'ಉಗ್ರನ ತಂದೆ' ಎಂಬ ಹಣೆಪಟ್ಟಿ, ಮಾಡದ ತಪ್ಪಿಗೆ ನರಕಯಾತನೆ ಅನುಭವಿಸಿದ ಸಂತ್ರಸ್ತರ ಕುಟುಂಬ

Update: 2019-01-13 11:45 GMT
ಸಮೀರ್ ಖಾನ್ ಪಠಾಣ್ ತಂದೆ ಸರ್ಫರಾಝ್ ಖಾನ್  ಫೋಟೊ ಕೃಪೆ: indianexpress.com

"ಸೊಹ್ರಾಬುದ್ದೀನ್ ಶೇಖ್ ಮತ್ತು ತುಳಸೀರಾಂ ಪ್ರಜಾಪತಿ ಎನ್‍ಕೌಂಟರ್ ಪ್ರಕರಣಗಳ ಆರೋಪಿಗಳು ದೋಷಮುಕ್ತರಾದ ಹಿನ್ನೆಲೆಯಲ್ಲಿ, ನ್ಯಾಯದ ಬಗ್ಗೆ ಇದೀಗ ನಿರೀಕ್ಷೆ ಉಳಿದಿಲ್ಲ"… ಸುಪ್ರೀಂಕೋರ್ಟ್ ನೇಮಕ ಮಾಡಿದ ತನಿಖಾ ಆಯೋಗ, ನಕಲಿ ಎನ್‍ಕೌಂಟರ್ ಎಂದು ನಿರ್ಧರಿಸಿದ ಪ್ರಕರಣವೊಂದರಲ್ಲಿ ಹತ್ಯೆಗೀಡಾದ ವ್ಯಕ್ತಿಯ ಪುತ್ರ ವ್ಯಕ್ತಪಡಿಸಿದ ಅಭಿಪ್ರಾಯ ಇದು.

"ಈ ತನಿಖಾ ವರದಿಯಿಂದ ನಮಗೆ ಯಾವ ಬದಲಾವಣೆಯೂ ಆಗದು. ಸೊಹ್ರಾಬುದ್ದೀನ್ ಮತ್ತು ಪ್ರಜಾಪತಿ ಪ್ರಕರಣಗಳಲ್ಲಿ ಏನಾಗಿದೆ ಎನ್ನುವುದನ್ನು ನಾವು ನೋಡಿದ್ದೇವೆ. ಪ್ರತಿಯೊಬ್ಬರೂ ದೋಷಮುಕ್ತಗೊಂಡರು. ದೇವರ ಹೊರತಾಗಿ ಯಾರ ಬಗ್ಗೆಯೂ ನನಗೆ ನಂಬಿಕೆ ಇಲ್ಲ" ಎಂದು ಮೆಹಬೂಬ್ ವಿಷಾದದಿಂದ ನುಡಿದರು. ಇವರ ತಂದೆ ಹಾಜಿ ಇಸ್ಮಾಯೀಲ್, 2005ರಲ್ಲಿ ಗುಜರಾತ್ ಪೊಲೀಸರು ಜಾಮ್‍ ನಗರದಲ್ಲಿ ನಡೆಸಿದ ನಕಲಿ ಎನ್‍ಕೌಂಟರ್ ಗೆ ಬಲಿಯಾಗಿದ್ದರು.

