ಭಡ್ತಿ ಮೀಸಲಾತಿ ಕಾಯ್ದೆ ಜಾರಿ ಮಾಡದಂತೆ ಆಗ್ರಹಿಸಿ ಧರಣಿ

Update: 2019-01-11 17:19 GMT

ಬೆಂಗಳೂರು, ಜ. 11: ಪರಿಶಿಷ್ಟ ಜಾತಿ ನೌಕರರ ಭಡ್ತಿ ಮೀಸಲಾತಿ ಕಾಯ್ದೆ ಜಾರಿ ಮಾಡಬಾರದು ಎಂದು ಒತ್ತಾಯಿಸಿ ಅಹಿಂಸಾ ನೌಕರರ ಹಿತರಕ್ಷಣಾ ಒಕ್ಕೂಟ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.

ಭಡ್ತಿ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಬಾಕಿ ಇದ್ದು, ಫೆಬ್ರವರಿಯಲ್ಲಿ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ. ಇದರ ನಡುವೆ ಇದನ್ನು ಜಾರಿ ಮಾಡುವಂತೆ ಸರಕಾರದ ಮೇಲೆ ಪರಿಶಿಷ್ಟ ನೌಕರರು ಒತ್ತಡ ಹೇರುತ್ತಿದ್ದಾರೆ. ಹೀಗಾಗಿ, ಸರಕಾರ ಯಾವುದೇ ಕಾರಣಕ್ಕೂ ಒತ್ತಡಕ್ಕೆ ಒಳಗಾಗಿ ಈ ಕಾಯ್ದೆ ಜಾರಿ ಮಾಡಬಾರದು. ಅಲ್ಲದೆ, ಯಥಾಸ್ಥಿತಿ ಮುಂದುವರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಭಡ್ತಿ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ನ್ಯಾಯಾಲಯ ನೂತನ ಕಾಯ್ದೆ ಜಾರಿಗೆ ಯಾವುದೇ ಆದೇಶ ನೀಡಿರುವುದಿಲ್ಲ. ಭಡ್ತಿ ಕಾಯ್ದೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ನ್ಯಾಯಪೀಠಕ್ಕೆ ಈ ಪ್ರಕರಣವನ್ನು ವರ್ಗಾಯಿಸಿದೆ. ಹಾಗಾಗಿ ಭಡ್ತಿ ಮೀಸಲು ಕಾಯ್ದೆ ಜಾರಿ ಮಾಡುವುದು ಕೋರ್ಟ್ ಆದೇಶದ ಉಲ್ಲಂಘನೆಯಾಗುತ್ತದೆ ಎಂದು ಹೋರಾಟಗಾರರು ತಿಳಿಸಿದರು.

ಸಾಮಾನ್ಯ ವರ್ಗದವರು ಸರಕಾರದ ಶೇ. 82 ರಷ್ಟು ಭಡ್ತಿಯಿಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಸರಕಾರ ಕೇವಲ ಶೇ. 18 ರಷ್ಟು ನೌಕರರ ರಕ್ಷಣೆಗೆ ನಿಂತಿರುವುದು ಸರಿಯಲ್ಲ. ಸುಪ್ರೀಂಕೋರ್ಟ್ ವಿಚಾರಣೆ ಮುಗಿದು ತೀರ್ಪು ಹೊರ ಬರುವವರೆಗೂ ಮೀಸಲಾತಿ ಕಾಯ್ದೆಯನ್ನು ಜಾರಿಗೊಳಿಸಬಾರದು ಎಂದು ಒತ್ತಾಯಿಸಿದರು.

ಮೀಸಲಾತಿ ಕಾಯ್ದೆಯನ್ನು ಪ್ರಸ್ತುತ ಹಂತದಲ್ಲಿ ಜಾರಿಗೊಳಿಸಲು ಸಾಧ್ಯವಿಲ್ಲವೆಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಸಚಿವ ಸಂಪುಟ ಸಭೆಯಲ್ಲಿಯೂ 405 ಬಾರಿ ಈ ಬಗ್ಗೆ ಚರ್ಚೆಯಾಗಿದೆ. ಆದರೂ, ಪರಿಶಿಷ್ಟ ನೌಕರರು ಮುಖ್ಯ ಕಾರ್ಯದರ್ಶಿ ಮತ್ತು ಕಾನೂನು ಕಾರ್ಯದರ್ಶಿಗಳ ಮೇಲೆ ಒತ್ತಡ ಹೇರಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಯಾಲಯದ ತೀರ್ಪು ಹೊರ ಬರುವವರೆಗೂ ಯಥಾಸ್ಥಿತಿಯನ್ನು ಮುಂದುವರೆಸಬೇಕು ಎಂದು ಸರಕಾರಕ್ಕೆ ಈಗಾಗಲೇ ಮನವಿ ಮಾಡಲಾಗಿದೆ. ಆದರೂ, ಸಚಿವ ಸಂಪುಟದಲ್ಲಿನ ಪರಿಶಿಷ್ಟ ಸಚಿವರು ಮುಖ್ಯಮಂತ್ರಿ ಹಾಗೂ ಸರಕಾರದ ಮೇಲೆ ಒತ್ತಡ ಹೇರಲು ಮುಂದಾಗಿರುವುದು ಸರಿಯಲ್ಲ. ಹೀಗಾಗಿ, ಸರಕಾರ ಯಾವುದೇ ಕಾರಣಕ್ಕೂ ಈ ಕಾಯ್ದೆ ಜಾರಿಗೆ ಮುಂದಾಗಬಾರದು. ಒಂದು ವೇಳೆ ಜಾರಿ ಮಾಡಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸಮಿತಿ ಅಧ್ಯಕ್ಷ ಎಂ.ನಾಗರಾಜು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News