ಹಳೆ ಪಿಂಚಣಿ ನೀತಿ ಜಾರಿಗೊಳಿಸುವಂತೆ ರಾಜ್ಯ ಸರಕಾರಿ ನೌಕರರ ಸಂಘ ಒತ್ತಾಯ

Update: 2019-01-17 17:35 GMT

ಬೆಂಗಳೂರು, ಜ.17: ನೂತನ ಪಿಂಚಣಿ ನೀತಿ(ಎನ್‌ಪಿಎಸ್)ಯಿಂದ 1.75 ಲಕ್ಷ ರಾಜ್ಯ ಸರಕಾರಿ ನೌಕರರಿಗೆ ಅನಾನುಕೂಲವಾಗಿರುವುದರಿಂದ ಹಳೆ ಪಿಂಚಣಿ ನೀತಿಯನ್ನೇ ಜಾರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಎಚ್.ಕೆ.ರಾಮು ಮಾತನಾಡಿ, ಎನ್‌ಪಿಎಸ್‌ನಿಂದಾಗಿ ಸರಕಾರಿ ನೌಕರರಿಗೆ ವೃದ್ಧಾಪ್ಯದಲ್ಲಿ ಪಿಂಚಣಿ ದೊರೆಯದೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. 60 ವರ್ಷದ ನಂತರ ಹಲವು ಕಾಯಿಲೆಗಳಿಂದಾಗಿ ಅವಲಂಬಿತ ಜೀವನ ನಡೆಸುತ್ತಿದ್ದಾರೆ. ನೌಕರರು ತಮ್ಮ ಸೇವಾ ಅವಧಿಯಲ್ಲಿ ಸಂಗ್ರಹಿಸಿಟ್ಟ ಹಣವನ್ನು ಅವರ ನಿವೃತ್ತಿಯ ನಂತರ ನೀಡಿದರೆ ವೃದ್ಧಾಪ್ಯದಲ್ಲಿ ಅನುಕೂಲವಾಗುತ್ತದೆ ಎಂದು ಹೇಳಿದರು.

ಹೀಗಾಗಿ, ಎನ್‌ಪಿಎಸ್ ರದ್ಧತಿ ಸಂಬಂಧ ರಚಿತವಾಗಿರುವ ಅಧಿಕಾರಿಗಳ ಸಮಿತಿಯು ನೂತನ ಪಿಂಚಣಿ ಯೋಜನೆ ಕೈ ಬಿಟ್ಟು ಹಳೆ ಪಿಂಚಣಿ ನೀತಿಯನ್ನೇ ಜಾರಿಗೊಳಿಸುವಂತೆ ಸರಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರಕಾರಿ ನೌಕರರಲ್ಲಿ ಪ್ರತಿ ತಿಂಗಳು 500-600 ನೌಕರರು ಮುಂಬಡ್ತಿಗಳಿಂದ ವಂಚಿತರಾಗಿ ಸೇವಾ ನಿವೃತ್ತಿ ಹೊಂದುತ್ತಿದ್ದಾರೆ. ಇಂತಹ ನೌಕರರಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ತೀರ್ಪನ್ನು ಕಾಯ್ದಿರಿಸಿಕೊಂಡು ಮುಂಬಡ್ತಿ ನೀಡಬೇಕು ಎಂದು ಒತ್ತಾಯಿಸಿದರು.

6ನೇ ವೇತನ ಆಯೋಗದ ಅಂತಿಮ ವರದಿಯ ಶಿಫಾರಸ್ಸುಗಳ ಅನುಷ್ಠಾನ ಸಂಬಂಧ ಸಚಿವ ಸಂಪುಟ ಉಪ ಸಮಿತಿಯ ವರದಿಯನ್ನು ಶೀಘ್ರವಾಗಿ ಪಡೆದು, ಕೇಂದ್ರ ಸರಕಾರದ ಮಾದರಿಯಲ್ಲಿ ವಾರದಲ್ಲಿ ಐದು ದಿನಗಳ ಕರ್ತವ್ಯ ನಿರ್ವಹಣೆ ವ್ಯವಸ್ಥೆ ಅಥವಾ ಪ್ರತಿ 2 ಮತ್ತು 4ನೇ ಶನಿವಾರಗಳಂದು ರಜೆ ಘೋಷಣೆ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ಅನುಷ್ಠಾನಗೊಳಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News