ಬಡತನದ ಈ ಮಾನದಂಡದಲ್ಲಿ ಬಡವರು ಯಾರು?

Update: 2019-01-15 18:33 GMT

ದಿನಕ್ಕೆ ಸುಮಾರು 2,222 ರೂಪಾಯಿಗಳನ್ನು ಗಳಿಸುವ ಮೇಲ್ಜಾತಿ ವ್ಯಕ್ತಿ ಈಗ ಬಡವನೆಂದು ಪರಿಗಣಿಸಲ್ಪಡುತ್ತಾನೆ. ಅಂದರೆ ನಗರ ಬಡತನ ರೇಖೆಯ 71 ಪಟ್ಟು ಹೆಚ್ಚಿನ ಆದಾಯ, ಗ್ರಾಮೀಣ ಬಡತನ ರೇಖೆಯ 82 ಪಟ್ಟು ಹೆಚ್ಚಿನ ಆದಾಯವಿರುವ ಮೇಲ್ಜಾತಿ ವ್ಯಕ್ತಿ ಈಗ ಬಡವ. ಆದರೆ ವಾರ್ಷಿಕ 2,50,000 ರೂಪಾಯಿಗಳಿಂತಲೂ ಹೆಚ್ಚಿನ ಆದಾಯವಿರುವವರು ಶೇ. 20ರ ತೆರಿಗೆ ವ್ಯಾಪ್ತಿಗೆ ಒಳಪಡುತ್ತಾರೆ ಎಂದು ಆದಾಯ ತೆರಿಗೆ ಮಾನದಂಡ ಹೇಳುತ್ತದೆ. ಅವರನ್ನು ಮೇಲ್ಮಧ್ಯಮ ವರ್ಗ ಎಂದು ಗುರುತಿಸುತ್ತದೆ.


ಭಾರತದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಆರ್ಥಿಕವಾಗಿ ದುರ್ಬಲರಾಗಿರುವ ಮೇಲ್ಜಾತಿ ಬಡವರಿಗೆ ಶೇ. 10 ಮೀಸಲಾತಿ ನೀಡಲು ಸಂವಿಧಾನ ತಿದ್ದುಪಡಿ ಮಾಡಿದೆ. ಇದು ಮೀಸಲು ವ್ಯವಸ್ಥೆ ಇರದ ಮೇಲ್ಜಾತಿ ಬಡವರಿಗೆ ಮಾತ್ರ ಅನ್ವಯ ಎಂದು ಹೇಳಿದೆ. ಅಂದರೆ ವರ್ಷಕ್ಕೆ ಕೃಷಿ ಹಾಗೂ ಇನ್ನಿತರ ಮೂಲಗಳಿಂದ 8 ಲಕ್ಷಕ್ಕಿಂತ ಕಡಿಮೆ ಆದಾಯವಿರುವವರು, ಹಳ್ಳಿಗಳಲ್ಲಿ ಕೃಷಿ ಭೂಮಿ ಐದು ಏಕರೆಗಿಂತ ಕಡಿಮೆ ಇರುವವರು, 1000 ಚದರ ಅಡಿಗಿಂತ ಕಡಿಮೆ ವಿಸ್ತೀರ್ಣದ ಮನೆ ಇರುವವರು, ನಗರದ ಮುನಿಸಿಪಾಲಿಟಿ ಗುರುತಿಸಿರುವ ನೂರು ಗಜಕ್ಕಿಂತ ಕಡಿಮೆ ವಸತಿ ನಿವೇಶನ, ಮುನಿಸಿಪಾಲಿಟಿ ಗುರುತಿಸದೆ ಇರುವ 200 ಗಜಕ್ಕಿಂತ ಕಡಿಮೆ ಇರುವ ವಸತಿ ನಿವೇಶನ ಇರುವವರನ್ನು ಆರ್ಥಿಕವಾಗಿ ‘ಬಡವರು’ ಎಂದು ಗುರುತಿಸಿದೆ. ತಿಂಗಳಿಗೆ 66,666 ರೂಪಾಯಿ ಆದಾಯ ಪಡೆಯುತ್ತಿರುವವರು ಈಗ ಆರ್ಥಿಕವಾಗಿ ಬಡವರು ಎಂದು ಗುರುತಿಸಲ್ಪಡುತ್ತಾರೆ.

