ಅಝ್ಮನ್ ಅವಳಿ ಗೋಲು: ನಾಕೌಟ್ ಹಂತಕ್ಕೆ ಇರಾನ್ ಏಶ್ಯಕಪ್ ಫುಟ್ಬಾಲ್‌

Update: 2019-01-12 18:49 GMT

ಅಬುಧಾಬಿ, ಜ.12: ಸರ್ದಾರ್ ಅಝ್ಮನ್ ಗಳಿಸಿದ ಅವಳಿ ಗೋಲುಗಳ ನೆರವಿನಿಂದ ಇರಾನ್ ತಂಡ ಏಶ್ಯಕಪ್ ಫುಟ್ಬಾಲ್‌ನ ಲೀಗ್ ಪಂದ್ಯದಲ್ಲಿ ವಿಯೆಟ್ನಾಂ ವಿರುದ್ಧ 2-0 ಅಂತರದ ಜಯ ಸಾಧಿಸಿದೆ. ಆ ಮೂಲಕ ಶನಿವಾರ ಟೂರ್ನಿಯ ನಾಕೌಟ್ ಹಂತಕ್ಕೆ ಪ್ರವೇಶ ಪಡೆದಿದೆ.

ಪಂದ್ಯದ ಆರಂಭದಲ್ಲೇ ಇರಾನ್ ತಂಡ ಆಕ್ರಮಣಕಾರಿ ಆಟಕ್ಕೆ ಮುಂದಾಗಿತ್ತು. ತಂಡದ ಸಮನ್ ಗೊದ್ದೊಸ್ ಹಾಗೂ ಮೆಹ್ದಿ ತರೆಮಿ ವಿಯೆಟ್ನಾಂ ಗೋಲುಪೆಟ್ಟಿಗೆ ಸಮೀಪಕ್ಕೆ ಬಂದಿದ್ದರು. ಆದರೆ ಗೋಲು ಗಳಿಸಲು ಯಶಸ್ವಿಯಾಗಿರಲಿಲ್ಲ. ಆ ಬಳಿಕ 38ನೇ ನಿಮಿಷದಲ್ಲಿ ಗೊದ್ದೊಸ್ ಅವರಿಂದ ಕ್ರಾಸ್ ಪಡೆದ ಅಝ್ಮಾನ್ ಮೊದಲ ಗೋಲು ದಾಖಲಿಸಿ ಸಂಭ್ರಮಿಸಿದರು. ಅಝ್ಮಾನ್ 69ನೇ ನಿಮಿಷದಲ್ಲಿ ವಿಯೆಟ್ನಾಂ ಗೋಲಿಯನ್ನು ವಂಚಿಸಿ ಮತ್ತೊಂದು ಸೊಗಸಾದ ಗೋಲನ್ನು ಬಾರಿಸಿದರು. ದಕ್ಷಿಣ ಕೊರಿಯಾದೊಂದಿಗೆ ಏಶ್ಯಕಪ್ ಗೆಲ್ಲುವ ಫೇವರಿಟ್ ಎಂಬ ಹಣೆಪಟ್ಟಿ ಹೊಂದಿರುವ ಇರಾನ್ ‘ಡಿ’ ಗುಂಪಿನ ತನ್ನ ಆರಂಭಿಕ ಪಂದ್ಯದಲ್ಲಿ ಯೆಮೆನ್ ತಂಡವನ್ನು 5-0 ಗೋಲುಗಳ ಭಾರೀ ಅಂತರದಿಂದ ಮಣಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News