ಬೆಂಗಳೂರಿನಲ್ಲಿ ಚಳಿಗೆ ಜನರು ತತ್ತರ: ಒಂದು ಗಂಟೆ ವಿಮಾನ ಸಂಚಾರ ಸ್ಥಗಿತ

Update: 2019-01-11 17:11 GMT

ಬೆಂಗಳೂರು, ಜ 11: ರಾಜಧಾನಿಯಲ್ಲಿ ವಾತಾವರಣದ ವೈಪರೀತ್ಯದಿಂದಾಗಿ ಜನರು ಚಳಿಗೆ ತತ್ತರಿಸಿ ಹೋಗುತ್ತಿದ್ದಾರೆ. ಇನ್ನೊಂದು ಕಡೆ ದಟ್ಟವಾದ ಮಂಜು ಕವಿದ ಪರಿಣಾಮ ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲಕಾಲ ವಿಮಾನ ಸಂಚಾರ ಸೇವೆಯನ್ನೇ ರದ್ಧು ಮಾಡಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು.

ನಗರದಲ್ಲಿ ಕೊರೆಯುವ ಚಳಿಯ ಪ್ರಮಾಣ ನಗರದಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಉತ್ತರ ಭಾಗದಿಂದ ಶೀತಗಾಳಿ ಬೀಸುತ್ತಿರುವುದರಿಂದ ರಾಜ್ಯದಲ್ಲಿ ವಾಡಿಕೆ ಪ್ರಮಾಣಕ್ಕಿಂತ ಮೂರರಿಂದ ಆರು ಡಿಗ್ರಿ ಕನಿಷ್ಠ ಉಷ್ಣಾಂಶದಲ್ಲಿ ಇಳಿಕೆಯಾಗಿದೆ. ಎರಡು ಮೂರು ದಿನ ರಾಜ್ಯದಲ್ಲಿ ಚಳಿಯ ತೀವ್ರತೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಜನವರಿ ಎರಡನೇ ವಾರದಲ್ಲಿ ಸಾಮಾನ್ಯವಾಗಿ ದಕ್ಷಿಣ ಒಳನಾಡಿನಲ್ಲಿ 11-12 ಡಿಗ್ರಿ ಸೆಲ್ಸಿಯಸ್, ಉತ್ತರ ಒಳನಾಡಿನಲ್ಲಿ 10-11 ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ಇರಲಿದೆ. ಕಳೆದೆರೆಡು ದಿನಗಳಿಂದ ಉತ್ತರ ಭಾರತದ ಕಡೆಯಿಂದ ಶೀತಗಾಳಿ ಬೀಸುತ್ತಿರುವದರಿಂದ ಉತ್ತರ ಹಾಗೂ ದಕ್ಷಿಣ ಒಳನಾಡು ಸೇರಿದಂತೆ ರಾಜ್ಯದಲ್ಲಿ ವಾಡಿಕೆ ಪ್ರಮಾಣಕ್ಕಿಂತ ಮೂರರಿಂದ ಆರು ಡಿಗ್ರಿ ಕನಿಷ್ಠ ಉಷ್ಣಾಂಶದಲ್ಲಿ ಇಳಿಕೆಯಾಗಿದೆ ಎಂದು ಇಲಾಖೆ ಹೇಳಿದೆ.

ಬೆಂಗಳೂರು ಕೇಂದ್ರ ಭಾಗದಲ್ಲಿ ಗರಿಷ್ಠ 29.7 ಡಿಗ್ರಿ ಸೆಲ್ಸಿಯಸ್, ಕನಿಷ್ಠ 14.5 ಡಿಗ್ರಿ ಸೆಲ್ಸಿಯಸ್, ಕೆಐಎನಲ್ಲಿ 29 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 13 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಎಚ್‌ಎಎಲ್‌ನಲ್ಲಿ ಗರಿಷ್ಠ 27.4 ಡಿಗ್ರಿ ಸೆಲ್ಸಿಯಸ್, 13.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಈ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಂಜಾನೆ 5.10 ರಿಂದ ಬೆ.9.36 ರವರೆಗೂ ಸುಮಾರು 48 ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ. ಇದರಿಂದಾಗಿ ದುಬೈ, ದಿಲ್ಲಿ, ಮುಂಬೈ ಸೇರಿದಂತೆ ದೇಶ-ವಿದೇಶಗಳಿಗೆ ಸಂಚಾರ ಮಾಡಬೇಕಾದ ವಿಮಾನಗಳು ಟೇಕಾಫ್ ಆಗುವುದರಲ್ಲಿ ವಿಳಂಬವಾಗಿತ್ತು.

ಅಲ್ಲದೆ, 10 ವಿಮಾನಗಳು ಲ್ಯಾಂಡ್ ಆಗುವುದು ವಿಳಂಬವಾಯಿತು. ಈ ನಡುವೆ ತಲಾ ಒಂದು ಬ್ಲೂಡಾರ್ಟ್, ಇಂಡಿಗೋ ಮತ್ತು ಗೋಏರ್ ವಿಮಾನಗಳನ್ನು ಬೇರೆ ನಿಲ್ದಾಣದತ್ತ ಹೋಗುವಂತೆ ಸೂಚಿಸಲಾಯಿತು. ಬೆಳಗ್ಗೆ 6.46ರಿಂದ 7.53ರ ವರೆಗೂ ಸುಮಾರು ಒಂದು ತಾಸು ವಿಮಾನಗಳ ಸಂಚಾರ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News