ಕುವೆಂಪು ವಿರಚಿತ ನಾಡಗೀತೆ ಬದುಕಿನುದ್ದಕ್ಕೂ ನನ್ನ ಜೊತೆಗಿರುತ್ತದೆ: ದಿನೇಶ್ ಮಾಹೇಶ್ವರಿ

Update: 2019-01-17 17:24 GMT

ಬೆಂಗಳೂರು, ಜ.17: ರಾಷ್ಟ್ರಕವಿ ಕುವೆಂಪು ವಿರಚಿತ ಜಯ ಭಾರತ ಜನನಿಯ ತನುಜಾತೆ ನಾಡಗೀತೆಯನ್ನು ಮುಂದಿನ ಬದುಕಿನುದ್ದಕ್ಕೂ ನನ್ನ ಜೊತೆಗಿರುತ್ತದೆ ಎಂದು ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹೇಳಿದ್ದಾರೆ.

ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಿರುವ ಹಿನ್ನೆಲೆಯಲ್ಲಿ ರಾಜ್ಯ ವಕೀಲರ ಪರಿಷತ್ತಿನ ವತಿಯಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಕರ್ನಾಟಕ ಹೈಕೋರ್ಟ್‌ನಲ್ಲಿ ಕೇವಲ 11 ತಿಂಗಳು ಕಾರ್ಯ ನಿರ್ವಹಿಸಿದ್ದೇನಾದರೂ, ಉತ್ತಮ ಸೇವೆ ಸಲ್ಲಿಸಿದ ತೃಪ್ತಿ ಇದೆ. ರಾಜ್ಯದ ಜನರಿಂದ ಸಕಾರಾತ್ಮಕತೆ ಹಾಗೂ ಬೆಚ್ಚನೆಯ ಪ್ರೀತಿಯನ್ನು ಹೊತ್ತು ಸಾಗುತ್ತಿದ್ದೇನೆ ಎಂದು ಭಾವುಕರಾದರು.

2018ರ ಫೆ.14ರಂದು ಅಧಿಕಾರ ಸ್ವೀಕರಿಸಿದ ವೇಳೆ, ನ್ಯಾಯಮೂರ್ತಿಗಳು ಮತ್ತು ವಕೀಲರು ಪರಸ್ಪರ ಹೊಂದಾಣಿಕೆಯಲ್ಲಿ ಕೆಲಸ ಮಾಡುವ ಮೂಲಕ, ನ್ಯಾಯಾಂಗವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ನೆರವಾಗಬೇಕು ಎಂದು ಸಲಹೆ ನೀಡಿದ್ದೆ. ಅದೇ ರೀತಿಯಾಗಿ ನ್ಯಾಯಮೂರ್ತಿಗಳು, ವಕೀಲರು ಸಹಕಾರ ನೀಡುವ ಮೂಲಕ ಉತ್ತಮ ವಾತಾವರಣ ಕಲ್ಪಿಸಿಕೊಟ್ಟರು ಎಂದು ಹೇಳಿದರು. ನ್ಯಾಯಮೂರ್ತಿಗಳು ಯಾವುದೇ ಆಕ್ಷೇಪಣೆಯಿಲ್ಲದೆ ಹೆಚ್ಚುವರಿ ಕೆಲಸಗಳನ್ನು ನಿರ್ವಹಿಸಿದ್ದಾರೆ. ಅವರಿಗೆ ಎಂದಿಗೂ ನಾನು ಆಭಾರಿಯಾಗಿದ್ದೇನೆ. ಇಲ್ಲಿನ ವಕೀಲರು ಅತ್ಯಂತ ಪ್ರತಿಭಾನ್ವಿತರಾಗಿದ್ದು, ಯುವ ವಕೀಲರು ಉತ್ತಮ ಭವಿಷ್ಯದ ಭರವಸೆ ಮೂಡಿಸುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸುಪ್ರೀಂಕೋರ್ಟ್ ಕೊಲಿಜಿಯಂ ನನ್ನ ಮೇಲೆ ಭರವಸೆಯಿಟ್ಟು ಪದೋನ್ನತಿ ನೀಡಿದೆ. ಅಲ್ಲಿಯೂ ಸಹ ಉತ್ತಮ ಕೆಲಸ ಮಾಡುವ ಮೂಲಕ ನನ್ನ ಮೇಲಿಟ್ಟ ಭರವಸೆ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ ಎಂದರು. ಇದೇ ವೇಳೆ, ತಮ್ಮ ಕಚೇರಿ ಸಿಬ್ಬಂದಿ, ಕೋರ್ಟ್ ಸಿಬ್ಬಂದಿ ಹಾಗೂ ನಿವಾಸದ ಸಿಬ್ಬಂದಿ ಸೇರಿ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸಿದರು.

ಇದಕ್ಕೂ ಮುನ್ನ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಮಾತನಾಡಿ, ಜಾಹೀರಾತು ಲಕಗಳ ಹಾವಳಿ, ರಸ್ತೆಗುಂಡಿ ಹಾಗೂ ತ್ಯಾಜ್ಯ ವಿಲೇವಾರಿ ಸಮಸ್ಯೆಗಳಂಥ ಹಲವು ಸಮಸ್ಯೆಗಳನ್ನು ಬಗೆಹರಿಸಲು ಕಠಿಣ ನಿರ್ದೇಶನಗಳನ್ನು ನೀಡಿರುವ ಮುಖ್ಯ ನ್ಯಾಯಮೂರ್ತಿಗಳು ಬೆಂಗಳೂರಿನ ಗತ ವೈಭವವನ್ನು ಮರಳಿ ತರಲು ಯಶಸ್ವಿಯಾಗಿದ್ದಾರೆ. ಕಳೆದುಹೋಗಿದ್ದ ಉದ್ಯಾನನಗರಿ ಎಂಬ ಹೆಸರನ್ನು ಉಳಿಸುವ ನಿಟ್ಟಿನಲ್ಲಿ ಮುಖ್ಯ ನ್ಯಾಯಮೂರ್ತಿಗಳು ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದಾರೆ. ಇಲ್ಲಿನ ಜನರು ಸದಾ ಅವರನ್ನು ಸ್ಮರಿಸಿಕೊಳ್ಳುತ್ತಾರೆ ಎಂದರು.

ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ನಾಯಕ್ ಕೃಷ್ಣಪ್ಪ ಭೀಮಪ್ಪ, ದಿನೇಶ್ ಮಾಹೇಶ್ವರಿ ಅವರ ಬೀಳ್ಕೊಡುಗೆ ಭಾಷಣ ಓದಿದರು. ಹೈಕೋರ್ಟ್‌ನ ಎಲ್ಲ ನ್ಯಾಯಮೂರ್ತಿಗಳು, ಅಡ್ವೊಕೇಟ್ ಜನರಲ್ ಉದಯ ಹೊಳ್ಳ, ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ಕೆ. ನಾವದಗಿ, ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್ ಸೇರಿ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News