೋಜನೆ: ನಾಲ್ಕು ಕಾರಿಡಾರ್‌ಗಳ ನಿರ್ಮಾಣಕ್ಕೆ ಸಂಪುಟ ಸಭೆ ಒಪ್ಪಿಗೆ

Update: 2019-01-10 21:33 IST

ಬೆಂಗಳೂರು, ಜ.10: ಬೆಂಗಳೂರು ಉಪನಗರ ರೈಲು ಯೋಜನೆಯಡಿಯಲ್ಲಿ ರೈಟ್ಸ್ ಸಂಸ್ಥೆ ಅಧ್ಯಯನ ನಡೆಸಿ ಸರಕಾರಕ್ಕೆ ಸಲ್ಲಿಸಿರುವ ಕಾರ್ಯಸಾಧು ವರದಿಯ ಅನ್ವಯ ನಾಲ್ಕು ಕಾರಿಡಾರ್‌ಗಳನ್ನು ಅಂದಾಜು 23,093 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲು ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ತಿಳಿಸಿದರು.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಕಾರಿಡಾರ್-1(ಕೆಂಗೇರಿ-ಕೆಎಸ್‌ಆರ್ ಬೆಂಗಳೂರು-ಬೆಂಗಳೂರು ಕಂಟೋನ್ಮೆಂಟ್-ಬೈಯಪ್ಪನಹಳ್ಳಿ-ಕೃಷ್ಣರಾಜಪುರಂ-ವೈಟ್‌ಫೀಲ್ಡ್) 35.47 ಕಿ.ಮೀ, ಕಾರಿಡಾರ್-2(ಕೆಎಸ್‌ಆರ್ ಬೆಂಗಳೂರು- ಯಶವಂತಪುರ- ಲೊಟ್ಟೆಗೊಲ್ಲಹಳ್ಳಿ- ಕೊಡಿಗೇಹಳ್ಳಿ-ಯಲಹಂಕ-ರಾಜಾನುಕುಂಟೆ) 24.88 ಕಿ.ಮೀ ಮಾರ್ಗ ಇರಲಿದೆ ಎಂದು ಅವರು ಹೇಳಿದರು.

ಕಾರಿಡಾರ್-3(ನೆಲಮಂಗಲ-ಚಿಕ್ಕಬಾಣಾವರ-ಯಶವಂತಪುರ/ಮತ್ತೀಕೆರೆ-ಲೊಟ್ಟೆಗೊಲ್ಲಹಳ್ಳಿ-ಹೆಬ್ಬಾಳ-ಬಾಣಸವಾಡಿ-ಬೈಯಪ್ಪನಹಳ್ಳಿ) 38.94 ಕಿ.ಮೀ, ಕಾರಿಡಾರ್-4(ಹೀಲಲಿಗೆ-ಬೈಯಪ್ಪನಹಳ್ಳಿ-ಚನ್ನಸಂದ್ರ-ಯಲಹಂಕ- ದೇವನಹಳ್ಳಿ) 61.36 ಕಿ.ಮೀ ಮಾರ್ಗವಿರಲಿದೆ ಎಂದು ಬಂಡೆಪ್ಪ ಕಾಶೆಂಪೂರ್ ತಿಳಿಸಿದರು.

23,093 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಉಪನಗರ ರೈಲು ಯೋಜನೆಯ ನಾಲ್ಕು ಕಾರಿಡಾರ್‌ಗಳ ನಿರ್ಮಾಣವಾಗಲಿದ್ದು, ಇದರಲ್ಲಿ ಶೇ.20ರಷ್ಟು ಕೇಂದ್ರ ಸರಕಾರ ಹಾಗೂ ಶೇ.20ರಷ್ಟು ರಾಜ್ಯ ಸರಕಾರದ ಪಾಲು ಇರಲಿದೆ. ಇನ್ನುಳಿದ ಶೇ.60ರಷ್ಟು ಮೊತ್ತವನ್ನು ಸಾಲದ ರೂಪದಲ್ಲಿ ತೆಗೆದುಕೊಳ್ಳಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಅವರು ಹೇಳಿದರು.

ಬೆಂಗಳೂರು ಮೆಟ್ರೋ ಯೋಜನೆಯಡಿಯಲ್ಲಿ ಚಲ್ಲಘಟ್ಟದಲ್ಲಿ ನೂತನವಾಗಿ 140 ಕೋಟಿ ರೂ.ವೆಚ್ಚದಲ್ಲಿ ಮೆಟ್ರೋ ನಿಲ್ದಾಣ ನಿರ್ಮಿಸಲು ಹಾಗೂ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆ.ಆರ್.ಪುರದವರೆಗಿನ ಮೆಟ್ರೋ ಮಾರ್ಗ ನಿರ್ಮಾಣದ ಪರಿಷ್ಕೃತ 4202 ಕೋಟಿ ರೂ.ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ ಎಂದು ಬಂಡೆಪ್ಪ ಕಾಶೆಂಪೂರ್ ತಿಳಿಸಿದರು.

ನಾಗವಾರ ಜಂಕ್ಷನ್‌ನಿಂದ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ರೈಲಿನ 29.1 ಕಿ.ಮೀ ಮಾರ್ಗವನ್ನು ಅಂದಾಜು 5995 ಕೋಟಿ ರೂ.ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದ್ದು, ಇದೀಗ ಮಾರ್ಗವನ್ನು ಹೆಬ್ಬಾಳದ ಮೂಲಕ ಹಾದು ಹೋಗುವಂತೆ ಪರಿಷ್ಕರಿಸಲಾಗಿದ್ದು, ಇದಕ್ಕೆ 10,584.15 ಕೋಟಿ ರೂ.ವೆಚ್ಚವಾಗಲಿದೆ. ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.

