ಕಾಡು ನಾಶ ಮಾಡುವ ಯೋಜನೆ ಬೇಡ

Update: 2019-01-11 18:47 GMT

ಮಾನ್ಯರೇ,

ಚಿನ್ನದ ಗಣಿಗಾರಿಕೆಗಾಗಿ ಕಪ್ಪತ್ತಗುಡ್ಡ ಸಂರಕ್ಷಣಾ ಅರಣ್ಯ ಪ್ರದೇಶವನ್ನು ಡಿನೋಟಿಫೈ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಮೂಲಕ ನಮ್ಮ ರಾಜ್ಯದ ಮಹತ್ವದ ಕಾಡು ನಾಶ ಮಾಡುವ ಯೋಜನೆಗಳಿಗೆ ಒಪ್ಪಿಗೆ ನೀಡಲು ಸ್ವತಃ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೇ ಮುಖ್ಯಮಂತ್ರಿಗೆ ಒತ್ತಡ ಹೇರುತ್ತಿರುವ ಪ್ರಕರಣ ಬಯಲಾಗಿದೆ. ಈ ಕುರಿತು ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಯೋಜನೆಗೆ ಒಪ್ಪಿಗೆ ನೀಡದಿರಲು ನಿರ್ಧರಿಸಿರುವುದು ಸಕಾಲಿಕ ಕ್ರಮ. ಜೊತೆಗೆ ಇದೊಂದು ಒಳ್ಳೆಯ ನಿರ್ಧಾರ ಕೂಡಾ ಹೌದು. ರಾಜ್ಯದ ಕಾಡು ನಾಶ ಮಾಡುವಂತಹ ಯೋಜನೆಗೆ ವನ್ಯಜೀವಿ ಮಂಡಳಿ ಸದಸ್ಯರೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇದು ಸ್ವಾರ್ಥದ ಹಿತಾಸಕ್ತಿಗಾಗಿ ಕಾಡನ್ನೇ ಮೇಯಲು ಹೊರಟ ಅರಣ್ಯಾಧಿಕಾರಿಗಳಿಗೆ ತಡೆ ಒಡ್ಡಿದಂತಾಗಿದೆ.

ಈಗಾಗಲೇ ರಾಜ್ಯದಲ್ಲಿ ಕಾಡುಗಳು ವಿನಾಶದ ಅಂಚಿನಲ್ಲಿವೆೆ. ಕೊಳ್ಳೆ ಹೊಡೆಯುವವರು ಹೆಚ್ಚಾಗಿದ್ದಾರೆ. ಕಾಡನ್ನೇ ಲೂಟಿ ಮಾಡುವ ಮಂದಿ ಹೆಚ್ಚಾಗುತ್ತಿರುವ ಈ ಕಾಲಘಟ್ಟದಲ್ಲಿ ಹೊಸ ಯೋಜನೆ ಹೆಸರಲ್ಲಿ ಕಾಡು ನಾಶ ಮಾಡಲು ಹೊರಡುವ ಅಧಿಕಾರಿಗಳ ವಿರುದ್ಧ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳಲೇಬೇಕಾಗಿದೆ. ಪಶ್ಚಿಮಘಟ್ಟ ಮೊದಲೇ ಅಪಾಯದಲ್ಲಿದೆ. ಸಂಪದ್ಭರಿತ ಕಪ್ಪತ್ತಗುಡ್ಡವನ್ನ್ನು ಸ್ವಾಹ ಮಾಡಲು ತಂತ್ರ ರೂಪಿಸಲಾಗುತ್ತಿದೆ. ಒಂದು ವೇಳೆ ವಿವಾದಾತ್ಮಕ ಅಂಶಗಳುಳ್ಳ ಈ ಯೋಜನೆ ಕಾರ್ಯಗತಗೊಂಡರೆ ಕಾಡು ನಾಶವಾಗಲಿದೆ. ಹುಲಿ ಸಂತತಿ ಕ್ಷೀಣಿಸಲಿದೆ. ಕಾಡು ಪ್ರಾಣಿಗಳು ನೆಲೆಯಿಲ್ಲದಂತಾಗುತ್ತದೆ. ಕೇಂದ್ರ ಸರಕಾರವೇ ಈ ಯೋಜನೆಯನ್ನು ಎರಡು ಸಲ ತಿರಸ್ಕರಿಸಿತ್ತು. ಹೀಗಾಗಿ ಅಪಾಯವನ್ನು ಸ್ವತಃ ಮೈಮೇಲೆ ಎಳೆದುಕೊಳ್ಳುವ ಇಂತಹ ಯೋಜನೆಗಳು ಬೇಕೇ, ಬೇಡವೇ ಎಂಬುದರ ಬಗ್ಗೆ ಸರಕಾರ ಚರ್ಚಿಸಿ ಮುಂದಿನ ಹೆಜ್ಜೆ ಇಡಬೇಕಾಗಿದೆ. ಸ್ವಾರ್ಥಿಗಳ ಲಾಬಿ, ಕಾಡುಗಳನ್ನು ಹರಣ ಮಾಡದಿರಲಿ.

Writer - -ಶಂಶೀರ್ ಬುಡೋಳಿ, ಬಂಟ್ವಾಳ

contributor

Editor - -ಶಂಶೀರ್ ಬುಡೋಳಿ, ಬಂಟ್ವಾಳ

contributor

Similar News