ಇಸ್ಮಾಯೀಲ್ ಅವರ ಹೊರತಾಗಿ ಸುಪ್ರೀಂ ಕೋರ್ಟ್‍ ನಿವೃತ್ತ ನ್ಯಾಯಾಧೀಶರ ನೇತೃತ್ವದ ತನಿಖಾ ಆಯೋಗ, 2002ರ ಅಕ್ಟೋಬರ್‍ನಲ್ಲಿ ನಡೆದ ಸಮೀರ್ ಪಠಾಣ್ ಹಾಗೂ 2006ರಲ್ಲಿ ನಡೆದ ಕಾಸಿಂ ಜಾಫರ್ ಹತ್ಯೆ ಪ್ರಕರಣಗಳು ಕೂಡಾ ನಕಲಿ ಎನ್‍ ಕೌಂಟರ್ ‍ಗಳು ಎಂದು ಅಭಿಪ್ರಾಯಪಟ್ಟಿತ್ತು. "ನನ್ನ ತಂದೆಯ ಹತ್ಯೆ ವಿರುದ್ಧದ ಪ್ರಕರಣ ಮುಂದುವರಿಸದಂತೆ ಅಧಿಕಾರದಲ್ಲಿರುವ ವ್ಯಕ್ತಿಗಳಿಂದ ಒತ್ತಡ ಇತ್ತು" ಎಂದು ದೂರವಾಣಿ ಮೂಲಕ ಮಾತನಾಡಿದ ಮೆಹಬೂಬ್ ಹೇಳಿದರು.

ಜಾಮ್ ‍ನಗರ ಜಿಲ್ಲೆಯ ಜಾಮ್ ಸಲಾಯ ಎಂಬಲ್ಲಿ ಮೆಹಬೂಬ್ ಪುಟ್ಟ ಐಸ್ ಉತ್ಪಾದನಾ ಘಟಕ ಹೊಂದಿದ್ದಾರೆ. ಇವರ ಅಣ್ಣ ಹನೀಫ್ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರೆ, ತಮ್ಮ ಹಬೀಬ್, ಮೆಹಬೂಬ್ ಜತೆಗೆ ವಾಸವಿದ್ದಾರೆ.

ಮಗನನ್ನು ಕೊಂದರು, ನನ್ನನ್ನು ನಾಶಪಡಿಸಿದರು

2002ರ ಅಕ್ಟೋಬರ್ 22ರಂದು ನಡೆದ ಸಮೀರ್ ಖಾನ್ ಪಠಾಣ್ ಹತ್ಯೆ ಕೂಡಾ ಪೂರ್ವನಿರ್ಧರಿತ ಹತ್ಯೆ ಎಂದು ನ್ಯಾಯಮೂರ್ತಿ ಬೇಡಿ ವರದಿ ಸ್ಪಷ್ಟಪಡಿಸಿತ್ತು. ಡಿಸಿಪಿ ಡಿ.ಜಿ.ವಂಝಾರಾ ಹಾಗೂ ಜಂಟಿ ಪೊಲೀಸ್ ಆಯುಕ್ತ ಪಿ.ಪಿ.ಪಾಂಡೆ ನೇತೃತ್ವದ ಅಹ್ಮದಾಬಾದ್ ಅಪರಾಧ ಪತ್ತೆ ವಿಭಾಗದ ಅಧಿಕಾರಿಗಳ ಗುಂಪು ಈತನನ್ನು ಹತ್ಯೆ ಮಾಡಿದೆ.

ಪೊಲೀಸರು ಈತನಿಗೆ ಜೈಶ್ ಇ ಕಾರ್ಯಕರ್ತ ಎಂದು ಹಣೆಪಟ್ಟಿ ಕಟ್ಟಿದ್ದರು. ಈತ ಪಾಕಿಸ್ತಾನದಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆದಿದ್ದಾನೆ ಹಾಗೂ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಲು ರೂಪಿಸಿದ ಸಂಚಿನಲ್ಲಿ ಶಾಮೀಲಾಗಿದ್ದಾನೆ ಎಂದು ಪೊಲೀಸರು ಆಪಾದಿಸಿದ್ದರು.

