ಕಾಗದ ರಹಿತ ಆಡಳಿತಕ್ಕೆ ಒತ್ತು: ಕೆಎಸ್ಸಾರ್ಟಿಸಿ ನಿರ್ದೇಶಕ ಶಿವಯೋಗಿ ಕಳಸದ

Update: 2019-01-12 16:16 GMT

ಬೆಂಗಳೂರು, ಜ.12: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ಆಡಳಿತ ವ್ಯವಸ್ಥೆಯನ್ನು ಸಂಪೂರ್ಣ ಗಣಕೀಕೃತಗೊಳಿಸಿ, ಕಾಗದ ರಹಿತ ಆಡಳಿತ ವ್ಯವಸ್ಥೆಗೆ ಒತ್ತು ನೀಡುವುದು ಎಂದು ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ತಿಳಿಸಿದ್ದಾರೆ.

ಶನಿವಾರ ಇಲ್ಲಿನ ಶಾಂತಿನಗರದಲ್ಲಿನ ಸಂಸ್ಥೆಯ ಕೇಂದ್ರೀಯ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ವಿಭಾಗೀಯ ಕಚೇರಿಯ ಕಟ್ಟಡವು 60 ವರ್ಷಗಳಷ್ಟು ಹಳೆಯದಾಗಿದ್ದು, ಸಿಬ್ಬಂದಿ ಕಾರ್ಯ ನಿರ್ವಹಿಸುವುದು ಕಷ್ಟ. ಹೀಗಾಗಿ ಕಟ್ಟಡವನ್ನು ನವೀಕರಿಸಲು ಉದ್ದೇಶಿಸಲಾಗಿದೆ ಎಂದರು.

ಕೇಂದ್ರ ಕಚೇರಿಯಲ್ಲಿಯೂ ಸಿಸಿಟಿವಿ ಕಂಟ್ರೋಲ್ ರೂಮ್ ಸ್ಥಾಪಿಸಲು ಕ್ರಮ ಜರುಗಿಸುವುದು. ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳೊಂದಿಗಿನ ಅಂತರರಾಜ್ಯ ಕರಾರು ಒಪ್ಪಂದ ನಿರ್ಣಾಯಕವಾಗಿದ್ದು, ಅಂತರರಾಜ್ಯ ಕರಾರು ಒಪ್ಪಂದವನ್ನು ಆದ್ಯತೆಯ ಮೇರೆಗೆ ತೆಗೆದುಕೊಳ್ಳಲಾಗುವುದು ಎಂದರು.

ಸಂಸ್ಥೆಯ ಸಿಬ್ಬಂದಿಗಳ ಮೊಬೈಲ್‌ಗೆ ಎಸ್‌ಎಂಎಸ್ ಮೂಲಕ ಬಾಕಿ ಇರುವ ರಜೆಯ ಸಂದೇಶವನ್ನು ಕಳುಹಿಸಲು ಪ್ರಾಯೋಗಿಕ ಯೋಜನೆ ರೂಪಿಸಲು ಸೂಚಿಸಿದ್ದಾರೆ. ಎಲ್ಲ ಘಟಕ/ಕಾರ್ಯಾಗಾರ/ಬಸ್ ನಿಲ್ದಾಣಗಳಲ್ಲಿ ಕಾರ್ಯ ನಿರ್ವಹಿಸುವ ಬೆಂಕಿ ಆರಿಸುವ ವ್ಯವಸ್ಥೆಯ ಯಂತ್ರಗಳನ್ನು ಅಳವಡಿಸುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News