ಮದ್ಯ ಮುಕ್ತ ಕರ್ನಾಟಕಕ್ಕಾಗಿ 12 ದಿನ ಮಹಿಳೆಯರ ದಿಟ್ಟ ಹೆಜ್ಜೆ..!

Update: 2019-01-14 16:51 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.14: ಹಿಂದಿನ ಕಾಲಘಟ್ಟದಿಂದಲೂ ಮಾನವ ಒಂದಲ್ಲ ಒಂದು ವ್ಯವಸನಕ್ಕೆ ದಾಸನೇ ಆಗುತ್ತಿದ್ದಾನೆ. ತನ್ನ ಬದುಕನ್ನು ಆರೋಗ್ಯಕರವಾಗಿ ಅರಳಿಸುವ ಬದಲು ನರಳಿಸುವ ಈ ವ್ಯಸನಗಳು, ಕುಟುಂಬಗಳ ಸ್ವಾಸ್ಥಕ್ಕೆ ಬಹು ದೊಡ್ಡ ಪೆಟ್ಟಾಗಿದೆ. ಇಂತಹ ಸಂದರ್ಭದಲ್ಲಿ ಮದ್ಯ ಮುಕ್ತ ಕರ್ನಾಟಕ ಕಟ್ಟುವ ಉದ್ದೇಶದಿಂದ ಬೃಹತ್ ಆಂದೋಲನವೊಂದನ್ನು ಮಹಿಳೆಯರೇ ರೂಪಿಸಿಕೊಂಡಿದ್ದು, ವ್ಯಸನದ ದಾಸ್ಯ ತಪ್ಪಿಸಲು ದಿಟ್ಟ ಹೆಜ್ಜೆಗಳನ್ನೇ ಹಾಕಲು ಮುಂದಾಗಿದ್ದಾರೆ.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕನಸುಗಳಲ್ಲಿ ಪ್ರಮುಖವಾದ ಮದ್ಯ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಬದ್ಧವಾಗಿರುವ ಮದ್ಯ ನಿಷೇಧ ಆಂದೋಲನ ಕರ್ನಾಟಕ, ಇದೇ ತಿಂಗಳ 19ರಿಂದ ಸರ್ವ ಧರ್ಮ ಗುರುಗಳ ಉಪಸ್ಥಿತಿಯಲ್ಲಿ ಚಿತ್ರದುರ್ಗದಿಂದ ಪಾದಯಾತ್ರೆ ಆರಂಭಿಸಲಿದ್ದು, ಬರೋಬ್ಬರಿ 3 ಸಾವಿರಕ್ಕೂ ಅಧಿಕ ಮಹಿಳೆಯರು ಈ ಆಂದೋಲನದಲ್ಲಿ ಕೈ ಜೋಡಿಸಿದ್ದಾರೆ.

ಜ.26ರಂದು ತುಮಕೂರಿಗೆ ತಲುಪಲಿರುವ ಈ ಯಾತ್ರೆಯು, ಅಂದು ಎಲ್ಲ ಪಕ್ಷದ ನಾಯಕರೊಂದಿಗೆ ಚರ್ಚೆ ನಡೆಸಿ, ಮದ್ಯ ನಿಷೇಧಕ್ಕೆ ಒತ್ತಡ ಹಾಕಲಿದ್ದು, ಬಳಿಕ ಜ.30ರಂದು ಮದ್ಯ ನಿಷೇಧ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಚಳುವಳಿ ಹಮ್ಮಿಕೊಳ್ಳಲಾಗಿದ್ದು, ಒಟ್ಟು 12 ದಿನಗಳ ಕಾಲ ಮದ್ಯ ನಿಷೇಧಕ್ಕೆ ದಿಟ್ಟ ಹೆಜ್ಜೆ ಹಾಕಲಿದ್ದೇವೆ ಎನ್ನುತ್ತಾರೆ ಆಂದೋಲನದ ಸಂಚಾಲಕರು.

ಸಂಪೂರ್ಣ ಮದ್ಯ ನಿಷೇಧದ ಬೇಡಿಕೆ ಇಂದು, ನಿನ್ನೆಯದಲ್ಲ. ಗಾಂಧೀಜಿ ತಮ್ಮ ಬದುಕಿನುದ್ದಕ್ಕೂ ಮದ್ಯ ನಿಷೇಧ ಆಗಲೇಬೇಕು ಎಂದಿದ್ದರು. ಮದ್ಯ ಮಾರಾಟದ ಆದಾಯದಿಂದ ದೇಶ ನಡೆಯಬಾರದು ಎನ್ನುವ ಕಠಿಣ ನಿಲುವು ಹೊಂದಿದ್ದರು. ಆದರೆ, ಅಂದಿನಿಂದ ಇದುವರೆಗೂ ಹಲವು ಹೋರಾಟಗಳು ನಡೆದರೂ, ಯಾವುದೇ ಬದಲಾವಣೆ ಆಗಿಲ್ಲ. ಹೀಗಾಗಿ, ಈ ಬಾರಿ ಬಹು ದೊಡ್ಡ ಆಂದೋಲನ ರೂಪಿಸಿ, ಸರಕಾರದ ಗಮನ ಸೆಳೆಯಲು ಮಹಿಳೆಯರೇ ಆಂದೋಲನದಲ್ಲಿ ಧುಮುಕಿದ್ದಾರೆ ಎಂದು ಮದ್ಯ ನಿಷೇಧ ಚಳುವಳಿಯ ಪ್ರಮುಖ ಸಂಚಾಲಕಿ ವಿದ್ಯಾ ಪಾಟೀಲ್ ತಿಳಿಸಿದರು.

