ಎಸ್ಪಿ-ಬಿಎಸ್ಪಿ ಮೈತ್ರಿಗೆ ಹುಳಿ ಹಿಂಡಲು ಆದಿತ್ಯನಾಥ್ ಯತ್ನ

Update: 2019-01-14 03:43 GMT

ಲಕ್ನೋ, ಜ.14: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷ ಐತಿಹಾಸಿಕ ಮೈತ್ರಿ ಮಾಡಿಕೊಂಡ ಬೆನ್ನಲ್ಲೇ ಉಭಯ ಪಕ್ಷಗಳ ನಡುವೆ ಕಂದಕ ನಿರ್ಮಿಸಲು ಮುಖ್ಯಮಂತ್ರಿ ಆದಿತ್ಯನಾಥ್ ಮುಂದಾಗಿದ್ದಾರೆ.

ಉಭಯ ಪಕ್ಷಗಳ ಸಂಘರ್ಷದ ಇತಿಹಾಸ ಮತ್ತು ಉಭಯ ಪಕ್ಷಗಳ ನಡುವಿನ ವೈರುದ್ಧ್ಯಗಳನ್ನು ಎತ್ತಿ ತೋರಿಸಿರುವ ಆದಿತ್ಯನಾಥ್, "ಮುಲಾಯಂ ಸಿಂಗ್ ಯಾದವ್ ಬದಲಾಗಿ ಮಾಯಾವತಿಯನ್ನು ಪ್ರಧಾನಿ ಹುದ್ದೆಗೆ ಬೆಂಬಲಿಸಲು ಅಖಿಲೇಶ್ ಯಾದವ್ ಸಿದ್ಧರಿದ್ದಾರೆಯೇ" ಎಂದು ಪ್ರಶ್ನಿಸಿದ್ದಾರೆ.

ಲಕ್ನೋದಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, "ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ತಂದೆ ಪ್ರಧಾನಿಯಾಗಬೇಕು ಎಂದು ಅಖಿಲೇಶ್ ಬಯಸಿದ್ದರು. ಈ ಬಾರಿ ಯಾರನ್ನು ಪ್ರಧಾನಿ ಎಂದು ಬಿಂಬಿಸುತ್ತಾರೆ? ಮಾಯಾವತಿಯನ್ನೋ ಅಥವಾ ಮುಲಾಯಂ ಅವರನ್ನೋ? ಎಂದು ಪ್ರಶ್ನಿಸಿದರು. ಈ ಬಾರಿ ಮುಲಾಯಂ ಸಿಂಗ್ ಯಾದವ್ ಅವರಿಗೆ ಸ್ಪರ್ಧಿಸಲು ಸಮಾಜವಾದಿ ಪಕ್ಷದ ಟಿಕೆಟ್ ಸಿಕ್ಕುವುದೇ ಅನುಮಾನ ಎಂದು ಛೇಡಿಸಿದರು.

"ಮಾಯಾವತಿ ಎಸ್ಪಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅಖಿಲೇಶ್ 10 ಸ್ಥಾನಕ್ಕೂ ತೃಪ್ತಿಪಡುತ್ತಿದ್ದರು. ಅವರು ಸ್ಪರ್ಧಿಸಲು ಬಯಸಿರುವ ಕನೌಜ್ ಕ್ಷೇತ್ರದಲ್ಲಿ ಗೆಲ್ಲುವುದೂ ಕಷ್ಟಸಾಧ್ಯ ಎನ್ನುವುದು ಅವರಿಗೆ ಗೊತ್ತು" ಎಂದು ಆದಿತ್ಯನಾಥ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News