ದುಬೈಯಲ್ಲಿ ರಾಹುಲ್ ಉಪಾಹಾರಕ್ಕೆ 1.36 ಲಕ್ಷ ರೂ. ಖರ್ಚಾಯಿತೇ?, ಕಾಂಗ್ರೆಸ್ ಅಧ್ಯಕ್ಷ ಬೀಫ್ ಸೇವಿಸಿದರೇ?

Update: 2019-01-14 10:42 GMT

ಶುಕ್ರವಾರ ಹಾಗೂ ಶನಿವಾರ ದುಬೈಗೆ ಭೇಟಿ ನೀಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ದುಬೈ ಉದ್ಯಮಿಯೊಬ್ಬರ ಮನೆಯಲ್ಲಿ ಉಪಾಹಾರ ಸೇವಿಸಿದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ನಗರದ ಪಂಚತಾರಾ ಹೋಟೆಲ್‍ ನಲ್ಲಿ ಕಾಂಗ್ರೆಸ್ ಅಧ್ಯಕ್ಷ ಅತಿದುಬಾರಿ ಬೆಲೆಯ ಉಪಾಹಾರ ಸೇವಿಸಿದ್ದಾರೆ ಎಂದು ಫೋಟೊದ ಜತೆ ವಿವರಣೆ ನೀಡಲಾಗಿದ್ದು, ಇದರ ಜತೆಗೆ ರಾಹುಲ್‍ ಗಾಂಧಿ ಬೀಫ್ ಸೇವಿಸಿದ್ದಾರೆ ಎಂದು ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದ್ದು, ವೈರಲ್ ಆಗಿದೆ.

ರಾಹುಲ್‍  ಗಾಂಧಿಯವರು ಉದ್ಯಮಿ ಸನ್ನಿ ವರ್ಕೆ ಮತ್ತು ಕಾಂಗ್ರೆಸ್ ಸಲಹೆಗಾರ ಸ್ಯಾಮ್ ಪಿತ್ರೊಡಾ ಜತೆಗೆ ಡೈನಿಂಗ್ ಟೇಬಲ್ ಮುಂದೆ ಕೂತಿದ್ದು, ಎದುರು ಐಷಾರಾಮಿ ತಿಂಡಿ ತಿನಿಸುಗಳನ್ನು ಇರಿಸಿರುವ ಚಿತ್ರ ವೈರಲ್ ಆಗಿದೆ. ಇದರ ಜತೆಗೆ ರಾಹುಲ್ ಗಾಂಧಿ ಹಿಲ್ಟನ್ ಹೋಟೆಲ್‍ನಲ್ಲಿ 1500 ಪೌಂಡ್ (1,36,347 ರೂ.) ಮೌಲ್ಯದ ಉಪಾಹಾರ ಸೇವಿಸಿದ್ದಾರೆ ಎಂಬ ಶೀರ್ಷಿಕೆಯನ್ನೂ ನೀಡಲಾಗಿದ್ದು, ಜತೆಗೆ ಚಿತ್ರದಲ್ಲಿ ಕಾಣುವ ಕತ್ತರಿಸಿದ ತುಂಡುಗಳು ಬೀಫ್ ಎಂದು ಹಲವರು ಈ ಫೋಟೊಗಳನ್ನು ವೈರಲ್ ಮಾಡಿದ್ದಾರೆ.

“ರಾಹುಲ್‍ ಗಾಂಧಿಯವರು ಭಾರತದ ಸಾಗರೋತ್ತರ ಕಾಂಗ್ರೆಸ್ ಘಟಕದ ಅಧ್ಯಕ್ಷ ಸ್ಯಾಮ್ ಪಿತ್ರೊಡಾ ಅವರನ್ನು ಭೇಟಿ ಮಾಡಿ ಬಡತನದ ಬಗ್ಗೆ ಚರ್ಚಿಸಿದರು. ಆದರೆ ಹಿಲ್ಟನ್ ಬ್ಯಾಂಕ್ವೆಟ್ ಹಾಲ್‍ನಲ್ಲಿ 1500 ಪೌಂಡ್ ಮೌಲ್ಯದ ಉಪಾಹಾರ ಸವಿದರು" ಎಂದು ಟ್ವಿಟರ್ ಬಳಕೆದಾರ ರಿಷಿ ಬಾಗ್ರಿ ಎಂಬವರು ಟ್ವೀಟ್ ಮಾಡಿದ್ದು, ಈ ಟ್ವೀಟ್ 2000ಕ್ಕೂ ಹೆಚ್ಚು ಬಾರಿ ಮರುಟ್ವೀಟ್ ಆಗಿದೆ ಹಾಗೂ 3000ಕ್ಕೂ ಹೆಚ್ಚು ಲೈಕ್ ಪಡೆದಿದೆ.

