ಸಂಸದೀಯ ಕಾರ್ಯದರ್ಶಿಗಳ ನೇಮಕ ವಿಚಾರ: ಶಾಸಕಿ ಡಾ.ಅಂಜಲಿ ಸೇರಿ ಎಲ್ಲ ಪ್ರತಿವಾದಿಗಳಿಗೆ ಹೈಕೋರ್ಟ್ ನೋಟಿಸ್

Update: 2019-01-18 15:46 GMT

ಬೆಂಗಳೂರು, ಜ.18: ರಾಜ್ಯ ಸರಕಾರದ ಸಂಸದೀಯ ಕಾರ್ಯದರ್ಶಿಗಳ ಹುದ್ದೆಗೆ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರನ್ನು ನೇಮಿಸಿದ ಮುಖ್ಯಮಂತ್ರಿಗಳ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದೆ.

ಸಂವಿಧಾನಕ್ಕೆ ವಿರುದ್ಧವಾಗಿ ಸಂಸದೀಯ ಕಾರ್ಯದರ್ಶಿಗಳನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿ ಬೆಂಗಳೂರಿನ ವಿಜಯನಗರ ನಿವಾಸಿ ಎಂ.ಬಿ.ಆದಿನಾರಾಯಣ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಹಾಗೂ ಅರವಿಂದಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿತು.

ಅರ್ಜಿದಾರರ ಪರ ವಾದಿಸಿದ ವಕೀಲ ಜಿ.ಆರ್.ಮೋಹನ್ ಅವರು, ಸಂಸದೀಯ ಕಾರ್ಯದರ್ಶಿಗಳ ನೇಮಕಾತಿಯು ಸಂವಿಧಾನದ ಪರಿಚ್ಛೇದ 164(1-ಎ)ಕ್ಕೆ ವಿರುದ್ಧವಾಗಿದೆ. ಹೀಗಾಗಿ, ಐವಾನ್ ಡಿಸೋಜಾ ಹಾಗೂ ಇತರರನ್ನು ಸಂಸದೀಯ ಕಾರ್ಯದರ್ಶಿಗಳ ಹುದ್ದೆಯಿಂದ ವಜಾಗೊಳಿಸಲು ಸರಕಾರಕ್ಕೆ ನಿರ್ದೇಶಿಸಬೇಕು. ಹಾಗೂ ಅರ್ಜಿ ಇತ್ಯರ್ಥವಾಗುವರೆಗೆ ಸಂಸದೀಯ ಕಾರ್ಯದರ್ಶಿಗಳನ್ನು ನೇಮಿಸಿ ಹೊರಡಿಸಿರುವ ಅಧಿಸೂಚನೆಗೆ ತಡೆಯಾಜ್ಞೆ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು.

ಶಾಸಕಿ ಡಾ.ಅಂಜಲಿ ಹೇಮಂತ ನಿಂಬಾಳ್ಕರ್, ಕೌಜಲಗಿ ಮಹಂತೇಶ್ ಶಿವಾನಂದ, ರೂಪಕಲಾ ಎಂ.ಶಶಿಧರ್, ರಾಘವೇಂದ್ರ ಬಸವರಾಜ್ ಹಿಟ್ನಾಳ್, ಡಿ.ಎಸ್.ಹೂಲಗೇರಿ, ವಿಧಾನ ಪರಿಷತ್ ಸದಸ್ಯರಾದ ಕೆ.ಅಬ್ದುಲ್ ಜಬ್ಬರ್, ಐವಾನ್ ಡಿಸೋಜಾ ಮತ್ತು ಕೆ.ಗೋವಿಂದರಾಜ್ ಅವರನ್ನು ಸಂಸದೀಯ ಕಾರ್ಯದರ್ಶಿಗಳನ್ನಾಗಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇಮಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ 2009ರ ಜ.7ರಂದು ಗೆಜೆಟ್ ನೋಟಿಫಿಕೇಷನ್ ಹೊರಡಿಸಿದ್ದರು.

ರಾಜ್ಯ ಸರಕಾರದ ಸಂಸದೀಯ ಕಾರ್ಯದರ್ಶಿಗಳಾಗಿ ನೇಮಕವಾದ ವಿಧಾನ ಪರಿಷತ್ ಸದಸ್ಯರು ಹಾಗೂ ಶಾಸಕರುಗಳು ಜ.17ರ ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಅಧಿಕಾರ ಮತ್ತು ಗೌಪ್ಯತಾ ಪ್ರಮಾಣ ವಚನ ಸ್ವೀಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News