×
Ad

ತಾಕತ್ತಿದ್ದರೆ ಬಂಡಾಯ ಶಾಸಕರನ್ನು ಪಕ್ಷದಿಂದ ಉಚ್ಛಾಟಿಸಲಿ: ಸಿ.ಟಿ.ರವಿ

Update: 2019-01-17 23:14 IST

ಬೆಂಗಳೂರು, ಜ. 17: ಬಿಜೆಪಿ ಮುಖಂಡರಿಗೆ ಮಾನ-ಮರ್ಯಾದೆ ಇಲ್ಲವೆಂದು ನಿಂದನೆ ಮಾಡುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಾಕತ್ತಿದ್ದರೆ ಬಂಡಾಯ ಎದ್ದ ಶಾಸಕರನ್ನು ಉಚ್ಚಾಟಿಸಲಿ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸವಾಲು ಹಾಕಿದ್ದಾರೆ.

ಗುರುವಾರ ವಿಧಾನಸೌಧದಲ್ಲಿನ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಮರ್ಯಾದ ಪುರುಷೋತ್ತಮ. ಹೀಗಾಗಿ ರಾಜ್ಯದ ಜನತೆ ಅವರನು ಅಧಿಕಾರಿಂದ ಕೆಳಗಿಳಿಸಿದರು. ಜೆಡಿಎಸ್ ವಿರುದ್ಧ ಏನೆಲ್ಲ ಮಾತನಾಡಿ ಇದೀಗ ಅಧಿಕಾರಕ್ಕಾಗಿ ಅವರಿಗೆ ಬೆಂಬಲ ನೀಡಿದ್ದಾರೆ ಎಂದು ಟೀಕಿಸಿದರು.

ಯಾವುದೇ ಅಧಿಕಾರವಿಲ್ಲದಿದ್ದರೂ ತಾವು ಹಿಂದೆ ಸಿಎಂ ಆಗಿದ್ದಾಗ ಇದ್ದ ಕಾವೇರಿ ಸರಕಾರಿ ನಿವಾಸದಲ್ಲೇ ಈಗಲೂ ವಾಸ ಮಾಡುತ್ತಿದ್ದಾರೆ. ವಿಧಾನಸೌಧದಲ್ಲಿ ತಮ್ಮ ಪ್ರಭಾವ ಬಳಸಿ ಕಚೇರಿಯನ್ನು ಪಡೆದಿದ್ದಾರೆ. ಹೀಗಾಗಿ ಅವರಷ್ಟು ಮರ್ಯಾದಸ್ಥರು ರಾಜ್ಯದಲ್ಲಿ ಯಾರೂ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ನ ಯಾವುದೇ ಶಾಸಕರು ಬಿಜೆಪಿಗೆ ಹೋಗುತ್ತಿಲ್ಲ ಎಂದು ಹೇಳುವ ಸಿದ್ದರಾಮಯ್ಯ, ಮತ್ತೊಂದೆಡೆ ಶಾಸಕರನ್ನು ಖರೀದಿ ಮಾಡುತ್ತಿದೆ ಎಂದು ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ದೂರಿದ ಅವರು, ನೀವು ಶಾಸಕರನ್ನು ಪಕ್ಷಕ್ಕೆ ಕರೆದರೆ ಅದು ರಾಜಕಾರಣ, ನಾವು ಮಾಡಿದರೆ ಮಾನಗೆಟ್ಟ ಕೆಲಸವೇ? ಎಂದು ಪ್ರಶ್ನಿಸಿದರು.

ನಮ್ಮದು ರಾಜಕೀಯ ಅಧ್ಯಯನ: ನಾವು ಬರ ಅಧ್ಯಯನಕ್ಕಾಗಿ ಹರಿಯಾಣಕ್ಕೆ ಹೋಗಿರಲಿಲ್ಲ. ರಾಜಕೀಯವನ್ನು ಅಧ್ಯಯನ ಮಾಡಲಿಕ್ಕಾಗಿಯೇ ಹೋಗಿದ್ದು ಎಂದು ಸಮರ್ಥಿಸಿಕೊಂಡ ರವಿ, ಸರಕಾರದ ಉರಿಯುವ ಬೆಂಕಿಗೆ ತುಪ್ಪ ಸುರಿಯಲಿಕ್ಕಾಗಿಯೇ ನಾವಿರುವುದು, ನಾವಿರುವುದೂ ರಾಜಕಾರಣ ಮಾಡಲಿಕ್ಕಾಗಿಯೇ ಎಂದರು.

ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು, ವಕ್ತಾರ ಅಶ್ವತ್ಥ ನಾರಾಯಣ, ಸಹ ವಕ್ತಾರರಾದ ಪ್ರಕಾಶ್, ಆನಂದ್ ಹಾಜರಿದ್ದರು.

‘ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ ಹೊಟ್ಟೆ ಉರಿಯಲ್ಲಿ ಜೆಡಿಎಸ್ ಬಗ್ಗೆ ಏನೆಲ್ಲಾ ಮಾತನಾಡಿದ್ದೀರಿ ಎಂದು ಗೊತ್ತು. ನಿಮ್ಮ ಸಹಕಾರವನ್ನು ನಾವು ಮರೆಯಲು ಸಾಧ್ಯವಿಲ್ಲ. ಕಾಂಗ್ರೆಸ್‌ನ ಅತೃಪ್ತ ಶಾಸಕರು ನಮ್ಮ ಸಂಪರ್ಕದಲ್ಲಿರುವುದು ನಿಜ. ಯಾವಾಗ ಏನು ಬೇಕಾದರೂ ಆಗಬಹುದು, ಕಾದು ನೋಡಿ’

-ಸಿ.ಟಿ.ರವಿ ಬಿಜೆಪಿ ಪ್ರಧಾನ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News