ಪಾಂಡ್ಯ ವಿವಾದದ ನಡುವೆ ವೈರಲ್ ಆಗುತ್ತಿದೆ ರಾಹುಲ್ ದ್ರಾವಿಡ್ ರ ಹಳೆಯ ವಿಡಿಯೋ

Update: 2019-01-12 10:04 GMT

ಮುಂಬೈ, ಜ.12: ‘ಕಾಫಿ ವಿದ್ ಕರಣ್’ ಕಾರ್ಯಕ್ರಮದಲ್ಲಿ ಮಹಿಳೆಯರ ಬಗ್ಗೆ ಅಸಭ್ಯ ಹೇಳಿಕೆ ನೀಡಿ ಬಿಸಿಸಿಐನಿಂದ ಅಮಾನತುಗೊಂಡಿರುವ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್. ರಾಹುಲ್ ಪ್ರಕರಣದ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಮಾಜಿ ಕಪ್ತಾನ ರಾಹುಲ್ ದ್ರಾವಿಡ್ ಅವರ ಹಳೆಯ ವೀಡಿಯೋವೊಂದು ಈಗ ಹರಿದಾಡುತ್ತಿದೆ. ಕ್ರಿಕೆಟಿಗರು ಸಾರ್ವಜನಿಕವಾಗಿ ಹೇಗೆ ವರ್ತಿಸಬಹುದೆಂಬ ಪಾಠವನ್ನು ಅದು ಈಗಿನ ಕ್ರಿಕೆಟಿಗರಿಗೆ ನೀಡುವಂತಿದೆ ಎಂದು ಸಾಮಾಜಿಕ ಜಾಲತಾಣದ ಬಳಕೆದಾರರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಎಂಟಿವಿಯ ಈ  ಹಳೆಯ ‘ಪ್ರ್ಯಾಂಕ್’ ವೀಡಿಯೋದಲ್ಲಿ ಯುವತಿಯೊಬ್ಬಳು ದ್ರಾವಿಡ್ ಅವರನ್ನುದ್ದೇಶಿಸಿ “ಇಷ್ಟೊಂದು ಖ್ಯಾತರಾಗಿರುವಾಗ ಹೇಗನಿಸುತ್ತದೆ?, ನಿಮಗೆ ಸಿಂಗಾಪುರದ ಬಹಳಷ್ಟು ಅಬಿಮಾನಿಗಳಿದ್ದಾರೆ'' ಎಂದಾಗ ದ್ರಾವಿಡ್ “ನೀವು ಕ್ರಿಕೆಟ್ ಆಡುತ್ತಿದ್ದೀರಿ ಹಾಗೂ ಅದಕ್ಕಾಗಿಯೇ ಖ್ಯಾತರಾಗಿದ್ದೀರಿ ಎಂಬುದರ ಅರಿವಾಗುತ್ತದೆ'' ಎಂದು ಹೇಳುತ್ತಾರೆ.

ವೀಡಿಯೋ ನಂತರ ಫಾಸ್ಟ್ ಫಾವರ್ಡ್ ಆಗಿ ಯುವತಿ “ಯೆಸ್ ದಿಸ್ ವಾಸ್ ರಾಹುಲ್ ದ್ರಾವಿಡ್'' ಎಂದು ಹೇಳುತ್ತಾ ಸಂದರ್ಶನ ಮುಗಿಯಿತೆಂಬ ಸೂಚನೆ ನೀಡುತ್ತಾಳೆ. ಆದರೆ ಸ್ಪೈ ಕ್ಯಾಮರಾ ಇನ್ನೂ ಚಾಲೂ ಇದೆ ಎಂದು ಅರಿಯದ ದ್ರಾವಿಡ್ ರಿಲ್ಯಾಕ್ಸ್ ಮೂಡಿನಲ್ಲಿ ಅಲ್ಲಿದ್ದ ಆಹಾರ ಸವಿಯುತ್ತಾರೆ.

