ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹೊಂದಿದ್ದರೆ ಏನಾಗುತ್ತದೆ?

Update: 2019-01-15 11:14 GMT

ನೀವು ಯಾವುದೇ ದೊಡ್ಡ ಖರೀದಿಯನ್ನು ಮಾಡುವಾಗಿ ನಿಮ್ಮ ಕಾಯಂ ಖಾತೆ ಸಂಖ್ಯೆ ಅಥವಾ ಪಾನ್ ಅನ್ನು ಉಲ್ಲೇಖಿಸುವುದು ಅಗತ್ಯವಾಗಿದೆ. ಬ್ಯಾಂಕ್ ಖಾತೆ ತೆರೆಯಲು,ಕಾರು ಖರೀದಿಗೆ ಸಾಲ ಅಥವಾ ಗೃಹಸಾಲವನ್ನು ಪಡೆದುಕೊಳ್ಳುವಾಗಲೂ ಪಾನ್ ಅನ್ನು ಒದಗಿಸಬೇಕಾಗುತ್ತದೆ. ಪಾನ್ ಒಂದು ವಿಶಿಷ್ಟ ಸಂಖ್ಯೆಯಾಗಿದ್ದು,ಇಬ್ಬರು ವ್ಯಕ್ತಿಗಳು ಅಥವಾ ಎರಡು ಸಂಸ್ಥೆಗಳು ಒಂದೇ ಪಾನ್ ಸಂಖ್ಯೆಯನ್ನು ಹೊಂದಿರುವಂತಿಲ್ಲ. ಅಲ್ಲದೆ ಆದಾಯ ತೆರಿಗೆ ನಿಯಮಗಳನ್ವಯ ಯಾವುದೇ ವ್ಯಕ್ತಿಯು ಎರಡು ಅಥವಾ ಅದಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ವಿಭಿನ್ನ ಪಾನ್ ಸಂಖ್ಯೆಗಳನ್ನು ಹೊಂದಿರುವಂತಿಲ್ಲ. ಯಾವುದೇ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಪಾನ್‌ಕಾರ್ಡ್‌ಗಳನ್ನು ಹೊಂದಿದ್ದರೆ ಆದಾಯ ತೆರಿಗೆ ಕಾಯ್ದೆ,1961ರ ಕಲಂ 272 ಬಿ ಅಡಿ 10,000 ರೂ.ದಂಡವನ್ನು ವಿಧಿಸಲಾಗುತ್ತದೆ. ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್‌ಗಳು ವಿತರಣೆಯಾಗಿದ್ದರೆ ಆತ ಹೆಚ್ಚುವರಿ ಪಾನ್ ಕಾರ್ಡ್‌ಗಳನ್ನು ತಕ್ಷಣವೇ ಆದಾಯ ತೆರಿಗೆ ಇಲಾಖೆಗೆ ಒಪ್ಪಿಸಬೇಕಾಗುತ್ತದೆ.

ನೀವು ಒಂದಕ್ಕಿಂತ ಹೆಚ್ಚು ಪಾನ್‌ಕಾರ್ಡ್‌ಗಳನ್ನು ಹೊಂದಿದ್ದರೆ ಮತ್ತು ಡಿಮ್ಯಾಟ್ ಖಾತೆಗೆ ಒಂದು,ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಮತ್ತು ತೆರಿಗೆಗಳನ್ನು ಪಾವತಿಸಲು ಇನ್ನೊಂದು,ಹೀಗೆ ವಿವಿಧ ಉದ್ದೇಶಗಳಿಗಾಗಿ ಅವುಗಳನ್ನು ಬಳಸುತ್ತಿದ್ದರೆ ಅವುಗಳ ಪೈಕಿ ನೀವು ಒಂದನ್ನು ಮಾತ್ರ ಉಳಿಸಿಕೊಂಡು ಇನ್ನೊಂದನ್ನು ತಕ್ಷಣವೇ ಇಲಾಖೆಗೆ ಒಪ್ಪಿಸಬೇಕು. ಇಂತಹ ಸಂದರ್ಭದಲ್ಲಿ ಆದಾಯ ತೆರಿಗೆಗಾಗಿ ಬಳಸುತ್ತಿರುವ ಸಂಖ್ಯೆಯನ್ನು ಉಳಿಸಿಕೊಳ್ಳುವುದು ಒಳ್ಳೆಯದು. ಅಲ್ಲದೆ ಹೀಗೆ ಇಲಾಖೆಗೆ ಒಪ್ಪಿಸಿರುವ ಸಂಖ್ಯೆಯನ್ನು ನೀಡಿರುವ ಸಂಸ್ಥೆಗೆ ನಿಮ್ಮ ಸರಿಯಾದ ಪಾನ್ ಸಂಖ್ಯೆಯನ್ನು ತಿಳಿಸಬೇಕಾಗುತ್ತದೆ.