4 ರಾಜ್ಯದಲ್ಲಿಲ್ಲ ಮದ್ಯ: ಸಂವಿಧಾನದ ಪರಿಚ್ಛೇದ 47ರಂತೆ ಮದ್ಯಪಾನ ನಿಷೇಧ ಜಾರಿಯೊಂದಿಗೆ ಮಾದಕ ವಸ್ತುಗಳ ಸೇವನೆಯನ್ನೂ ಪ್ರತಿಬಂಧಿಸಬೇಕೆಂದು ಸೂಚಿಸಲಾಗಿದೆ. ಆದರೆ, ಇದುವರೆಗೂ ದೇಶದ 4 ರಾಜ್ಯಗಳಲ್ಲಿ ಮಾತ್ರ ಮದ್ಯ ನಿಷೇಧ ಮಾಡಿದ್ದು, ಉಳಿದ ರಾಜ್ಯಗಳು ಈ ಕ್ರಮಕ್ಕೆ ಮುಂದಾಗಿಲ್ಲ.

ಆದಾಯ ಹೆಚ್ಚು?: ಕಳೆದ ಎಂಟು ವರ್ಷಗಳಲ್ಲಿ 9 ಸಾವಿರ ಕೋಟಿಯಿಂದ 18 ಸಾವಿರ ಕೋಟಿ ರೂಪಾಯಿವರೆಗೂ ಅಬಕಾರಿ ಆದಾಯವನ್ನು ಹೆಚ್ಚಿಸಿದ ಕುಖ್ಯಾತಿ ಕರ್ನಾಟಕ ರಾಜ್ಯಕ್ಕಿದೆ. ಅಷ್ಟೇ ಅಲ್ಲದೆ, ಕಾನೂನು ಬಾಹಿರ ಮದ್ಯ ಮಾರಾಟಕ್ಕೆ ತಡೆ ಹಾಕಿಲ್ಲ ಎನ್ನುವುದು ಆಂದೋಲನಕಾರರ ಗಂಭೀರ ಆರೋಪ.

ಅಬಕಾರಿಯಿಂದಲೇ ಸರಕಾರಕ್ಕೆ ಆದಾಯ ಗಳಿಕೆ ಎನ್ನುವುದು ಭ್ರಮೆ ಅಷ್ಟೇ. ಅಲ್ಲದೆ, ಹಲವು ಆರೋಗ್ಯ ಸೇವಾ ಸಂಸ್ಥೆಗಳು ಅಧ್ಯಯನ ನಡೆಸಿದ್ದು, ಅಬಕಾರಿ ಆದಾಯಕ್ಕಿಂತ, ಅನಾರೋಗ್ಯಕ್ಕೆ ಆಗುವ ಖರ್ಚು ಹೆಚ್ಚಾಗಿದೆ. ಅದರಲ್ಲೂ ಮಹಿಳೆಯರ ಮೇಲಾಗುವ ಶೇ.70ಕ್ಕೂ ಅಧಿಕ ದೌರ್ಜನ್ಯ, ಶೇ.80ರಷ್ಟು ಕೌಟುಂಬಿಕ ಹಿಂಸಾ ಪ್ರಕರಣಗಳಿಗೆ ಈ ಮದ್ಯಪಾನವೇ ಕಾರಣವಾಗಿವೆ ಎಂದು ಹೇಳಲಾಗುತ್ತದೆ.

2015ರಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಮಹಿಳೆಯರು, ಮದ್ಯ ನಿಷೇಧಕ್ಕೆ ಪಟ್ಟು ಹಿಡಿದು, ರಾಯಚೂರಿನಲ್ಲಿ ಬೀದಿಗಿಳಿದು, ಮದ್ಯ ನಿಷೇಧ ಚಳುವಳಿಗೆ ಮರು ಹುಟ್ಟು ನೀಡಿದರು. ಇದೀಗ ಮತ್ತೆ, 12 ದಿನಗಳ ಕಾಲದ ಪಾದಯಾತ್ರೆ ಹಮ್ಮಿಕೊಳ್ಳುವ ಮೂಲಕ ಬಹು ದೊಡ್ಡ ಹೋರಾಟಕ್ಕೆ ಮುಂದಾಗಿದ್ದಾರೆ.

ಮತ ಬಹಿಷ್ಕಾರದ ಎಚ್ಚರಿಕೆ

‘ರಾಜ್ಯ ಸರಕಾರವು ಮುಂಬರುವ ಲೋಕಸಭೆ ಚುನಾವಣೆವರೆಗೂ ಮದ್ಯ ನಿಷೇಧಕ್ಕೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಮಹಿಳೆಯರು ಮತ ಬಹಿಷ್ಕರಿಸುವ ಆಂದೋಲನಕ್ಕೆ ಚಾಲನೆ ನೀಡಲಾಗುವುದು.

-ರಾಧಿಕಾ, ಆಂದೋಲನದ ಸದಸ್ಯೆ

Writer - -ಸಮೀರ್, ದಳಸನೂರು

contributor

Editor - -ಸಮೀರ್, ದಳಸನೂರು

contributor

Similar News