ಬಾಗ್ರಿಯವರ ಟ್ವಿಟರ್ ಖಾತೆ ಈ ಹಿಂದೆಯೂ ನಕಲಿ ಹಾಗೂ ದೃಢೀಕರಣ ಮಾಡದ ಫೋಟೊ ಹಾಗೂ ಚಿತ್ರಗಳನ್ನು ಶೇರ್ ಮಾಡಿತ್ತು. ಬಾಗ್ರಿಯವರನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಟ್ವಿಟ್ಟರ್‍ ನಲ್ಲಿ ಫಾಲೋ ಮಾಡುತ್ತಿದ್ದಾರೆ.

ಫೇಸ್‍ ಬುಕ್‍ ನಲ್ಲೂ ಈ ಫೋಟೊ ವೈರಲ್ ಆಗಿದ್ದು, "ರಾಹುಲ್‍ಗಾಂಧಿ ಸ್ಯಾಮ್ ಪಿತ್ರೋಡಾ ನೇತೃತ್ವದ ನಿಯೋಗವನ್ನು ಇಂದು ಹಿಲ್ಟನ್ ಬ್ಯಾಂಕ್ವೆಟ್ ಹಾಲ್‍ನಲ್ಲಿ ಭೇಟಿ ಮಾಡಿದ್ದು, 1350 ಪೌಂಡ್ ಮೌಲ್ಯದ (ಅಂದಾಜು 1.35 ಲಕ್ಷ ರೂಪಾಯಿ) ಉಪಾಹಾರವನ್ನು ಪ್ರತಿಯೊಬ್ಬರೂ ಸೇವಿಸಿ, ಬಡತನದ ಬಗ್ಗೆ ಚರ್ಚಿಸಿದರು" ಎಂಬ ಶೀರ್ಷಿಕೆ ನೀಡಲಾಗಿತ್ತು.

ಇದು ಕುತೂಹಲ ಕೆರಳಿಸಲು ಕಾರಣವೆಂದರೆ ದುಬೈನ ಅಧಿಕೃತ ಕರೆನ್ಸಿ ದಿರ್ಹಮ್; ಪೌಂಡ್ ಅಲ್ಲ ಎನ್ನುವ ವಾಸ್ತವ.

ಫೋಟೊ ಪರಿಶೀಲನೆ

ರಾಹುಲ್ ಗಾಂಧಿಯವರ ದುಬೈ ಭೇಟಿ ಬಗೆಗಿನ ವರದಿಗಳನ್ನು ಪರಿಶೀಲಿಸಿದಾಗ ಕಂಡುಬಂದ ಅಂಶವೆಂದರೆ ಈ ಫೋಟೊ ಕ್ಲಿಕ್ಕಿಸಿದ್ದು, ಜೆಮ್ಸ್ ಎಜ್ಯುಕೇಶನ್ ಮತ್ತು ವರ್ಕೆ ಫೌಂಡೇಷನ್‍ ಅಧ್ಯಕ್ಷ ಸನ್ನಿ ವರ್ಕೆ ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಉಪಾಹಾರ ಕೂಟದಲ್ಲಿ ಎನ್ನುವುದು.

ಈ ಕೂಟದಲ್ಲಿ ಲುಲು ಸಮೂಹದ ಸಂಸ್ಥಾಪಕ ಯುಸೂಫ್ ಅಲಿ ಎಂ.ಎ, ಕಾಂಗ್ರೆಸ್ ಮುಖಂಡ ಪಿತ್ರೋಡಾ ಹಾಗೂ ಮಿಲಿಂದ್ ದೇವೂರ ಸೇರಿದಂತೆ ದುಬೈನ ಹಲವು ಮಂದಿ ಉದ್ಯಮಿಗಳು ಪಾಲ್ಗೊಂಡಿದ್ದರು.

