ಮೇಘಾಲಯ ಕಲ್ಲಿದ್ದಲು ಗಣಿ ಕುಸಿತ ಘಟನೆ: 200ಕ್ಕೂ ಅಧಿಕ ಅಡಿ ಆಳದಲ್ಲಿ ಮೃತದೇಹ ಪತ್ತೆ

Update: 2019-01-17 05:08 GMT

ಹೊಸದಿಲ್ಲಿ, ಜ.17: ಮೇಘಾಲಯದ ಉತ್ತರ ಜೈಂಟಿಯಾ ಹಿಲ್ಸ್‌ನಲ್ಲಿರುವ ಅಕ್ರಮ ಕಲ್ಲಿದ್ದಲು ಗಣಿಯೊಳಗೆ ನೌಕಾ ದಳ ಸಿಬ್ಬಂದಿ ಗುರುವಾರ ನೀರೊಳಗೆ ಸ್ವಯಂಚಾಲಿತ ವಾಹನವನ್ನು ಬಳಸಿ 200ಕ್ಕೂ ಅಧಿಕ ಅಡಿ ಆಳದಲ್ಲಿ ಒಂದು ಮೃತದೇಹವನ್ನು ಪತ್ತೆ ಹಚ್ಚಿ ಹೊರ ತೆಗೆದಿದೆ. ಮೃತದೇಹದ ಗುರುತು ಇನ್ನಷ್ಟೇ ಪತ್ತೆಯಾಗಬೇಕಾಗಿದೆ.

ಗಣಿಯೊಳಗೆ ಸಿಲುಕಿದವರ ಪತ್ತೆ ಕಾರ್ಯಾಚರಣೆ ಒಂದು ತಿಂಗಳ ಹಿಂದೆಯೇ ಆರಂಭವಾಗಿದ್ದು ಗಣಿಯಲ್ಲಿ ಸಿಲುಕಿದ್ದ 15 ಕಾರ್ಮಿಕರನ್ನು ಈಗಾಗಲೇ ರಕ್ಷಿಸಲಾಗಿದೆ. ಮೇಘಾಲಯದ ಸಂಪುಟ ಬುಧವಾರ ಈಗ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆ ಬಗ್ಗೆ ಚರ್ಚಿಸಿದ್ದು, ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಮೇಘಾಲಯ ಮುಖ್ಯಮಂತ್ರಿ ಕೊನ್ರಾಡ್ ಸಂಗ್ಮಾ ಹೇಳಿದ್ದಾರೆ.

  ಭಾರತೀಯ ನೌಕಾದಳ, ಕೋಲ್ ಇಂಡಿಯಾ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಒಡಿಶಾ ಅಗ್ನಿ ಶಾಮಕ ದಳ ಹಾಗೂ ಖಾಸಗಿ ಪಂಪ್ ತಯಾರಕ ಸಂಸ್ಥೆ ಕಿರ್ಲೊಸ್ಕರ್ ಅವರಿದ್ದ ಸುಮಾರು 200ರಷ್ಟಿದ್ದ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

ಈ ಕಾರ್ಯಾಚರಣೆಯ ಬಗ್ಗೆ ಸುಪ್ರೀಂಕೋರ್ಟ್ ಕೂಡ ಮಧ್ಯಪ್ರವೇಶಿಸಿದ್ದು, ಏನಾದರೂ ಪವಾಡ ನಡೆಯುವ ತನಕವೂ ಶೋಧ ಕಾರ್ಯ ಮುಂದುವರಿಸಬೇಕೆಂದು ಆದೇಶಿಸಿತ್ತು. ಗಣಿಯಲ್ಲಿ ಸಿಲುಕಿರುವವರು ಜೀವಂತವಾಗಿ ತೆಗೆಯುವ ಕಾರ್ಯಾಚರಣೆಯ ಮೇಲೆ ನಿಗಾವಹಿಸಲು ಮೇಘಾಲಯ ಹಾಗೂ ಕೇಂದ್ರ ಸರಕಾರಕ್ಕೆ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News