ಅಂದರೆ ಆದಾಯ ತೆರಿಗೆ ಕಟ್ಟುತ್ತಿರುವವರು ಈಗ ಆರ್ಥಿಕವಾಗಿ ಬಡವರು. ಹಳ್ಳಿಗಳಲ್ಲಿ ದಿನಕ್ಕೆ 27 ರೂಪಾಯಿಗಳ ಆದಾಯವಿರುವವರು ನಗರ ಪ್ರದೇಶಗಳಲ್ಲಿ ದಿನಕ್ಕೆ 31 ರೂಪಾಯಿ ಆದಾಯವಿರುವವರನ್ನು ಬಡತನ ರೇಖೆಯ ಕೆಳಗಿರುವವರು ಎಂದು ಹಿಂದೆ ಯೋಜನಾ ಆಯೋಗ ಅಧಿಕೃತವಾಗಿ ಗುರುತಿಸಿತ್ತು. ಅಲ್ಲದೆ ಈಗಲೂ ಇದೇ ಮಾನದಂಡವನ್ನು ಬಡತನ ರೇಖೆಯನ್ನು ಗುರುತಿಸಲು ಬಳಸಲಾಗುತ್ತದೆ. ಈ ಮಾನದಂಡ ಹಾಸ್ಯಾಸ್ಪದವೆಂದು ಭಾರೀ ಟೀಕೆಗಳಿಗೆ ಗುರಿಯಾಗಿದ್ದರೂ ಇದೇ ಮಾನದಂಡವನ್ನು ಬಳಸಿ ಭಾರತದಲ್ಲಿ ಬಡವರ ಸಂಖ್ಯೆ ಕಡಿಮೆಯಾಗಿದೆ ಎಂದು ಸರಕಾರ ಅಧಿಕೃತವಾಗಿ ತನ್ನ ಅಂಕಿ ಅಂಶಗಳಲ್ಲಿ ಹೇಳಿತ್ತು. ಅದನ್ನು ಭಾರತದ ಬಡತನ ನಿರ್ಮೂಲನೆಯಲ್ಲಿ ಮಾಡಿದ ಭಾರೀ ಸಾಧನೆ ಎಂದೂ ಪ್ರಚಾರ ನಡೆಸಿತ್ತು. ಆದರೆ ಈಗ ಮೇಲ್ಜಾತಿಯಲ್ಲಿ ಬಡವರನ್ನು ಗುರುತಿಸಲು ನಿಗದಿ ಮಾಡಿದ ಬಡತನದ ಮಾನದಂಡ ನೋಡಿದರೆ ಮಾನದಂಡಗಳಲ್ಲಿಯೂ ಜಾತಿ ವರ್ಗಗಳಿವೆ ಎಂದು ಸರಕಾರವೇ ಹೇಳಿದಂತೆ ಆಗಿದೆ. ಅದೂ ಅಲ್ಲದೇ ಶೇ. 50ಕ್ಕಿಂತಲೂ ಹೆಚ್ಚು ಮೀಸಲಾತಿ ಇರಕೂಡದೆಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟ ನಿರ್ದೇಶನವನ್ನೂ ನೀಡಿದ್ದು ಒಂದು ಕಡೆ ಇದೆ.

ದಿನಕ್ಕೆ ಸುಮಾರು 2,222 ರೂಪಾಯಿಗಳನ್ನು ಗಳಿಸುವ ಮೇಲ್ಜಾತಿ ವ್ಯಕ್ತಿ ಈಗ ಬಡವನೆಂದು ಪರಿಗಣಿಸಲ್ಪಡುತ್ತಾನೆ. ಅಂದರೆ ನಗರ ಬಡತನ ರೇಖೆಯ 71 ಪಟ್ಟು ಹೆಚ್ಚಿನ ಆದಾಯ, ಗ್ರಾಮೀಣ ಬಡತನ ರೇಖೆಯ 82 ಪಟ್ಟು ಹೆಚ್ಚಿನ ಆದಾಯವಿರುವ ಮೇಲ್ಜಾತಿ ವ್ಯಕ್ತಿ ಈಗ ಬಡವ. ಆದರೆ ವಾರ್ಷಿಕ 2,50,000 ರೂಪಾಯಿಗಳಿಂತಲೂ ಹೆಚ್ಚಿನ ಆದಾಯವಿರುವವರು ಶೇ. 20ರ ತೆರಿಗೆ ವ್ಯಾಪ್ತಿಗೆ ಒಳಪಡುತ್ತಾರೆ ಎಂದು ಆದಾಯ ತೆರಿಗೆ ಮಾನದಂಡ ಹೇಳುತ್ತದೆ. ಅವರನ್ನು ಮೇಲ್ಮಧ್ಯಮ ವರ್ಗ ಎಂದು ಗುರುತಿಸುತ್ತದೆ.