ನಂತರ ಯುವತಿ ತಾನು ಐದು ನಿಮಿಷ ಮಾತನಾಡುವುದಾಗಿ ಹೇಳಿ ತಾನು ಮಲೇಷ್ಯಾದಿಂದ ದ್ರಾವಿಡ್ ಅವರನ್ನೇ ಭೇಟಿಯಾಗಲು ಬಂದಿದ್ದಾಗಿ, ಬೆಂಗಳೂರಿನಲ್ಲಿ ರಾಹುಲ್ ಅವರು ಕಲಿತ ಸೈಂಟ್ ಜೋಸೆಫ್ ಶಾಲೆಗೆ ತೆರಳಿ ದ್ರಾವಿಡ್ ಅವರಿದ್ದ ತರಗತಿಯಲ್ಲಿ ಕುಳಿತಿದ್ದಾಗಿ ಹೇಳುತ್ತಾಳೆ. ತನಗೆ ಕೈಕುಲುಕಬೇಕೆಂದು ಹೇಳಿ ಅವರ ಪಕ್ಕ ಬಂದು ಕುಳಿತುಕೊಳ್ಳುತ್ತಾಳೆ. “ನಾನು ನಿಮ್ಮ ದೊಡ್ಡ ಅಭಿಮಾನಿ, ನಿಮ್ಮಲ್ಲಿ ಯಾವತ್ತೂ ಒಂದು ಪ್ರಶ್ನೆ ಕೇಳಬೇಕೆಂದಿದ್ದೆ, ದ್ರಾವಿಡ್ ನನ್ನನ್ನು ಮದುವೆಯಾಗುತ್ತೀರಾ?'' ಎಂದು ಆಕೆ ಕೇಳಿದಾಗ ಆಘಾತಗೊಳ್ಳುವ ಸರದಿ ರಾಹುಲ್ ದ್ರಾವಿಡ್ ಅವರದ್ದು “ನಿಮಗೇನು ಹುಚ್ಚು ಹಿಡಿದಿದೆಯೇ ?'' ಎಂದು ರಾಹುಲ್ ಪ್ರಶ್ನಿಸುತ್ತಾರೆ. ಆಗ ಯುವತಿ ಬಾಬುಜಿ ಎಂದು ಒಬ್ಬ ವ್ಯಕ್ತಿಯನ್ನು ಕರೆಯುತ್ತಾಳೆ. ಆಗ ರಾಹುಲ್ ಹೊರ ಹೋಗಲು ಯತ್ನಿಸಿದರೂ ಅವರನ್ನು ಅಲ್ಲೇ ಕೂರಿಸಲಾಗುತ್ತದೆ. ಇದು ತಮಾಷೆಯೆಂದು ಅರಿಯದ ರಾಹುಲ್ “ನಿಮ್ಮ ವಯಸ್ಸೆಷ್ಟು?'' ಎಂದು ಯವತಿಗೆ ಕೇಳಿದಾಗ ಆಕೆ 20 ವರ್ಷ ಎಂದು ಹೇಳುತ್ತಾಳೆ. ಆಗ ರಾಹುಲ್ ದ್ರಾವಿಡ್ “ನೀವು ನಿಮ್ಮ ಕಲಿಕೆಯತ್ತ ಗಮನ ನೀಡಬೇಕು ಎಂದು ನನಗನಿಸುತ್ತಿದೆ. ಈ ವಯಸ್ಸಿನಲ್ಲಿ ಮದುವೆ ಬಗ್ಗೆ ಯೋಚಿಸುವುದು ಬಿಟ್ಟು ಬಿಡಬೇಕು''ಎಂದು ಹೇಳುತ್ತಲೇ ವೀಡಿಯೋ ಅಂತ್ಯವಾಗುತ್ತದೆ.

ಈ ವೀಡಿಯೋವನ್ನು ಹಲವರು ಟ್ವೀಟ್ ಮಾಡಿ ಇದು ಹಾರ್ದಿಕ್ ಮತ್ತು ಕೆ ಎಲ್ ರಾಹುಲ್ ಅವರಿಗೆ ಹೇಗೆ ವರ್ತಿಸಬೇಕೆಂಬ ಬಗ್ಗೆ ಒಂದು ಪಾಠವಾಗಬಹುದು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News