ಮೂರನೇ ಏಕದಿನ: ಭಾರತಕ್ಕೆ 231 ರನ್ ಗುರಿ ನೀಡಿದ ಆಸ್ಟ್ರೇಲಿಯ

Update: 2019-01-18 07:06 GMT

  ಮೆಲ್ಬೋರ್ನ್, ಜ.18: ಭಾರತ ವಿರುದ್ಧ ಗೆಲ್ಲಲೇೀಬೇಕಾಗಿರುವ ಸರಣಿ ನಿರ್ಣಾಯಕ ಮೂರನೇ ಏಕದಿನ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯ ತಂಡ 48.4 ಓವರ್‌ಗಳಲ್ಲಿ 230 ರನ್‌ಗೆ ಆಲೌಟಾಗಿದೆ.

ಶುಕ್ರವಾರ ಎಂಸಿಜಿ ಮೈದಾನದಲ್ಲಿ ಟಾಸ್ ಜಯಿಸಿದ ಭಾರತದ ನಾಯಕ ವಿರಾಟ್ ಕೊಹ್ಲಿ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.

ನಾಯಕನ ನಿರ್ಧಾರವನ್ನು ಸಮರ್ಥಿಸಿದ ಸ್ಪಿನ್ನರ್ ಯಜುವೇಂದ್ರ ಚಹಾಲ್ ನೇತೃತ್ವದ ಭಾರತದ ಬೌಲರ್‌ಗಳು ಆಸೀಸ್ ದಾಂಡಿಗರನ್ನು ನಿರಂತರವಾಗಿ ಕಾಡಿದರು.

 ಕುಲ್‌ದೀಪ್ ಯಾದವ್ ಬದಲಿಗೆ ಆಡುವ ಬಳಗವನ್ನು ಸೇರಿದ್ದ ಚಹಾಲ್ 42 ರನ್‌ಗೆ 6 ವಿಕೆಟ್‌ಗಳನ್ನು ಉಡಾಯಿಸಿದರು. ಎಂಸಿಜಿಯಲ್ಲಿ ಶ್ರೇಷ್ಠ ಬೌಲಿಂಗ್ ಮಾಡಿದ ಭಾರತದ ಮೊದಲ ಬೌಲರ್ ಎನಿಸಿಕೊಂಡ ಚಹಾಲ್ ಐತಿಹಾಸಿಕ ಸಾಧನೆ ಮಾಡಿದರು.

ವೇಗದ ಬೌಲರ್ ಭುವನೇಶ್ವರ ಕುಮಾರ್ ಆಸೀಸ್ ಆರಂಭಿಕ ಆಟಗಾರರಾದ ಆ್ಯರೊನ್ ಫಿಂಚ್ ಹಾಗೂ ಅಲೆಕ್ಸ್‌ರನ್ನು ಬೇಗನೇ ಪೆವಿಲಿಯನ್‌ಗೆ ಕಳುಹಿಸಿದರು. ಸ್ಪಿನ್ನರ್ ಯಜುವೇಂದ್ರ ಚಹಾಲ್ ಮಧ್ಯಮ ಕ್ರಮಾಂಕದ ಉಸ್ಮಾನ್ ಖ್ವಾಜಾಗೆ(34) ಪೆವಿಲಿಯನ್ ದಾರಿ ತೋರಿಸಿದರು. 19 ಎಸೆತಗಳಲ್ಲಿ 5 ಬೌಂಡರಿ ಸಹಿತ 26 ರನ್ ಗಳಿಸಿ ಅಬ್ಬರಿಸುತ್ತಿದ್ದ ಮ್ಯಾಕ್ಸ್‌ವೆಲ್‌ಗೆ ವೇಗಿ ಮುಹಮ್ಮದ್ ಶಮಿ ಮೂಗುದಾರ ತೊಡಿಸಿದರು.

ಭಾರತದ ಪರ ಚಹಾಲ್ ಆಸೀಸ್‌ನ ಅಗ್ರ ಸ್ಕೋರರ್ ಹ್ಯಾಂಡ್ಸ್‌ಕಾಂಬ್(58,63 ಎಸೆತ)ಸಹಿತ ಆರು ವಿಕೆಟ್‌ಗಳನ್ನು ಉರುಳಿಸಿ ಕಾಂಗರೂ ಪಡೆಯನ್ನು ಇನ್ನಿಲ್ಲದಂತೆ ಕಾಡಿದರು. ಕುಮಾರ್ (2-28) ಹಾಗೂ ಶಮಿ(2-47) ತಲಾ 2 ವಿಕೆಟ್ ಪಡೆದು ಚಹಾಲ್‌ಗೆ ಸಾಥ್ ನೀಡಿದರು.

ಸರಣಿಯ ಕಳೆದ ಎರಡು ಪಂದ್ಯಗಳಲ್ಲಿ ಶತಕ ಸಿಡಿಸಿದ್ದ ಶಾನ್ ಮಾರ್ಷ್ 39 ರನ್‌ಗೆ ಔಟಾದರು. ಚೆನ್ನೈ ಆಲ್‌ರೌಂಡರ್ ವಿಜಯ್ ಶಂಕರ್ ಚೊಚ್ಚಲ ಪಂದ್ಯವನ್ನಾಡುವ ಅವಕಾಶ ಪಡೆದಿದ್ದಾರೆ. 6 ಓವರ್ ಬೌಲಿಂಗ್‌ನಲ್ಲಿ 23 ರನ್ ಮಿತವ್ಯಯಿ ಎನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News