2015ರಲ್ಲಿ ಬಿಡುಗಡೆ ಮಾಡಿದ ಸಮಾಜೋ ಆರ್ಥಿಕ ಜಾತಿ ಸಮೀಕ್ಷೆ 2011ರ ವರದಿಯಾನುಸಾರ ಶೇ. 74.49ರಷ್ಟು ಗ್ರಾಮೀಣ ಜನಸಂಖ್ಯೆ ತಿಂಗಳಿಗೆ 5,000 ರೂಪಾಯಿಗಳಿಗಿಂತಲೂ ಕಡಿಮೆ ಆದಾಯವನ್ನು ಹೊಂದಿದೆ. ಶೇ. 17ರಿಂದ 18ರಷ್ಟು ಗ್ರಾಮೀಣ ಜನಸಂಖ್ಯೆ ತಿಂಗಳಿಗೆ 5,000ದಿಂದ 10,000 ರೂಪಾಯಿಗಳೊಳಗಿನ ಆದಾಯವನ್ನು ಹೊಂದಿದೆ. ಗ್ರಾಮೀಣ ಜನರಲ್ಲಿ ಶೇ. 8.29 ಮಾತ್ರ ಹತ್ತು ಸಾವಿರ ರೂಪಾಯಿಗಳಿಗಿಂತಲೂ ಹೆಚ್ಚಿನ ಆದಾಯ ಹೊಂದಿದ್ದಾರೆ. ಆದರೆ ವಾರ್ಷಿಕ ಎಂಟು ಲಕ್ಷ ರೂಪಾಯಿಗಳ ವರೆಗಿನ ಆದಾಯ ಹೊಂದಿರುವ ಗ್ರಾಮೀಣ ಜನರು ಬಹಳ ಸಣ್ಣ ಸಂಖ್ಯೆಯೇ ಆಗಿದ್ದಾರೆ. ಅದೇ ಸಮೀಕ್ಷೆಯಲ್ಲಿ ಗ್ರಾಮೀಣ ಜನಸಂಖ್ಯೆಯ ಶೇ. 38.27 ಜನರು ಭೂಹೀನರಾಗಿದ್ದಾರೆ ಎಂದೂ ಕೂಡ ಹೇಳಿದೆ. ಈಗ ಜಾರಿ ಮಾಡಲಾಗುತ್ತಿದೆ ಎಂದು ಹೇಳುತ್ತಾ ಬಂದಿರುವ ಪರಿಶಿಷ್ಠ ಜಾತಿ ಹಾಗೂ ವರ್ಗಗಳಿಗಿರುವ ಶೇ. 18 ಹಾಗೂ ಇತರ ಹಿಂದುಳಿದ ಜಾತಿಗಳಿಗೆ ಶೇ. 27ರಷ್ಟಿರುವ ಮೀಸಲಾತಿ ಆ ವರ್ಗಗಳ ಬಹುಸಂಖ್ಯಾತರಿಗೆ ಇನ್ನೂ ತಲುಪದೇ ಇರುವ ಅಂಶ ಪರಿಗಣನೆಗೆ ಒಳಪಡುತ್ತಿಲ್ಲ. ಹಾಗಾದಾಗ ಮೋದಿ ಮಾಡಿರುವ ಈ ಸಾಂವಿಧಾನಿಕ ತಿದ್ದುಪಡಿ ಯಾರಿಗಾಗಿ ಎನ್ನುವುದು ಸ್ಪಷ್ಟ ತಾನೆ.

ಅಂದರೆ ಈ ಹೊಸ ವರ್ಗೀಕರಣದ ಮಾನದಂಡಗಳು ಕೇವಲ ಕೆಲವೇ ಜನಸಂಖ್ಯೆಯಾಗಿರುವ ಮೇಲ್ಜಾತಿ ಅದರಲ್ಲೂ ಸಮಾಜದಲ್ಲಿ ತುಂಬಾ ಸಣ್ಣ ಸಂಖ್ಯೆಯಾಗಿರುವ ಬ್ರಾಹ್ಮಣರಿಗೇ ಅಗ್ರ ಪಾಲು ದೊರೆಯುವಂತೆ ಮಾಡಲು ಮಾಡಿರುವ ದೊಡ್ಡ ಕುತಂತ್ರವಾಗಿದೆ. ಯಾಕೆಂದರೆ ಜೈನ, ಫಾರಸಿ ಸೇರಿದಂತೆ ಇತರ ಜನಸಮುದಾಯಗಳಲ್ಲಿ ಹೆಚ್ಚಿನವರು ಒಂದಲ್ಲಾ ಒಂದು ರೀತಿಯ ಸಾಂವಿಧಾನಿಕ ಮೀಸಲಾತಿಗೆ ಒಳಪಟ್ಟಿದ್ದಾರೆ. ಅಲ್ಲಿ ಆರ್ಥಿಕ ಮಾನದಂಡಗಳನ್ನು ಅಳವಡಿಸಲಾಗಿಲ್ಲ. ಬದಲಿಗೆ ಅಲ್ಪಸಂಖ್ಯಾತ, ಪರಿಶಿಷ್ಟ, ಹಿಂದುಳಿದ ಈ ರೀತಿಯ ಮಾನದಂಡಗಳನ್ನು ಅಳವಡಿಸಲಾಗಿದೆ. ಆದರೆ ಇದನ್ನು ಇತರ ಶೂದ್ರ ಜಾತಿಯ, ಲಿಂಗಾಯತ ಸೇರಿದಂತೆ ಹಲವು ಸಮುದಾಯಗಳು ಸ್ವಾಗತಿಸುವಂತೆ ಮಾಡಿ ತಮ್ಮ ತಮ್ಮ ಸಮುದಾಯಗಳಿಗೆ ಮೋದಿ ಸರಕಾರ ಭಾರೀ ಕೊಡುಗೆ ನೀಡಿದೆ ಎಂಬ ಭ್ರಮೆ ಮೂಡಿಸಿರುವುದು ಮೋದಿ ಸರಕಾರದ ಕ್ರೂರ ಜಾಣತನವಾಗಿದೆ. ಈಗಾಗಲೇ ಕೇವಲ ಒಟ್ಟು ಜನಸಂಖ್ಯೆಯ ಶೇ. 3ರಷ್ಟಿರುವ ಬ್ರಾಹ್ಮಣ ಸಮುದಾಯ ತನ್ನ ಜನಸಂಖ್ಯೆಯ ಅನುಪಾತಕ್ಕಿಂತಲೂ ಹತ್ತಾರು ಪಟ್ಟು ಹೆಚ್ಚಿನ ಅವಕಾಶಗಳನ್ನು ಪಡೆದುಕೊಂಡು, ಆಯಕಟ್ಟಿನ ಜಾಗಗಳನ್ನು ಆಕ್ರಮಿಸಿಕೊಂಡಾಗಿದೆ.

