17 ದೇಶಗಳ 30 ಪ್ರತಿನಿಧಿಗಳಿಗೆ ಇಸ್ರೋದಿಂದ ಬಾಹ್ಯಾಕಾಶ ಸಂಶೋಧನಾ ತರಬೇತಿ: ಕೇಂದ್ರ ಸಚಿವ ಜೀತೇಂದ್ರ ಸಿಂಗ್

Update: 2019-01-17 17:27 GMT

ಬೆಂಗಳೂರು, ಜ.17: ಉನ್ನತಿ ಯೋಜನೆ ಮೂಲಕ ನ್ಯಾನೊ ಉಪಗ್ರಹಗಳ ನಿರ್ಮಾಣ, ಜೋಡಣೆ, ಪರೀಕ್ಷೆ ಸೇರಿದಂತೆ ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದಂತೆ 17 ದೇಶಗಳ 30 ಪ್ರತಿನಿಧಿಗಳಿಗೆ 2 ತಿಂಗಳು ತರಬೇತಿ ನೀಡಲು ಇಸ್ರೋ ಮಹತ್ವದ ಪಾತ್ರವಹಿಸಲಿದೆ ಎಂದು ಕೇಂದ್ರ ಸಚಿವ ಜೀತೇಂದ್ರ ಸಿಂಗ್ ಹರ್ಷ ವ್ಯಕ್ತಪಡಿಸಿದ್ದಾರೆ.

ಗುರುವಾರ ನಗರದ ಯು.ಆರ್.ರಾವ್ ಸ್ಯಾಟಲೈಟ್ ಕೇಂದ್ರದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಯೋಜಿಸಿದ್ದ ಉನ್ನತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಾಹ್ಯಾಕಾಶ ಸಂಶೋಧನೆಗೆ ಇದು ಮೈಲುಗಲ್ಲಾಗಲಿದ್ದು, ಆಂತರಿಕ್ಷಾ ತಂತ್ರಜ್ಞಾನದಲ್ಲಿ ನಮ್ಮ ಸ್ವದೇಶ ಕರ್ತೃತ್ವ ಶಕ್ತಿ ಮೂಲಕ ಏನನ್ನು ಅಭಿವೃದ್ಧಿ ಪಡಿಸಿದ್ದೇವೆ ಅದನ್ನು ಉನ್ನತಿ ಕಾರ್ಯಕ್ರಮದ ಮೂಲಕ ಬೇರೆಯವರಿಗೆ ಹಂಚಲು ಸಿದ್ಧವಾಗಿದ್ದೇವೆ ಎಂದು ತಿಳಿಸಿದರು.

ಆಂತರಿಕ್ಷಾ ತಂತ್ರಜ್ಞಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ನಾಲ್ಕೂವರೆ ವರ್ಷದಿಂದ ಒತ್ತು ನೀಡಿದ್ದಾರೆ. ಇಸ್ರೋ ವಿಶ್ವ ಮಟ್ಟದಲ್ಲಿ ಹೆಸರು ಪಡೆದಿದ್ದು, ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಈಗಾಗಲೇ ಚಂದ್ರಯಾನ-2 ಉಡಾವಣೆಗೆ ತಯಾರಿ ನಡೆಯುತ್ತಿದ್ದು, ಸಮಾಜದ ಒಳಿತಿಗಾಗಿ ಬಾಹ್ಯಾಕಾಶ ವಿಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಭಾರತ ಮುಂದಿದೆ ಎಂದರು.

ಯು.ಆರ್.ರಾವ್ ಉಪಗ್ರಹ ಕೇಂದ್ರದ ನಿರ್ದೇಶಕ ಪಿ.ಕುನ್ಹಿಕೃಷ್ಣನ್, ತರಬೇತಿ ಪಡೆಯಲು ಬಂದಿರುವ 17 ದೇಶದ ಪ್ರತಿನಿಧಿಗಳು ವಿಜ್ಞಾನಿಗಳಾಗಿ ಹೊರಹೊಮ್ಮುವ ಭರವಸೆ ಇದೆ. ಕೇಂದ್ರ ಸರಕಾರ ಅತ್ಯಲ್ಪಾವಧಿಯಲ್ಲಿ ಇಸ್ರೋಗೆ 30 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದೆ. ಮುಂದೆಯೂ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರಕ್ಕೆ ಇದೇ ರೀತಿಯ ಬೆಂಬಲ ದೊರೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿರು.

ದೇಶದ ಭದ್ರತೆಗೆ ಇಸ್ರೋ ಕೊಡುಗೆ ಗಮನಾರ್ಹವಾಗಿದ್ದು, ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಹಿಂದುಳಿದಿರುವ ದೇಶಗಳಿಗೆ ಸೇವೆ ಒದಗಿಸುವ ಅವಕಾಶ ದೊರಕಿದ್ದು, ಐದು ದಶಕಗಳಿಂದ ಇಸ್ರೋ ಸಂಸ್ಥೆ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ತನ್ನ ಕಾರ್ಯಬದ್ಧತೆ ಪ್ರದರ್ಶಿಸಿದೆ.

-ಕೆ.ಶಿವನ್, ಇಸ್ರೋ ಅಧ್ಯಕ್ಷ

ಉನ್ನತಿ ಯೋಜನೆಯಲ್ಲಿ ಪಾಲ್ಗೊಂಡಿರುವ ದೇಶಗಳ ಪ್ರತಿನಿಧಿಗಳು ಉಪಗ್ರಹ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಮರ್ಥ್ಯ ವೃದ್ಧಿಸಿಕೊಳ್ಳಲೆಂದು, ನ್ಯಾನೋ ಉಪಗ್ರಹಗಳ ಕುರಿತು ಕೋರ್ಸ್ ಆರಂಭಿಸಲಾಗಿದ್ದು, ಈಗಾಗಲೇ ಇದಕ್ಕೆ ಸಂಬಂಧಿಸಿದ ಪುಸ್ತಕ ಮತ್ತು ಸಿಡಿಗಳನ್ನು ತಯಾರಿಸಲಾಗಿದೆ.

-ಪ್ರಕಾಶ್‌ರಾವ್, ಕಾರ್ಯಕ್ರಮದ ನಿರ್ವಾಹಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News