ಐರಾವತ ಕ್ಲಬ್ ಕ್ಲಾಸ್ ವಾಹನದಲ್ಲಿ 699 ಬೆಳ್ಳಿಯ ದೀಪ ಪತ್ತೆ

Update: 2019-01-11 16:28 GMT

ಬೆಂಗಳೂರು, ಜ.11: ಬೆಂಗಳೂರು-ವಿಜಯವಾಡ ಮಾರ್ಗದ ಐರಾವತ ಕ್ಲಬ್ ಕ್ಲಾಸ್ ವಾಹನದಲ್ಲಿ 40.950 ಕೆ.ಜಿ ತೂಕ, 15 ಲಕ್ಷ ರೂ. ಮೌಲ್ಯದ 699 ಬೆಳ್ಳಿಯ ದೀಪಗಳನ್ನು ಪತ್ತೆ ಹಚ್ಚುವಲ್ಲಿ ಕೆಎಸ್ಸಾರ್ಟಿಸಿ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಹೊಸಕೋಟೆ ಟೋಲ್ ಬಳಿ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಭಾಕರ್ ರೆಡ್ಡಿ ವಿಭಾಗೀಯ ಭದ್ರತಾ ನಿರೀಕ್ಷಾ ಸಿ.ಕೆ.ರಮ್ಯಾ, ಸಂಚಾರ ನಿಯಂತ್ರಕ ಛಲಪತಿ ಅವರು ಬಸ್ ತಡೆದು ಪ್ರಯಾಣಿಕರ ಟಿಕೆಟ್‌ಗಳನ್ನು ಪರಿಶೀಲಿಸಿ ನಂತರ ವಾಹನ ಡಿಕ್ಕಿಯನ್ನು ತಪಾಸಣೆ ಮಾಡಿದಾಗ ಬೆಳ್ಳಿ ದೀಪಗಳು ಪತ್ತೆಯಾಗಿದ್ದು, ಅವುಗಳನ್ನು ವಾಣಿಜ್ಯ ತೆರಿಗೆ ಇಲಾಖೆ ವಶಕ್ಕೆ ಒಪ್ಪಿಸಲಾಗಿದೆ.

ಅನುಮಾನಾಸ್ಪದವಾಗಿ ಕಂಡು ಬಂದ 4 ಬ್ಯಾಗ್‌ಗಳಿಗೆ ಟ್ಯಾಗ್‌ಗಳನ್ನು ಹಾಕಿರಲಿಲ್ಲ. ಈ ಬ್ಯಾಗ್‌ಗಳ ಬಗ್ಗೆ ಚಾಲಕರು ಮತ್ತು ನಿರ್ವಾಹಕರನ್ನು ತನಿಖೆಗೊಳಪಡಿಸಿದಾಗ 699 ದೀಪಗಳು ಇವೆಯೆಂದು ಮಾಹಿತಿ ನೀಡಿದ್ದಾರೆ.

ಐರಾವತ ಕ್ಲಾಸ್ ಬಸ್‌ನಲ್ಲಿ 45 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ವಿಭಾಗೀಯ ತಪಾಸಣಾ ತಂಡವು ಮುನ್ನೆಚ್ಚರಿಕೆ ವಹಿಸಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಪ್ರತ್ಯೇಕ ಚಾಲಕರು ಮತ್ತು ನಿರ್ವಾಹಕರನ್ನು ಕರ್ತವ್ಯಕ್ಕೆ ನಿಯೋಜಿಸಿ ಬಸ್ ಅನ್ನು ವಿಜಯವಾಡಕ್ಕೆ ಕಳುಹಿಸಿದ್ದಾರೆ. ಬಸ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ದ ಚಾಲಕ ಮತ್ತು ನಿರ್ವಾಹಕರನ್ನು ತಮ್ಮ ವಶಕ್ಕೆ ಪಡೆದು ಅವರನ್ನು ಅಮಾನತುಗೊಳಿಸಲಾಗಿದೆ.

ದಿಢೀರ್ ತಪಾಸಣೆ ವೇಳೆ ಅನಧಿಕೃತ ಬೆಳ್ಳಿ ದೀಪಗಳನ್ನು ವಶಕ್ಕೆ ತೆಗೆದುಕೊಂಡು ಕರ್ತವ್ಯ ಪ್ರಜ್ಞೆ ಮೆರೆದ ವಿಭಾಗೀಯ ಅಧಿಕಾರಿಗಳನ್ನು ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News