ಅಂದರೆ ಸಾಮಾನ್ಯ ವರ್ಗ ಎಂದು ಕರೆಸಿಕೊಳ್ಳುವ ಮೇಲ್ಜಾತಿಗಳಿಗೆ ವಾಸ್ತವದಲ್ಲಿ ಶೇ. 50ರಷ್ಟು ಮೀಸಲಾತಿ ಜಾರಿಯಲ್ಲಿದೆ. ಇದು ಅಘೋಷಿತವಾಗಿ ಅವರಿಗಿರುವ ಮೀಸಲಾತಿಯಾಗಿಯೇ ಇದುವರೆಗೂ ವರ್ತಿಸುತ್ತಾ ಬಂದಿದೆ ಎನ್ನುವುದು ಸುಳ್ಳೇನೂ ಅಲ್ಲ. ಅದಕ್ಕಿಂತಲೂ ಮೊದಲು ಅದು ಶೇ. 100ರಷ್ಟು ಕೂಡಾ ಇತ್ತು. ಈ ಚಾರಿತ್ರಿಕ ಸಾಮಾಜಿಕ ಅನ್ಯಾಯವನ್ನು ಸರಿಪಡಿಸುವ ಕೆಲವು ಸಂವಿಧಾನಾತ್ಮಕ ನಡೆಗಳನ್ನು ಕೂಡ ಬುಡಮೇಲು ಮಾಡುವ ನಡೆಯನ್ನು ಸರಕಾರಗಳು ಹಿಂದಿನಿಂದಲೂ ಅನುಸರಿಸುತ್ತಾ ಬಂದಿವೆ. ಮೋದಿ ಮಾಡಿದ್ದು ಅದರ ಮುಂದುವರಿದ ಭಾಗವಾಗಿದೆ. ಲೋಕ ಸಭೆ ಹಾಗೂ ರಾಜ್ಯ ಸಭೆಗಳಲ್ಲಿ ಈ ಸಂವಿಧಾನ ತಿದ್ದುಪಡಿ ಮಸೂದೆ ಸಲೀಸಾಗಿ ಅಂಗೀಕಾರಗೊಂಡಿದ್ದು ಅದಕ್ಕೆ ಒಂದು ಉದಾಹರಣೆಯಾಗಿದೆ. ಕನಿಷ್ಠ ಚರ್ಚೆಗಳನ್ನು ನಡೆಸದೆ ಇಂತಹ ಗುರುತರವಾದ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿದ್ದು ನಮ್ಮ ರಾಜಕೀಯ ಮುಖಂಡರೆಂದುಕೊಂಡಿರುವವರ, ರಾಜಕೀಯ ಪಕ್ಷಗಳ ನೈಜ ಮುಖಗಳನ್ನು ಮತ್ತೊಮ್ಮೆ ಅನಾವರಣಮಾಡಿದೆ. ಹಲವರು ರಾಜ್ಯಸಭೆಯಲ್ಲಿ ಮೋದಿ ಸರಕಾರಕ್ಕೆ ಬಹುಮತವಿಲ್ಲ ಹಾಗಾಗಿ ಈ ತಿದ್ದುಪಡಿ ಅನುಮೋದನೆಯಾಗುವುದಿಲ್ಲ ಎಂಬ ಭ್ರಮೆಗಳನ್ನು ಬಿತ್ತಲು ಶುರುಮಾಡಿದ್ದರು. ಅದೆಷ್ಟು ಪೊಳ್ಳಿನದು ಎಂಬುದು ಕೂಡ ಮತ್ತೊಮ್ಮೆ ಸಾಬೀತಾದಂತಾಯಿತು. ಈಗ ಪ್ರಗತಿಪರ ಶಕ್ತಿಗಳು ಕೋಮುವಾದಿ ಹಾಗೂ ಜಾತಿವಾದಿ ಶಕ್ತಿಗಳಿಗೆ ಸದ್ಯದ ಪರ್ಯಾಯವೆಂದು ಕೊಂಡಾಡುತ್ತಿರುವ ಕಾಂಗ್ರೆಸ್ ಪಕ್ಷದ ಪ್ರಗತಿವಿರೋಧಿ ಜಾತಿವಾದಿ ಬ್ರಾಹ್ಮಣಶಾಹಿ ಮುಖಗಳನ್ನು ಮತ್ತೊಮ್ಮೆ ತೆರೆದಿಟ್ಟಿದೆ.

