33 ವರ್ಷಗಳಿಂದ ಕುಂಭಮೇಳದ ಆಕರ್ಷಣೆ ಮುಹಮ್ಮದ್ ಮೆಹಮೂದರ ದೀಪಾಲಂಕಾರ

Update: 2019-01-15 10:37 GMT

ಬುನೊರ್, ಜ.15: ಪ್ರಯಾಗ್ ರಾಜ್ ನಗರದಲ್ಲಿ ಗಂಗಾ ನದಿ ತಟದಲ್ಲಿರುವ ಖ್ಯಾತ ಜುನಾ ಅಖಾರ ಟೆಂಟ್ ಗಳಿಗೆ ಕಳೆದ 33 ವರ್ಷಗಳಿಂದ ದೀಪಾಲಂಕಾರದ ವ್ಯವಸ್ಥೆಗಳನ್ನು ಮಾಡುತ್ತಿರುವವರು ಮುಹಮ್ಮದ್ ಮೆಹಮೂದ್.

‘ಮುಲ್ಲಾ ಜಿ ಲೈಟ್ ವಾಲೇ’ ಎಂದೇ ಖ್ಯಾತರಾಗಿರುವ 77 ವರ್ಷದ ಇಲೆಕ್ಟ್ರಿಶಿಯನ್ ವೃತ್ತಿಯವರಾದ ಇವರು ಅಖಾರಾದ ಬೃಹತ್ ಟೆಂಟ್ ಗಳಿಗೆ  ಬೆಳಕಿನ ವ್ಯವಸ್ಥೆಗಳನ್ನು ಮಾಡುವಲ್ಲಿ ಅದೆಷ್ಟು ನಿಸ್ಸೀಮರೆಂದರೆ ಈ ಟೆಂಟ್ ಗಳು ಅಲ್ಲಿರುವ ಇತರ ಟೆಂಟ್ ಗಳಿಗಿಂತ ವಿಭಿನ್ನವಾಗಿ ಹಾಗೂ ವಿಶಿಷ್ಟವಾಗಿ ಕಾಣುತ್ತವೆ.

“ಕುಂಭ ಮೇಳಕ್ಕೆ ಬಂದಿರುವ ಸಾಧುಗಳು ವಾಸಿಸುವ ಈ ಟೆಂಟ್ ಗಳ ಪೈಕಿ ನಾನು ದೀಪಾಲಂಕಾರ ಮಾಡಿದ ಟೆಂಟ್ ‍ಗಳ ಸೌಂದರ್ಯವನ್ನು ಹಾಗೂ ನನ್ನ ಕೌಶಲ್ಯವನ್ನು ರಾತ್ರಿ ಹೊತ್ತು ನೋಡಬೇಕು'' ಎಂದು ಮೆಹಮೂದ್ ಹೇಳುತ್ತಾರೆ.

ಅವರಿಗೆ ಜುನಾ ಆಖಾರದ ಸಾಧುಗಳ ಸಂಪರ್ಕ 33 ವರ್ಷಗಳ ಹಿಂದೆ ಆಗಿತ್ತು. ಆಗ ಅವರಿಗೆ ಅಖಾರ ಸಂಸ್ಕೃತಿಯ ಬಗ್ಗೆ ಹೆಚ್ಚೇನೂ ತಿಳಿದಿರಲಿಲ್ಲ. ನಂತರ ಸಾಧುಗಳು ಅವರ ಸ್ನೇಹಿತರಾಗಿ ಪ್ರತಿ ಬಾರಿ ಕುಂಭ ಮೇಳದ ದಿನಗಳು ಸಮೀಪಿಸುತ್ತಿರುವಂತೆ ಅವರಿಗೆ ಮಾಹಿತಿ ನೀಡುತ್ತಾರೆ.

“ಎಲ್ಲರೂ ನನ್ನನ್ನು ತಮ್ಮ ಕುಟುಂಬ ಸದಸ್ಯರಂತೆ ನೋಡುತ್ತಾರೆ. ನನ್ನ ಕೆಲಸಕ್ಕೆ ನನಗೆ ಹಣ ದೊರಕುತ್ತದೆಯಾದರೂ ಅದಕ್ಕಿಂತಲೂ ಮಿಗಿಲಾದ ಸಂತೃಪ್ತಿ ಈಗ ನನಗೆ ಮಹತ್ವದ್ದಾಗಿದೆ. ಕುಂಭ ಮೇಳದ ಭಾಗವಾಗಲು ನನಗೆ ಖುಷಿಯಾಗುತ್ತದೆ” ಎನ್ನುವ ಮೆಹಮೂದ್ ಅವರಿಗೆ  ಕುಂಭ ಮೇಳದ ಸ್ಥಳದಲ್ಲಿಯೇ ನಮಾಝ್ ಸಲ್ಲಿಸಲು ಸಾಧುಗಳು ಸ್ಥಳಾವಕಾಶ ಒದಗಿಸಿದ್ದಾರೆ.

ಮುಝಫ್ಫರನಗರದಲ್ಲಿ ಇಲೆಕ್ಟ್ರಿಕಲ್ ಅಂಗಡಿಯನ್ನು ಹೊಂದಿರುವ ಅವರಿಗೆ ಒಬ್ಬ ಪುತ್ರ ಹಾಗೂ ಮೂವರು ಪುತ್ರಿಯರಿದ್ದಾರೆ.  ಮೆಹಮೂದ್ ಪುತ್ರ ತಂದೆಯ ಕೆಲಸ ಕಾರ್ಯದಲ್ಲಿ ಕೈಜೋಡಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News