ನೋಟ್ ಬ್ಯಾನ್ ನಂತರ 2016-17ರಲ್ಲಿ ನಿರುದ್ಯೋಗ ಪ್ರಮಾಣ 4 ವರ್ಷಗಳಲ್ಲೇ ಗರಿಷ್ಠ

Update: 2019-01-11 10:51 GMT

ಹೊಸದಿಲ್ಲಿ, ಜ.11: ನವೆಂಬರ್ 8, 2016ರಲ್ಲಿ ಕೇಂದ್ರ ಸರಕಾರ ನೋಟು ಅಮಾನ್ಯೀಕರಣದ ಕ್ರಮ ಕೈಗೊಂಡ ನಂತರ ದೇಶದಲ್ಲಿ ನಿರುದ್ಯೋಗ ಪ್ರಮಾಣ ನಾಲ್ಕು ವರ್ಷಗಳಲ್ಲಿಯೇ 2016-17ರಲ್ಲಿ ಗರಿಷ್ಠವಾಗಿತ್ತು ಎಂದು ಕಾರ್ಮಿಕ ಬ್ಯುರೋದ ಇನ್ನೂ ಬಿಡುಗಡೆಯಾಗದ ವರದಿಯಲ್ಲಿ ಹೇಳಲಾಗಿದೆ ಎಂದು  Business Standard ವರದಿ ತಿಳಿಸಿದೆ.

ಬ್ಯುರೋದ ಆರನೇ ವಾರ್ಷಿಕ ಉದ್ಯೋಗ-ನಿರುದ್ಯೋಗ ಸಮೀಕ್ಷೆಯಲ್ಲಿ ಕಂಡುಕೊಂಡಂತೆ ನಿರುದ್ಯೋಗ ಪ್ರಮಾಣ 2013-14ರಲ್ಲಿ ಶೇ 3.4 ಆಗಿದ್ದರೆ, 2015-16ರಲ್ಲಿ ಶೇ 3.7 ಆಗಿತ್ತು ಹಾಗೂ 2016-17ರಲ್ಲಿ ಶೇ 3.9ಕ್ಕೆ ಏರಿಕೆಯಾಗಿತ್ತು.

ಆದರೆ ಉದ್ಯೋಗಿಗಳ ಭಾಗವಹಿಸುವಿಕೆ ಪ್ರಮಾಣ (ಲೇಬರ್ ಫೋರ್ಸ್ ಪಾರ್ಟಿಸಿಪೇಶನ್ ರೇಟ್) 2015-16ರಲ್ಲಿ ಶೇ 75.5 ಆಗಿದ್ದರೆ ಅದು 2016-17ರಲ್ಲಿ ಶೇ 76.8ಗೆ ಏರಿಕೆಯಾಗಿತ್ತು. ಉದ್ಯೋಗ ಹೊಂದಿರುವ ಯಾ ಉದ್ಯೋಗ ಅರಸುತ್ತಿರುವ ಉದ್ಯೋಗಸ್ಥ ವಯಸ್ಸಿನ ಜನಸಂಖ್ಯೆಯ ಪ್ರಮಾಣ ಇದಾಗಿದೆ.

ಈ ವರದಿಗೆ ಕೇಂದ್ರ ಕಾರ್ಮಿಕ ಮತ್ತು ಉದ್ಯೊಗ ಸಚಿವ ಸಂತೋಷ್ ಗಾಂಗ್ವರ್ ಅವರು ಡಿಸೆಂಬರ್ 2018ರಲ್ಲಿಯೇ ಅನುಮೋದನೆ ನೀಡಿದ್ದರೂ ಅದರ ಬಿಡುಗಡೆಯನ್ನು ಸರಕಾರ ತಡೆ ಹಿಡಿದಿದೆ ಎನ್ನಲಾಗಿದೆ.

ಲೇಬರ್ ಬ್ಯುರೋ ಇನ್ನು ಉದ್ಯೋಗ ಪ್ರಮಾಣದ ಬಗ್ಗೆ ವರದಿಗಳನ್ನು ಪ್ರಕಟಿಸದು. ಈ ಕಾರ್ಯವನ್ನು  ನ್ಯಾಷನಲ್ ಸ್ಯಾಂಪಲ್ ಸರ್ವೇ ಕಚೇರಿ ನಡೆಸುತ್ತಿದೆ. ಆದರೆ ಈ ಕಚೇರಿ 2017-18ರ ಸಮೀಕ್ಷೆಯನ್ನು ಇನ್ನೂ ನಡೆಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News