ಆದರೆ ದಮನಿತ ಜನಸಮೂಹಗಳಿಗೆ ಅವರಿಗೆ ನಿಜವಾಗಿಯೂ ದೊರೆಯ ಬೇಕಾಗಿದ್ದ ಅವಕಾಶಗಳ ಪಾಲಿನ ಸಣ್ಣ ಅಂಶವನ್ನು ಮೀಸಲಾತಿಯಾಗಿ ನೀಡುವ ಘೋಷಣೆ ಮಾಡಿದಂದಿನಿಂದಲೂ ‘‘ಜಾತಿ ಆಧಾರಿತ ಮೀಸಲಾತಿ ಇರಕೂಡದು, ಪ್ರತಿಭೆ ಹಾಗೂ ಆರ್ಥಿಕತೆ ಆಧಾರಿತ ಮೀಸಲಾತಿ ಇರಬೇಕು.’’ ಇತ್ಯಾದಿ ಹೇಳುತ್ತಾ ಬರಲಾಯಿತು. ನಗರಪ್ರದೇಶಗಳ ಮಧ್ಯಮ ವರ್ಗಗಳಲ್ಲಿ ದಲಿತ, ದಮನಿತರಿಗೆ, ಹಿಂದುಳಿದ ವರ್ಗಗಳಿಗೆ ಅಲ್ಪ ಸ್ವಲ್ಪ ನೀಡುತ್ತಿರುವ ಮೀಸಲಾತಿ ಬಗ್ಗೆ ಅಸಹನೆ, ದ್ವೇಷ ಹುಟ್ಟಿಸಲು ವ್ಯಾಪಕ ಅಪಪ್ರಚಾರಗಳನ್ನು ಮಾಡುತ್ತಾ ಬರಲಾಯಿತು. ದಮನಿತ ಜಾತಿ ಹಾಗೂ ಗುಂಪುಗಳಿಗೆ ಮೀಸಲಾತಿ ನೀಡುವುದನ್ನು ಬಲವಾಗಿ ವಿರೋಧಿಸುತ್ತಾ ಬಂದ ಮೇಲ್ಜಾತಿಗಳಲ್ಲಿ ಹೆಚ್ಚಿನವರು ಬ್ರಾಹ್ಮಣ ಜಾತಿಗೆ ಸೇರಿದವರೇ ಆಗಿದ್ದಾರೆ. ಇವರೇ ಆ ವಿಚಾರಗಳನ್ನು ಹರಡುವಲ್ಲಿ ಮುಂಚೂಣಿಗಳಾಗಿದ್ದಾರೆ.

