ಕುಡಿಯುವ ನೀರಿನ ಯೋಜನೆ ಲೋಕಾರ್ಪಣೆ ಮಾಡಿದ ಶಾಸಕ ಎಂ.ಕೃಷ್ಣಪ್ಪ

Update: 2019-01-12 16:38 GMT

ಬೆಂಗಳೂರು, ಜ. 12: ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳಿಗೆ ಕುಡಿಯುವ ನೀರು ಯೋಜನೆ ಅಡಿಯಲ್ಲಿ ಕಾವೇರಿ ಕುಡಿಯುವ ನೀರಿನ ಸಂಪರ್ಕವನ್ನು ಶಾಸಕ ಎಂ.ಕೃಷ್ಣಪ್ಪ ಸಾರ್ವಜನಿಕರ ಉಪಯೋಗಕ್ಕೆ ಲೋಕಾರ್ಪಣೆ ಮಾಡಿದರು.

ಉತ್ತರಹಳ್ಳಿ ವಾರ್ಡ್‌ನ ವಲ್ಲಭನಗರ, ವೀರಭದ್ರನಗರ, ಕೃಷ್ಣಪ್ಪಲೇಔಟ್, ನಾಗಪ್ಪ ಲೇಔಟ್, ಸಪ್ತಗಿರಿ ಬಡಾವಣೆ, ವೈಷ್ಣವಿ ಬಡಾವಣೆ, ಕನ್ನಿಕಾಪರಮೇಶ್ವರಿ ದೇವಸ್ಥಾನ ರಸ್ತೆ, ವೀರಾಂಜನೇಯಸ್ವಾಮಿ ಬಡಾವಣೆ, ಗೋಪಾಲಪ್ಪಬಡಾವಣೆಗೆ ಕಾವೇರಿ ನೀರಿನ ಸಂಪರ್ಕ ಸಿಗಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸತತ ಪ್ರಯತ್ನದಿಂದ ಕಾವೇರಿ ನೀರು ಸರಬರಾಜು ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಜಲಮಂಡಳಿಗೆ ಪಾವತಿಸಬೇಕಾದ ಶುಲ್ಕವನ್ನು ಪಾವತಿಸಿ ಪ್ರತಿಯೊಂದು ಮನೆಯವರು ಕಾವೇರಿ ನೀರು ಕೊಳವೆ ಸಂಪರ್ಕ ಪಡೆದುಕೊಳ್ಳಿ ಎಂದು ತಿಳಿಸಿದರು.

ಈ ಯೋಜನೆಯಿಂದಾಗಿ ಬಡಾವಣೆಯ ಸುಮಾರು 28 ಸಾವಿರ ಜನರಿಗೆ ಅನುಕೂಲವಾಗಲಿದ್ದು, ಮುಂದಿನ ದಿನಗಳಲ್ಲಿ ಉಳಿದ ಎಲ್ಲ ಬಡಾವಣೆಗಳಿಗೂ ಸಂಪರ್ಕ ಒದಗಿಸಲಾಗುವುದು ಎಂದರು.

ಬಿಬಿಎಂಪಿ ಸದಸ್ಯ ಹನುಮಂತಯ್ಯ ಮಾತನಾಡಿ, ಬೇಸಿಗೆ ಕಾಲ ಆರಂಭದ ಮೊದಲೇ ಕಾವೇರಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಅಂತರ್ಜಲ ಕುಸಿತದಿಂದ ಲಕ್ಷಾಂತರ ರೂ. ಖರ್ಚು ಮಾಡಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದೆವು. ಇನ್ನು ಮುಂದೆ ಈ ಸಮಸ್ಯೆ ಇರುವುದಿಲ್ಲ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಎರಡನೇ ಹಂತದಲ್ಲಿ ಅರೇಹಳ್ಳಿ, ವಡ್ಡರಪಾಳ್ಯ, ಯಾದಳನಗರ ಸುತ್ತಮುತ್ತಲ ಬಡಾವಣೆಗಳಿಗೂ ಕಾವೇರಿ ನೀರು ಸರಬರಾಜು ಮಾಡುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News