ಗಮನ ಬೇರೆಡೆ ಸೆಳೆದು ಹಣ, ಎಟಿಎಂ ಕಾರ್ಡ್ ದೋಚಿ ಪರಾರಿ

Update: 2019-01-17 17:34 GMT

ಬೆಂಗಳೂರು, ಜ.17: ಪ್ರಾಧ್ಯಾಪಕಿಯೊಬ್ಬರ ಗಮನ ಬೇರೆ ಕಡೆ ಸೆಳೆದು ಮಹಿಳೆಯರಿಬ್ಬರು 12 ಸಾವಿರ ನಗದು ಹಾಗೂ ಎಟಿಎಂ ಕಾರ್ಡ್ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

ದೊಡ್ಡಬಳ್ಳಾಪುರದ ಆರ್‌ಎಲ್‌ಜೆಐಟಿ ಕಾಲೇಜಿನಲ್ಲಿ ಕೆಲಸ ಮಾಡುವ ಹೇಮಲತಾ ಅವರು, ಮಂಡ್ಯಕ್ಕೆ ತೆರಳುವ ಸಲುವಾಗಿ ಜ.13ರ ಸಂಜೆ 4 ಗಂಟೆ ಸುಮಾರಿಗೆ ಸ್ಯಾಟಲೈಟ್ ನಿಲ್ದಾಣಕ್ಕೆ ಬಂದು ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದರು. ಈ ವೇಳೆ ಒಬ್ಬಳು ಮಹಿಳೆ ನನ್ನ ಪಕ್ಕದಲ್ಲಿ ಬಂದು ಕುಳಿತರೆ, ಮತ್ತೊಬ್ಬಾಕೆ ಪಕ್ಕದಲ್ಲೇ ನಿಂತುಕೊಂಡಿದ್ದಳು. ಬಸ್ ಸ್ವಲ್ಪ ದೂರ ಸಾಗುತ್ತಿದ್ದಂತೆಯೇ ಪಕ್ಕದಲ್ಲಿ ಕುಳಿತಿದ್ದವಳು ಚಿಲ್ಲರೆಯನ್ನು ಕೆಳಗೆ ಬೀಳಿಸಿದಳು. ನಾಣ್ಯಗಳನ್ನು ತೆಗೆದುಕೊಡುವಂತೆ ಕೇಳಿದ್ದಾಳೆ.

ಆಗ ಕೆಳಗೆ ಬಗ್ಗಿ ಚಿಲ್ಲರೆ ತೆಗೆದಿದ್ದು, ಆ ನಂತರ ಮುಂದಿನ ನಿಲ್ದಾಣದಲ್ಲೇ ಅವರಿಬ್ಬರೂ ಇಳಿದುಕೊಂಡು ಹೋಗಿದ್ದಾರೆ. ಬ್ಯಾಗ್ ನೋಡಿಕೊಂಡಾಗ 12 ಸಾವಿರ ನಗದು, ಎಟಿಎಂ ಕಾರ್ಡ್ ಹಾಗೂ ಟೈಟಾನ್ ವಾಚ್ ಕಾಣೆಯಾಗಿದೆ. ಅಲ್ಲದೆ, ಮುಂದಿನ ನಿಲ್ದಾಣದಲ್ಲಿ ಇಳಿದ ಕೂಡಲೇ ಎಟಿಎಂ ಕಾರ್ಡ್‌ನಿಂದ 23 ಸಾವಿರ ರೂ. ಹಣವನ್ನು ಡ್ರಾ ಮಾಡಿಕೊಂಡಿದ್ದಾರೆ. ಈ ಸಂಬಂಧ ಮಂಡ್ಯದ ಶಂಕರನಗರದ ಬಿ.ಆರ್.ಹೇಮಲತಾ ಬ್ಯಾಟರಾಯನಪುರ ಠಾಣೆಗೆ ದೂರು ಕೊಟ್ಟಿದ್ದಾರೆ.

ಕಳ್ಳತನವಾದ ಕೂಡಲೇ ಕಂಡಕ್ಟರ್‌ಗೆ ವಿಷಯ ತಿಳಿಸಿತ್ತಾದರೂ ಅಷ್ಟರಲ್ಲಾಗಲೇ ಬಸ್ ತುಂಬಾ ದೂರಕ್ಕೆ ಬಂದಿದ್ದರಿಂದ ಅವರೂ ಅಸಹಾಯಕತೆ ವ್ಯಕ್ತಪಡಿಸಿದ್ದರು. 15 ನಿಮಿಷಗಳ ಬಳಿಕ ಹೇಮಲತಾ ಅವರ ಖಾತೆಯಿಂದ 23 ಸಾವಿರ ರೂ. ಹಣ ಡ್ರಾ ಆಗಿರುವುದಾಗಿ ಮೊಬೈಲ್‌ಗೆ ಸಂದೇಶ ಬಂದಿದೆ. ಕಾರ್ಡ್ ಮೇಲ್ ಪಿನ್ ನಂಬರ್ ಬರೆದಿದ್ದರಿಂದ ಆ ಮಹಿಳೆಯರೇ ಹಣ ಡ್ರಾ ಮಾಡಿದ್ದಾರೆ ಎಂದು ದೂರಿನಲ್ಲಿ ನಮೂದಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News