ಅದೇ ಬ್ರಾಹ್ಮಣ ಜಾತಿ ಹಿನ್ನೆಲೆಯ ಹಲವರು ಜಾತಿವಿರೋಧಿ ಹೋರಾಟ ಹಾಗೂ ಚಿಂತನೆಗಳಲ್ಲೂ ಸೇರಿದವರಿದ್ದಾರೆ. ಹಾಗೆಯೇ ಬ್ರಾಹ್ಮಣಶಾಹಿ ಚಿಂತನೆಗಳನ್ನು ಮೈಗೂಡಿಸಿಕೊಂಡಿರುವ ಬ್ರಾಹ್ಮಣೇತರ ಜಾತಿಯ ಹಿನ್ನೆಲೆಯ ದೊಡ್ಡ ಸಂಖ್ಯೆಯ ಜನರು ಜಾತಿವಾದಿ ಚಿಂತನೆ ಹಾಗೂ ದ್ವೇಷಗಳಲ್ಲಿ ಮುಳುಗಿಹೋದವರೂ ಇದ್ದಾರೆ. ಈ ಸಮೂಹವನ್ನು ಬಳಸಿಕೊಂಡೇ ಬ್ರಾಹ್ಮಣಶಾಹಿ ಶಕ್ತಿಗಳು ದೇಶದಲ್ಲಿ ಜಾತೀಯ, ಜನಾಂಗೀಯ, ಮತೀಯ, ಕೋಮುವಾದಿ, ಪ್ರಾಂತೀಯ ಇತ್ಯಾದಿ ದ್ವೇಷ ಹಾಗೂ ಒಡಕುಗಳನ್ನು ಹೆಚ್ಚಿಸುತ್ತಾ ಬರಲು ಪ್ರಯತ್ನ ನಡೆಸಿದ್ದಾರೆ. ಇದನ್ನು ಪ್ರಾಯೋಜನೆ ಮಾಡುತ್ತಾ ತಮ್ಮ ವ್ಯಾಪಾರಿ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳಲು, ಜನರ ದುಡಿಮೆಯ ಗಳಿಕೆಯನ್ನು ದೋಚಲು ಆಳುವ ಶಕ್ತಿಗಳಾದ ದೊಡ್ಡ ಆಸ್ತಿವಂತ ಹಾಗೂ ಕಾರ್ಪೊರೇಟ್ ಶಕ್ತಿಗಳು ತಮ್ಮ ದಾಳಗಳನ್ನು ಉರುಳಿಸುತ್ತಾ ಬಂದಿದ್ದಾರೆ. ಇವರ ಹಿತಾಸಕ್ತಿಗಳ ರಕ್ಷಣೆ ಮಾಡುವ ಹಾಗೂ ತಮ್ಮ ಚುನಾವಣಾ ಹಿತಾಸಕ್ತಿಗಳನ್ನು ಕಾಪಾಡಲು ಇದೀಗ ನರೇಂದ್ರ ಮೋದಿ ಸರಕಾರ ಮೇಲ್ಜಾತಿ ಬಡವರಿಗೆ ಎಂದು ಈ ಶೇ. 10 ಮೀಸಲಾತಿ ನೀಡುವ ಸಂವಿಧಾನ ತಿದ್ದುಪಡಿ ಮಾಡಿ ಜಾರಿಗೆ ತಂದಿದೆ. ಈ ಪ್ರಕ್ರಿಯೆಯಲ್ಲಿ ದಲಿತ ದಮನಿತರಿಗೆ ಈಗ ನೀಡಲಾಗುತ್ತಿರುವ ಅಲ್ಪಸ್ವಲ್ಪಸೌಲಭ್ಯಗಳನ್ನೂ ಇಲ್ಲದಂತೆ ಮಾಡುವ ಕುತಂತ್ರ ಕೂಡ ಇದೆ.

ಮೀಸಲಾತಿ ನೀತಿ ಇರಬೇಕೆನ್ನುವ ಸಾಮಾಜಿಕ ಸಹಜ ನ್ಯಾಯದ ಪರಿಕಲ್ಪನೆಯನ್ನೇ ಬುಡಮೇಲು ಮಾಡುವ ಷಡ್ಯಂತ್ರ ಕೂಡ ಇದೆ. ಅದೇ ಮೇಲ್ಜಾತಿ, ಮೇಲ್ವರ್ಗದ ಬ್ರಾಹ್ಮಣಶಾಹಿ ಕ್ರೂರ ಹಾಗೂ ಅವೈಜ್ಞಾನಿಕ ಪರಿಕಲ್ಪನೆಗಳಾದ ಪ್ರತಿಭೆಯ ಮಾನದಂಡಗಳಿಂದ ಅವಕಾಶಗಳನ್ನು ನೀಡಬೇಕೆಂಬ ವಾದಗಳನ್ನು ಮುನ್ನೆಲೆಗೆ ತಂದು ಪೂರ್ಣ ಜಾರಿಯಾಗುವಂತೆ ಮಾಡುವ ಸಂಚು ಕೂಡ ಇದೆ. ಸಂಖ್ಯೆಯಲ್ಲಿ ಅತ್ಯಲ್ಪ ವಾದ ಇದೇ ಮೇಲ್ಜಾತಿ ಮೇಲ್ವರ್ಗಗಳು ಸಮಾಜದ ಶೇ. 50ಕ್ಕಿಂತಲೂ ಹೆಚ್ಚಿನ ಅವಕಾಶಗಳನ್ನು ಮೊದಲಿನಿಂದಲೂ ತಮ್ಮ ಹಕ್ಕು ಎಂಬಂತೆ ಅನುಭವಿಸಿಕೊಂಡು ಬರುತ್ತಿದೆ. ಸಮಾಜದ ಎಲ್ಲಾ ಕ್ಷೇತ್ರಗಳ ಮೇಲೂ ಪ್ರಧಾನ ಹಿಡಿತ ಹೊಂದಿರುವ ಖಾಸಗಿ ವಲಯದಲ್ಲೂ ಇವರಿಗೇ ಅಗ್ರಗಣ್ಯ ಪಾಲಿದೆ. ಈಗ ಬೋನಸ್ ಎಂಬಂತೆ ಮತ್ತ್ತು ಶೇ. 10ರಷ್ಟು ಹೆಚ್ಚುವರಿ ಮೀಸಲಾತಿಯನ್ನು ನರೇಂದ್ರ ಮೋದಿ ಸರಕಾರ ಸಾರ್ವಜನಿಕ ಕ್ಷೇತ್ರದಲ್ಲಿ ಇದೇ ವರ್ಗಕ್ಕೆ ನೀಡಿದೆ.