ಚಿಕ್ಕಮಗಳೂರು ಜಿಲ್ಲೆ ಮತ್ತು ತಾಲೂಕು ಕೆಸವಿನಮನೆ ಗ್ರಾಮದ ಲ್ಯಾಂಡ್ ಬ್ಯಾಂಕ್‌ನಿಂದ ಒಟ್ಟು 648-38 ಎಕರೆ ಜಮೀನನ್ನು ಶಿವಮೊಗ್ಗ ಜಿಲ್ಲಾ ಸಿಂಗನಮನೆ ಮೀಸಲು ಅರಣ್ಯದಿಂದ ಕುವೆಂಪು ವಿಶ್ವವಿದ್ಯಾನಿಲಯಕ್ಕಾಗಿ ಬಿಡುಗಡೆ ಮಾಡಿದ್ದ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಖಾಸಗಿ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 60 ನಾಡ ಕಚೇರಿಗಳಿಗೆ 10 ಕೋಟಿ ರೂ.ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಿಸಲು, ವಿಜಯಪುರ ಜಿಲ್ಲೆಯ ವಿಜಯಪುರ ತಾಲೂಕಿನ ತಿಕೋಟಾ ಮತ್ತು ಇತರೆ 23 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ 73.62 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಲಾಗಿದೆ.

‘ಬೆಟ್ಟ ಕುರುಬ’ ಜಾತಿಯನ್ನು ಕರ್ನಾಟಕ ರಾಜ್ಯದ ಪರಿಶಿಷ್ಟ ಪಂಗಡ ಪಟ್ಟಿಯ ಕ್ರಮ ಸಂಖ್ಯೆ.16ರಲ್ಲಿ ‘ಕಾಡು ಕುರುಬ’ ಜಾತಿಗೆ ಸಮಾನಾಂತರವಾಗಿ ಸೇರಿಸಲು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರವು ಪ್ರಸ್ತಾಪಿಸಿರುವ ಕುಸನೂರು ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿನ 88 ಎಕರೆ 31 ಗುಂಟೆ ಜಮೀನಿನಲ್ಲಿ ಅಭಿವೃದ್ಧಿ(ವಸತಿ) ಯೋಜನೆ ಕೈಗೊಳ್ಳುವ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಕ್ರಮ ಕೈಗೊಳ್ಳಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಅವರು ಹೇಳಿದರು.

ಆಲಮಟ್ಟಿ ಜಲಾಶಯದ ಪುನಶ್ಚೇತನ ಮತ್ತು ಅಭಿವೃದ್ಧಿ ಯೋಜನೆ (ಡಿಆರ್‌ಐಪಿ)ಯಡಿ ಬರುವ ಆಲಮಟಟಿ ಅಣೆಕಟ್ಟಿನ 1ನೇ ಪ್ಯಾಕೇಜ್‌ಗೆ ಸಂಬಂಧಿಸಿದಂತೆ ಶೇ.34.75ರ ಹೆಚ್ಚುವರಿ ಆರ್ಥಿಕ ಹೊಣೆಯ/ವ್ಯತ್ಯಾಸಗಳ 7.66 ಕೋಟಿ ರೂ.ಮೊತ್ತಕ್ಕೆ ಅನುಮೋದನೆ ನೀಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

 2019-20ನೇ ಸಾಲಿನ ಶೈಕ್ಷಣಿಕ ಸಾಲಿನಲ್ಲಿ 1-10ನೇ ತರಗತಿಯವರೆಗಿನ 44.57 ಲಕ್ಷ ವಿದ್ಯಾರ್ಥಿಗಳಿಗೆ 77.64 ಕೋಟಿ ರೂ.ವೆಚ್ಚದಲ್ಲಿ ಸಮವಸ್ತ್ರ ವಿತರಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅಲ್ಲದೆ, ಮುಂದಿನ ಐದು ವರ್ಷಗಳಲ್ಲಿ 500 ರೈತ ಉತ್ಪಾದಕ ಕೇಂದ್ರಗಳನ್ನು ಆರಂಭಿಸಲು 300 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಬಂಡೆಪ್ಪ ಕಾಶೆಂಪೂರ್ ತಿಳಿಸಿದರು.

ಷಡಕ್ಷರಿ ಸ್ವಾಮಿ ಕೆಪಿಎಸ್ಸಿ ಹಂಗಾಮಿ ಅಧ್ಯಕ್ಷ

ರಾಜ್ಯ ಲೋಕಸೇವಾ ಆಯೋಗ(ಕೆಪಿಎಸ್ಸಿ)ಯ ಹಂಗಾಮಿ ಅಧ್ಯಕ್ಷರನ್ನಾಗಿ ಹಾಲಿ ಸದಸ್ಯ ಷಡಕ್ಷರಿ ಸ್ವಾಮಿಯನ್ನು ನೇಮಕ ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದ್ದು, ನೂತನ ಅಧ್ಯಕ್ಷರ ನೇಮಕದ ವಿಶೇಷಾಧಿಕಾರವನ್ನು ಮುಖ್ಯಮಂತ್ರಿಗೆ ನೀಡಲು ತೀರ್ಮಾನಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News