ಯೂಸೂಫ್ ಅಲಿಯವರ ಕಚೇರಿಯನ್ನು ಬೂಮ್ ಸಂಪರ್ಕಿಸಿದಾಗ, ವರ್ಕೆಯವರ ನಿವಾಸದಲ್ಲಿ ಈ ಉಪಾಹಾರ ಕೂಟ ನಡೆದದ್ದನ್ನು ಖಚಿತಪಡಿಸಿದರು. "ಈ ಉಪಾಹಾರ ಕೂಟ ಯಾವುದೇ ಹೋಟೆಲ್‍ನಲ್ಲಿ ನಡೆದದ್ದಲ್ಲ; ಬದಲಾಗಿ ವರ್ಕೆಯವರ ನಿವಾಸದಲ್ಲಿ" ಎಂದು ಅಲಿಯವರ ನಿಕಟವರ್ತಿಯೊಬ್ಬರೂ ಸ್ಪಷ್ಟಪಡಿಸಿದ್ದಾರೆ. ಲುಲು ಸಮೂಹದ ಸಂವಹನ ವ್ಯವಸ್ಥಾಪಕ ನಂದಕುಮಾರ್ ಕೂಡಾ ಇದನ್ನು ದೃಢಪಡಿಸಿದ್ದಾರೆ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ ವಕ್ತಾರ ಕೂಡಾ, "ಈ ಉಪಾಹಾರ ಕೂಟವನ್ನು ವರ್ಕೆ ತಮ್ಮ ನಿವಾಸದಲ್ಲಿ ಅಯೋಜಿಸಿದ್ದರು. ಯಾವುದೇ ಹೋಟೆಲ್‍ನ ಬ್ಯಾಂಕ್ವೆಟ್ ಹಾಲ್‍ನಲ್ಲಿ ಅಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಜನವರಿ 11ರಂದು ಕಾಂಗ್ರೆಸ್ ಪಕ್ಷದ ಅಧಿಕೃತ ಹ್ಯಾಂಡಲ್‍ ನಿಂದ ಈ ಚಿತ್ರ ಹಾಗೂ ವಿವರಗಳನ್ನು ಟ್ವೀಟ್ ಮಾಡಲಾಗಿತ್ತು.

ಈ ಉಪಾಹಾರ ಕೂಟ ಮನೆಯಲ್ಲಿ ನಡೆದದ್ದು ಎನ್ನುವುದನ್ನು ಕಾಂಗ್ರೆಸ್ ಕಾರ್ಯಕರ್ತರು ದೃಢಪಡಿಸಿರುವುದು ಕೂಡಾ ನಮಗೆ ಕಂಡುಬಂದಿದೆ.

ಟ್ವಿಟರ್ ಬಳಕೆದಾರರೊಬ್ಬರು ಇದೇ ಉಪಾಹಾರ ಕೂಟದ ಚಿತ್ರವೊಂದನ್ನು ಪೋಸ್ಟ್ ಮಾಡಿ, ಮಾಂಸದ ತುಂಡನ್ನು ಹೈಲೈಟ್ ಮಾಡಿ ಇದನ್ನು ಬೀಫ್ ಎಂದು ಪ್ರತಿಪಾದಿಸಿದ್ದಾರೆ. ಈ ಪೋಸ್ಟ್ 1000 ಬಾರಿ ಮರುಟ್ವೀಟ್ ಆಗಿದೆ.

ಇದೇ ಚಿತ್ರ ಫೇಸ್‍ಬುಕ್ ಹಾಗೂ ವಾಟ್ಸಪ್‍ನಲ್ಲೂ ವೈರಲ್ ಆಗಿದ್ದು, "ದತ್ತಾತ್ರೇಯ ಕುಲ ಬ್ರಾಹ್ಮಣ ರಾಹುಲ್‍ ಗಾಂಧಿ ದುಬೈನಲ್ಲಿ ಗೋಮಾಂಸ ಸೇವಿಸುತ್ತಿರುವ ಚಿತ್ರ ಇದು..ಬೇರೇನು ಹೇಳಬೇಕೇ!!" ಎಂದು ಶೀರ್ಷಿಕೆ ನೀಡಲಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ಇಸ್ಲಾಮಿಕ್ ದೇಶವಾಗಿರುವುದರಿಂದ ಇಲ್ಲಿ ಪೋರ್ಕ್ ನೀಡುವುದಿಲ್ಲ. ಆದ್ದರಿಂದ ಇದು ಬೀಫ್ ಎಂದು ಪ್ರತಿಪಾದಿಸಲಾಗಿತ್ತು.

ಕಾಂಗ್ರೆಸ್ ವಕ್ತಾರರನ್ನು ಸಂಪರ್ಕಿಸಿ ಈ ಬಗ್ಗೆ ಪ್ರಶ್ನಿಸಿದಾಗ, ಈ ಉಪಾಹಾರ ಕೂಟದಲ್ಲಿ ಬೀಫ್ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು. ಮೊದಲ ಫೋಟೊದಲ್ಲಿ ಹೈಲೈಟ್ ಮಾಡಿರುವ ಮಾಂಸ ಟರ್ಕಿಯದ್ದು. ರಾಹುಲ್‍ ಗಾಂಧಿ ಕೇವಲ ಕಿತ್ತಳೆ ರಸ ಮತ್ತು ಮೊಟ್ಟೆಯನ್ನಷ್ಟೇ ಸೇವಿಸಿದರು ಎಂದೂ ಅವರು ಹೇಳಿದ್ದಾರೆ.

ಕೃಪೆ: scroll.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News