ಈ ಮೇಲ್ಜಾತಿ ಎಂದಾಗ ಅದರಲ್ಲಿ ಬಡವರು ಇಲ್ಲವೆಂಬ ಅರ್ಥವಲ್ಲ ಅದರಲ್ಲಿ ಬಡವರು ಸಾಕಷ್ಟು ಜನರು ಇದ್ದಾರೆ. ಆದರೆ ಅವರು ಸಾಮಾಜಿಕ ಶೋಷಣೆಯನ್ನು ಅನುಭವಿಸುತ್ತಿಲ್ಲ. ಅವರಿಗೆ ಸಾಮಾಜಿಕ ಅವಕಾಶ ಹೆಚ್ಚು ಮುಕ್ತವಾಗಿರುತ್ತದೆ. ಅವರ ಜಾತಿಯ ಮೇಲರಿಮೆಯ ಬ್ರಾಹ್ಮಣಶಾಹಿ ಚಿಂತನೆಗಳು ಅವರನ್ನು ದಲಿತ ದಮನಿತರ ವಿರೋಧಿಗಳನ್ನಾಗಿ ಮಾಡಿದೆ. ಹಾಗಂತ ಅವರಿಗೆ ಸಾಮಾಜಿಕ ರಕ್ಷಣೆ ನೀಡಬಾರದೆಂದು ಇದರ ಅರ್ಥವಲ್ಲ. ಬಡತನದ ಕರಾಳತೆಯಲ್ಲಿ ಅವರೂ ಕೂಡ ನಲುಗುತ್ತಿದ್ದಾರೆ. ಅವರಿಗೆ ನೀಡಬೇಕಾದ ಸಹಾಯ ನೆರವು ಲಭ್ಯವಾಗಬೇಕು. ಆದರೆ ಆಳುವ ಸರಕಾರಗಳು ಜನರಿಗೆ ಘನತೆಯಿಂದ ಬದುಕುವಂತಹ ಸಾರ್ವಜನಿಕ ಅವಕಾಶಗಳನ್ನು ಹೆಚ್ಚಿಸುವುದನ್ನು ನಿಲ್ಲಿಸಿ ಬಹಳ ಕಾಲವಾಯಿತು. ಅಲ್ಲದೆ ಇದ್ದಂತಹ ಸಾರ್ವಜನಿಕ ಅವಕಾಶಗಳನ್ನು ಕಡಿತಗೊಳಿಸುತ್ತಾ ಈಗ ಅಂತಹ ಎಲ್ಲಾ ಅವಕಾಶಗಳು ಕನಿಷ್ಠವೆನ್ನುವ ಮಟ್ಟಕ್ಕೆ ತಲುಪಿವೆ.

ಎಲ್ಲವೂ ಖಾಸಗಿ ಕಾರ್ಪೊರೇಟುಗಳ ಹಿಡಿತಕ್ಕೆ ಸಿಲುಕಿದೆ. ಅಂತಹ ಕಡೆಗಳಲ್ಲಿ ಈ ಯಾವ ಸಾಂವಿಧಾನಿಕ ತಿದ್ದುಪಡಿಗಳಾಗಲೀ, ಮೀಸಲಾತಿ ಪರಿಕಲ್ಪನೆಯಾಗಲೀ ಜಾರಿಯಾಗಲು ಸಾಧ್ಯವೇ ಇಲ್ಲ. ಈ ಬಹುಮುಖ್ಯ ಅಂಶವನ್ನು ಜಾತಿಯಾಧಾರಿತ ಮೀಸಲಾತಿ ವಿರೋಧಿಗಳಾಗಲೀ ಮೀಸಲಾತಿ ಪರವಿರುವವರಾಗಲೀ ಗಂಭೀರವಾಗಿ ಪರಿಗಣಿಸುವುದಾಗಲೀ, ಚರ್ಚೆಗೆ ಒಳಪಡಿಸುವುದನ್ನಾಗಲೀ ಮಾಡುತ್ತಿಲ್ಲ. ಬದಲಿಗೆ ಮೇಲ್ಜಾತಿ ಮೇಲ್ವರ್ಗಗಳ ಜನಸಾಮಾನ್ಯರನ್ನು ದಿಕ್ಕುತಪ್ಪಿಸಿ ಮುಖ್ಯ ವಿಚಾರಗಳನ್ನು ಮರೆಮಾಚುವ ಕುತಂತ್ರಗಳಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಭಾಗೀದಾರರಾಗುತ್ತಿದ್ದಾರೆ. ಅವರ ಷಡ್ಯಂತ್ರಗಳ ದಾಳಗಳಾಗುತ್ತಿದ್ದಾರೆ. ಇದು ಸ್ವಯಂನಾಶಕ್ಕೆ ಕಾರಣವಾಗುತ್ತದೆ.