ನೀವು ಪಾನ್ ಕಾರ್ಡ್‌ನ್ನು ಕಳೆದುಕೊಂಡಿದ್ದರೆ ಹೊಸ ಕಾರ್ಡ್‌ನ ಬದಲು ಡುಪ್ಲಿಕೇಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಯಾವಾಗಲೂ ಒಳ್ಳೆಯದು. ಒಂದು ವೇಳೆ ಪಾನ್ ಸಂಖ್ಯೆ ಗೊತ್ತಿರದಿದ್ದಲ್ಲಿ ಆದಾಯ ತೆರಿಗೆ ಇಲಾಖೆಯು ತನ್ನ ವೆಬ್‌ಸೈಟ್‌ನಲ್ಲಿ ಒದಗಿಸಿರುವ ‘ನೋ ಯುವರ್ ಪಾನ್(ನಿಮ್ಮ ಪಾನ್ ತಿಳಿದುಕೊಳ್ಳಿ) ಸೌಲಭ್ಯವನ್ನು ಬಳಸಿಕೊಂಡು ಅದನ್ನು ತಿಳಿದುಕೊಳ್ಳಬಹುದಾಗಿದೆ. ಇಲ್ಲಿ ನಿಮ್ಮ ಹೆಸರು,ತಂದೆಯ ಹೆಸರು ಮತ್ತು ಜನ್ಮದಿನಾಂಕದಂತಹ ವಿವರಗಳನ್ನು ಒದಗಿಸುವ ಮೂಲಕ ಆನ್‌ಲೈನ್‌ನಲ್ಲಿ ಪಾನ್ ಸಂಖ್ಯೆಯನ್ನು ತಿಳಿಯಬಹುದು. ಹೀಗೆ ಪಾನ್ ಸಂಖ್ಯೆ ಗೊತ್ತಾದ ಬಳಿಕ ಡುಪ್ಲಿಕೇಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು.

ಪಾನ್ ಕಾರ್ಡ್‌ಗಳನ್ನು ಮರಳಿಸುವುದು ಹೇಗೆ?

ಹೆಚ್ಚುವರಿ ಪಾನ್ ಕಾರ್ಡ್‌ಗಳನ್ನು ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಇಲಾಖೆಗೆ ಮರಳಿಸಬಹುದು. ಪಾನ್ ಕಾರ್ಡ್ ಮರಳಿಸಲು ಮತ್ತು ಪಾನ್ ಕಾರ್ಡ್‌ನಲ್ಲಿ ಹೆಸರು ತಿದ್ದುಪಡಿ ಅಥವಾ ವಿಳಾಸ ಬದಲಾವಣೆಗೆ ಬಳಸುವ ಅರ್ಜಿ ನಮೂನೆಗಳು ಒಂದೇ ಆಗಿರುತ್ತವೆ. ನ್ಯಾಷನಲ್ ಸೆಕ್ಯುರಿಟೀಸ್ ಡಿಪೋಸಿಟರಿ ಲಿ.(ಎನ್ ಎಸ್‌ಡಿಎಲ್)ನ ವೆಬ್‌ಸೈಟ್‌ನಿಂದ ಅರ್ಜಿ ನಮೂನೆಯನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಈ ಅರ್ಜಿ ನಮೂನೆಯನ್ನು ತುಂಬಿ ಪಾನ್ ಬದಲಾವಣೆ ಮನವಿ ಅರ್ಜಿಯನ್ನು ಸಲ್ಲಿಸಬಹುದು ಮತ್ತು ಈ ಅರ್ಜಿಯ ಮೇಲೆ ನೀವು ಹಾಲಿ ಬಳಸುತ್ತಿರುವ ಪಾನ್ ಸಂಖ್ಯೆಯನ್ನು ಉಲ್ಲೇಖಿಸಿರಬೇಕು. ಈ ಅರ್ಜಿಯಲ್ಲಿ ನಿಮಗೆ ಅನುದ್ದಿಷ್ಟವಾಗಿ ವಿತರಣೆಯಾಗಿರುವ ಎಲ್ಲ ಪಾನ್ ಸಂಖ್ಯೆಗಳನ್ನು ನಿಗದಿತ ಕಾಲಮ್‌ನಲ್ಲಿ ತುಂಬಬೇಕು ಮತ್ತು ರದ್ದುಗೊಳಿಸಲು ಬಯಸಿರುವ ಪಾನ್ ಕಾಡ್‌ಗಳ ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.

ಎನ್‌ಎಸ್‌ಡಿಎಲ್ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್‌ನಲ್ಲಿಯೂ ಅರ್ಜಿಯನ್ನು ಸಲ್ಲಿಸಬಹುದು. ಇದಕ್ಕಾಗಿ ಸೂಕ್ತ ಕೊಂಡಿಯನ್ನು ವೆಬ್‌ಸೈಟ್‌ನಲ್ಲಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News