ರಣಜಿ ಕ್ವಾರ್ಟರ್‌ಫೈನಲ್: ಕರ್ನಾಟಕಕ್ಕೆ ಮೊದಲ ದಿನದ ಗೌರವ

Update: 2019-01-15 18:52 GMT

ಬೆಂಗಳೂರು, ಜ.15: ನಾಯಕ ಮಹಿಪಾಲ್ ಲಮ್ರರ್ ಹಾಗೂ ರಾಜೇಶ್ ಬಿಷ್ಣೊಯ್ ಅವರ ಅರ್ಧಶತಕಗಳ ಮಧ್ಯೆಯೂ ಕೊನೆಯಲ್ಲಿ ನಾಟಕೀಯ ಕುಸಿತ ಕಂಡ ರಾಜಸ್ಥಾನ ತಂಡ ಕರ್ನಾಟಕ ವಿರುದ್ಧದ ರಣಜಿ ಕ್ವಾರ್ಟರ್‌ಫೈನಲ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ 224 ರನ್‌ಗೆ ಸರ್ವಪತನ ಕಂಡಿದೆ. ಪ್ರತಿಯಾಗಿ ತನ್ನ ಪ್ರಥಮ ಇನಿಂಗ್ಸ್ ಆರಂಭಿಸಿರುವ ಆತಿಥೇಯ ತಂಡ ವಿಕೆಟ್ ನಷ್ಟವಿಲ್ಲದೆ 12 ರನ್ ಗಳಿಸಿದೆ.

ಇಲ್ಲಿಯ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಕ್ಷೇತ್ರರಕ್ಷಣೆ ಆಯ್ದುಕೊಂಡ ಕರ್ನಾಟಕ ತಂಡ ರಾಜಸ್ಥಾನವನ್ನು ಬ್ಯಾಟಿಂಗ್‌ಗೆ ಇಳಿಸಿತು. 18 ರನ್ ಆಗುವಷ್ಟರಲ್ಲಿ ರಾಜಸ್ಥಾನಕ್ಕೆ ‘ದಾವಣಗೆರೆ ಎಕ್ಸ್‌ಪ್ರೆಸ್’ ಖ್ಯಾತಿಯ ವೇಗಿ ವಿನಯಕುಮಾರ್ ಆಘಾತ ನೀಡಿದರು. ರಾಜಸ್ಥಾನದ ಅಮಿತ್‌ಕುಮಾರ್(12) ಮೊದಲನೆಯವರಾಗಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಎರಡನೇ ವಿಕೆಟ್‌ಗೆ ಚೇತನ್ ಬಿಸ್ತ್(39)ಹಾಗೂ ನಾಯಕ ಲಮ್ರ್‌ರ್(50) ಮಧ್ಯೆ 46 ರನ್‌ಗಳ ಜೊತೆಯಾಟ ಮೂಡಿಬಂದಿತು. ಇವರಿಬ್ಬರೂ ಕ್ರಮವಾಗಿ ಗೋಪಾಲ್ ಹಾಗೂ ಗೌತಮ್‌ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಶೀಘ್ರ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ರಾಜಸ್ಥಾನಕ್ಕೆ ಮಧ್ಯಮ ಕ್ರಮಾಂಕದಲ್ಲಿ ರಾಜೇಶ್ ಬಿಷ್ಣೊಯ್(79) ಹಾಗೂ ದೀಪಕ್ ಚಹಾರ್(22) ಮತ್ತೆ ಬಲ ತುಂಬಿದರು.

220 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ರಾಜಸ್ಥಾನ ದಿಢೀರ್ ಕುಸಿತ ಕಂಡಿತು. ಇನ್ನೂ ನಾಲ್ಕು ರನ್ ಸೇರಿಸುವಷ್ಟರಲ್ಲಿ ಎಲ್ಲ ವಿಕೆಟ್‌ಗಳನ್ನು ಕೈಚೆಲ್ಲಿತು. ಅಂತಿಮವಾಗಿ 224 ರನ್‌ಗಳಿಗೆ ಗಂಟುಮೂಟೆ ಕಟ್ಟಿತು. ಕರ್ನಾಟಕದ ಪರ ಯಶಸ್ವಿ ದಾಳಿ ಸಂಘಟಿಸಿದ ಅಭಿಮನ್ಯು ಮಿಥುನ್(48ಕ್ಕೆ 3) ಹಾಗೂ ಕೃಷ್ಣಪ್ಪ ಗೌತಮ್(54ಕ್ಕೆ 3) ತಲಾ 3 ವಿಕೆಟ್ ಹಂಚಿಕೊಂಡರೆ, ವಿನಯ್‌ಕುಮಾರ್(29ಕ್ಕೆ 2) ಹಾಗೂ ಶ್ರೇಯಸ್ ಗೋಪಾಲ್(41ಕ್ಕೆ 2) ತಮ್ಮದೇ ಆದ ಕೊಡುಗೆ ನೀಡಿದರು.

ಪ್ರತ್ಯುತ್ತರವಾಗಿ ತನ್ನ ಪ್ರಥಮ ಇನಿಂಗ್ಸ್ ಆರಂಭಿಸಿರುವ ಕರ್ನಾಟಕ ತಂಡ 5 ಓವರ್‌ಗಳಲ್ಲಿ 12 ರನ್ ಗಳಿಸಿದೆ. ಆರ್.ಸಮರ್ಥ್(7) ಹಾಗೂ ಡಿ. ನಿಶ್ಚಲ್(5) ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News