ಸರಕಾರ ನಡೆಸುತ್ತಿರುವ ಈ ಎಲ್ಲಾ ನಡೆಗಳು ದಲಿತ ದಮನಿತ ರನ್ನು ಇರುವ ಅತ್ಯಲ್ಪರಕ್ಷಣೆಗಳಿಂದ ಎಲ್ಲಾ ರೀತಿಗಳಿಂದಲೂ ವಂಚಿಸುತ್ತಾ ಆಳುವ ಶಕ್ತಿಗಳಿಗೆ ಈಗ ಅತ್ಯಗತ್ಯವಾಗಿರುವ ಫ್ಯಾಶಿಸ್ಟ್ ನಿರಂಕುಶ ಆಡಳಿತ ವ್ಯವಸ್ಥೆಯನ್ನು ಹೇರುವ ಸ್ಪಷ್ಟ ಉದ್ದೇಶಗಳನ್ನು ಹೊಂದಿವೆ. ಈ ಅಂಶವನ್ನು ಮರೆತು ಇಂತಹ ನಡೆಗಳನ್ನು ಗ್ರಹಿಸಲು ಹೋದರೆ ಅದು ಆಳುವ ಶಕ್ತಿಗಳ ದಾಳವಾಗುವ ಪರಿಸ್ಥಿತಿಗಳಿಗೆ ದೂಡುತ್ತದೆ.

ದೇಶದ ಸಂಪತ್ತು ಹಾಗೂ ಆಸ್ತಿಪಾಸ್ತಿಗಳಲ್ಲಿ ಶೇ. 70 ರಿಂದ 80ಕ್ಕಿಂತಲೂ ಹೆಚ್ಚಿನದು ಇದೇ ಮೇಲ್ವರ್ಗದ ಬಳಿ ಸೇರಿಕೊಂಡಿದೆ ಎಂದು ಹಲವು ವರದಿಗಳು ಆಗಾಗ ಬರುತ್ತಾ ಇರುವುದು ಈಗ ಮಾಮೂಲಿ ಸಂಗತಿಯಾಗಿದೆ. ಇದೇ ವರ್ಗದ ಹಿತಾಸಕ್ತಿ ಯಿಂದಾಗಿಯೇ ಸಾಮಾಜಿಕ ರಕ್ಷಣೆಗಾಗಿ ಇರುವ ಸಂವಿಧಾನದ ಎಲ್ಲಾ ನಿಯಮಗಳನ್ನು ಸಡಿಲಗೊಳಿಸುತ್ತಾ ಅದನ್ನು ಪೂರ್ಣವಾಗಿ ಬಲಹೀನಗೊಳಿಸಲಾಗುತ್ತಿದೆ. ಅದರಲ್ಲಿ ಮೋದಿ ಸರಕಾರ ಈಗ ಜಾರಿಮಾಡುತ್ತಿರುವ ಶೇ. 10ರಷ್ಟು ಮೀಸಲಾತಿ ನೀತಿ ಕೂಡ ಒಂದು. ಈಗ ಜನಸಾಮಾನ್ಯರು ಸರಕಾರಗಳ ಇಂತಹ ನಡೆಗಳನ್ನು ಪ್ರಶ್ನಿಸಿ ಹೋರಾಡುವುದಲ್ಲದೇ ಎಲ್ಲಾ ರಾಜಕೀಯ ಪಕ್ಷಗಳ, ಮತ್ತವುಗಳ ಮುಖಂಡರ ನೈಜ ಮುಖಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಲು ಮುಂದಾಗದಿದ್ದರೆ ಅದರ ಪರಿಣಾಮ ಭೀಕರವಾಗಿರುತ್ತದೆ.


ಮಿಂಚಂಚೆ: nandakumarnandana67gmail.com

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News