ಶಬರಿಮಲೆ ತೀರ್ಪಿನ ಕುರಿತು ಸುಪ್ರೀಂ ಪರಿಶೀಲನೆ

Update: 2019-01-15 14:44 GMT

ಹೊಸದಿಲ್ಲಿ,ಜ.15: ಸಂಬಂಧಿಸಿದ ನ್ಯಾಯಾಧೀಶರೋರ್ವರು ವೈದ್ಯಕೀಯ ರಜೆಯಲ್ಲಿರುವುದರಿಂದ ಶಬರಿಮಲೆ ಕುರಿತು ತನ್ನ ಸೆ.28ರ ತೀರ್ಪಿನ ಪುನರ್‌ಪರಿಶೀಲನೆಯನ್ನು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ತಾನು ಜ.22ರಿಂದ ಆರಂಭಿಸದಿರಬಹುದು ಎಂದು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ತಿಳಿಸಿದೆ.

ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶಾವಕಾಶ ಕಲ್ಪಿಸಿ ತೀರ್ಪು ನೀಡಿದ್ದ ಐವರು ನ್ಯಾಯಾಧೀಶರ ಸಂವಿಧಾನ ಪೀಠದ ಏಕೈಕ ಮಹಿಳಾ ನ್ಯಾಯಾಧೀಶರಾಗಿರುವ ನ್ಯಾ.ಇಂದು ಮಲ್ಹೋತ್ರಾ ಅವರು ವೈದ್ಯಕೀಯ ಕಾರಣಗಳಿಂದ ರಜೆಯಲ್ಲಿದ್ದಾರೆ. ಹೀಗಾಗಿ ಪುನರ್ ಪರಿಶೀಲನೆ ಅರ್ಜಿಗಳ ವಿಚಾರಣೆ ನಿಗದಿಗೊಂಡಂತೆ 22ರಿಂದ ಆರಂಭಗೊಳ್ಳದಿರಬಹುದು ಎಂದು ಮು.ನ್ಯಾ.ರಂಜನ ಗೊಗೊಯಿ ನೇತೃತ್ವದ ಪೀಠವು ತಿಳಿಸಿತು.

ಇದಕ್ಕೂ ಮುನ್ನ ರಾಷ್ಟ್ರೀಯ ಅಯ್ಯಪ್ಪ ಭಕ್ತರ ಸಂಘ(ನಾಡಾ)ವು ಸಲ್ಲಿಸಿದ್ದ ಅರ್ಜಿಯನ್ನು ಉಲ್ಲೇಖಿಸಿದ್ದ ನ್ಯಾಯವಾದಿ ಮ್ಯಾಥ್ಯೂಸ್ ಜೆ.ನೆಡುಂಪಾರಾ ಅವರು,‘ಸಾಮಾನ್ಯ ವ್ಯಕ್ತಿಗೂ ನ್ಯಾಯವು ಕೈಗೆಟಕುವಂತಾಗಲು’ ವಿಚಾರಣೆಯ ನೇರ ಪ್ರಸಾರ ಮತ್ತು ವೀಡಿಯೊ ಚಿತ್ರೀಕರಣ ಮಾಡುವಂತೆ ಕೋರಿಕೊಂಡಿದ್ದರು.

ಕಲಾಪಗಳನ್ನು ನೇರವಾಗಿ ಪ್ರಸಾರ ಮಾಡುವುದರಿಂದ ಕೇರಳದಲ್ಲಿ ಮಾತ್ರವಲ್ಲ,ವಿಶ್ವಾದ್ಯಂತದ ಕೋಟ್ಯಂತರ ಅಯ್ಯಪ್ಪ ಭಕ್ತರಿಗೆ ನ್ಯಾಯಾಲಯದಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಕೇಳಲು ಮತ್ತು ವೀಕ್ಷಿಸಲು ಅವಕಾಶ ದೊರೆಯುತ್ತದೆ ಎಂದು ನಾಡಾ ತನ್ನ ಅರ್ಜಿಯಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News