ಪಠಾಣ್‍ ತಂದೆ ಸರ್ಫರಾಝ್ ಖಾನ್ (68) ಈ ಬಗ್ಗೆ ಮಾತನಾಡಿ, "ಅವರು ನನ್ನ ಮಗನನ್ನು ಭಯೋತ್ಪಾದಕ ಎಂದು ಕರೆದು ಕೊಂದರು. ಬಳಿಕ ಉಗ್ರಗಾಮಿಯ ತಂದೆ ಎಂಬ ಹಣೆಪಟ್ಟಿ ಕಟ್ಟಿ ನನ್ನ ವಿನಾಶಕ್ಕೂ ಕಾರಣರಾದರು. ನಾನು ಉದ್ಯೋಗ ಕಳೆದುಕೊಂಡೆ" ಎಂದು ವ್ಯಥೆಯ ಕಥೆ ಬಿಚ್ಚಿಟ್ಟರು.

2002ರಲ್ಲಿ ಸರ್ಫರಾಜ್, ಅಹ್ಮದಾಬಾದ್ ನಗರ ಸಾರಿಗೆ ಸೇವೆಯಲ್ಲಿ ಚಾಲಕರಾಗಿ ದುಡಿದು ಮಾಸಿಕ 18 ಸಾವಿರ ವೇತನ ಪಡೆಯುತ್ತಿದ್ದರು. "ಎನ್‍ಕೌಂಟರ್ ನಡೆದು 10 ದಿನಗಳ ಬಳಿಕ, ಅಪರಾತ್ರಿಯಲ್ಲಿ ಪೊಲೀಸರು ನಮ್ಮ ಮನೆಗೆ ಬಂದು ನನ್ನನ್ನು ಠಾಣೆಗೆ ಕರೆದೊಯ್ದರು. ರಾತ್ರಿಯಿಡೀ ಠಾಣೆಯಲ್ಲಿ ಕಾಯಿಸಿದರು. ನಾನು ಕರ್ತವ್ಯಕ್ಕೆ ಹಾಜರಾಗುವುದು ಸಾಧ್ಯವಾಗಲಿಲ್ಲ. ಇದನ್ನೇ ನೆಪವಾಗಿಟ್ಟುಕೊಂಡು, ಎರಡೇ ವಾರದಲ್ಲಿ ನನ್ನನ್ನು ವಜಾ ಮಾಡಿದರು. ನನ್ನ ಮೇಲಧಿಕಾರಿಗಳು ನನ್ನನ್ನು ಭಯೋತ್ಪಾದಕನ ತಂದೆ ಎಂದು ಕರೆದರು" ಎಂದು ಸರ್ಫರಾಝ್ ವಿವರಿಸಿದರು. 28 ವರ್ಷ ಸೇವೆ ಸಲ್ಲಿಸಿದ್ದ ಸರ್ಫರಾಝ್ ಗೆ ಪಿಂಚಣಿ ನಿರಾಕರಿಸಲಾಯಿತು ಹಾಗೂ ಗ್ರಾಚ್ಯುಯಿಟಿ ಮತ್ತು ಭವಿಷ್ಯನಿಧಿಯ ಅರ್ಧವನ್ನು ಮಾತ್ರ ನೀಡಲಾಯಿತು.

13 ವರ್ಷದ ಯಾತನೆ

ಮುಂಬೈ ನಿವಾಸಿ ಮರ್ಯಮ್ ಬೀಬಿ (40) ಅವರು ಯಾಗ್ನಿಕ್, ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಅವರಂಥ ಹೋರಾಟಗಾರರಿಗೆ ಕೃತಜ್ಞತೆ ಸಲ್ಲಿಸುತ್ತಾರೆ. "ನಾನು ಇಂದು ಈ ಸ್ಥಿತಿಯಲ್ಲಿದ್ದರೆ ಅವರ ನಿಸ್ವಾರ್ಥ ಕೊಡುಗೆ ಕಾರಣ" ಎಂದು ಮುಂಬೈನಿಂದ ದೂರವಾಣಿ ಮೂಲಕ ಸಂಡೇ ಎಕ್ಸ್‍ಪ್ರೆಸ್ ಜತೆ ಮಾತನಾಡಿದ ಅವರು ಸ್ಪಷ್ಟಪಡಿಸಿದರು.

2016ರಲ್ಲಿ ಆಕೆಯ ಪತಿ ಕಾಸಿಂ ಜಾಫರ್ ಅವರ ಮೃತದೇಹ ರಸ್ತೆಯಲ್ಲಿ ಪತ್ತೆಯಾಗಿತ್ತು. ಇದಕ್ಕೆ ಸ್ವಲ್ಪವೇ ಮೊದಲು ಪೊಲೀಸರು ಜಾಫರ್‍ ರನ್ನು ಬಂಧಿಸಿದ್ದರು. ಪೊಲೀಸರು ಇದನ್ನು ರಸ್ತೆ ಅಪಘಾತ ಎಂದು ಬಿಂಬಿಸಿದರು. ಜಾಫರ್ ಇತರ 17 ಮಂದಿಯ ಜತೆ ಅಹ್ಮದಾಬಾದ್ ನ ಹುಸೇನಿ ತೆಕ್ರಿಗೆ ಯಾತ್ರೆ ಬಂದಿದ್ದರು.

ನ್ಯಾಯಮೂರ್ತಿ ಬೇಡಿ ವರದಿಯ ಪ್ರಕಾರ, ಕ್ರಿಮಿನಲ್ ಗ್ಯಾಂಗ್ ಒಂದರ ಬಗ್ಗೆ ವಿಚಾರಣೆಗೆ ಗುರಿಪಡಿಸಿದ ಪೊಲೀಸರು ಜಾಫರ್ ಅವರನ್ನು ಖಾಸಗಿ ವಾಹನದಲ್ಲಿ ಶಾಹಿಬಾಗ್‍ಗೆ ಕರೆದೊಯ್ದಿದ್ದರು. ಏಕೆ ಬಂಧಿಸಲಾಗಿದೆ ಎಂದು ಜಾಫರ್ ಕೇಳಿದಾಗ, ಅವರನ್ನು ಎಳೆದು ಹಾಕಲಾಗಿತ್ತು.

ಜಾಫರ್‍ ರನ್ನು ಪೇದೆಯೊಬ್ಬ ಅಂದಿನ ಸಬ್ ಇನ್‍ಸ್ಪೆಕ್ಟರ್ ಜೆ.ಎಂ.ಬರ್ವಾದ್ (ಈಗ ಡಿಎಸ್ಪಿ) ಅವರ ಬಳಿಗೆ ಕರೆದೊಯ್ಯುತ್ತಿದ್ದಾಗ ಜಾಫರ್ ನೀರು ಕೇಳಿದ್ದರು. ಅವರನ್ನು ನೀರಿನ ನಳ್ಳಿಯೊಂದರ ಬಳಿ ಬಿಡಲಾಯಿತು. ಪೇದೆ ಮರಳಿದಾಗ ಜಾಫರ್ ನಾಪತ್ತೆಯಾಗಿದ್ದು, ಅವರ ದೇಹ ಬಳಿಕ ಪತ್ತೆಯಾಯಿತು ಎನ್ನುವುದು ಪೊಲೀಸರ ಹೇಳಿಕೆ.

ಆದರೆ ಅಪಘಾತದಲ್ಲಿ ಜಾಫರ್ ಮೃತಪಟ್ಟರು ಎಂದು ಪ್ರಕರಣವನ್ನು ಮುಚ್ಚಿಹಾಕಲು  ಪೊಲೀಸರು ಪ್ರಯತ್ನಿಸಿದ್ದಾರೆ ಎಂದು ವರದಿ ತಿಳಿಸಿದೆ.

Writer - ಸತೀಶ್ ಝಾ, indianexpress.com

contributor

Editor - ಸತೀಶ್ ಝಾ, indianexpress.com

contributor

Similar News