ಇದೇ ಪರಿಸ್ಥಿತಿ ಮುಂದುವರೆದರೆ ರಾಜ್ಯದ ಜನತೆಯನ್ನು ಬೀದಿಗೆ ಇಳಿಸಬೇಕಾಗುತ್ತದೆ: ಯಡಿಯೂರಪ್ಪ

Update: 2019-01-18 16:06 GMT

ಬೆಂಗಳೂರು, ಜ. 18: ‘ಇದೇ ಪರಿಸ್ಥಿತಿ ಮುಂದುವರೆದರೆ ಬಿಜೆಪಿ ವಿಪಕ್ಷವಾಗಿ ಸುಮ್ಮನೆ ಕೂರುವುದಿಲ್ಲ. ರಾಜ್ಯದ ಜನತೆಯನ್ನು ಬೀದಿಗೆ ಇಳಿಸಬೇಕಾಗುತ್ತದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದ ಕಾಂಗ್ರೆಸ್-ಜೆಡಿಎಸ್ ನಾಯಕರು ರಾಜ್ಯದ ಜನತೆಗೆ ಉತ್ತರ ನೀಡಬೇಕು. ಶಾಸಕಾಂಗ ಪಕ್ಷದ ಸಭೆಗೆ ಶಾಸಕರ ಗೈರು, ಮೈತ್ರಿ ಸರಕಾರದಲ್ಲಿ ಅಸಮಾಧಾನ-ಅತೃಪ್ತಿ ಇರುವುದು ಸತ್ಯ ಎಂಬುದು ಸಾಬೀತಾಗಿದೆ ಎಂದು ಹೇಳಿದರು.

ಇನ್ನು ಮುಂದಾದರೂ ಮೈತ್ರಿ ಸರಕಾರದ ಸಚಿವರು, ಶಾಸಕರು ಅಭಿವೃದ್ಧಿ ಕಡೆಗೆ ಗಮನಹರಿಸಲಿ. ಆಪರೇಷನ್ ಸಂಸ್ಕೃತಿ ಮೂಲಕವೇ ಕಾಂಗ್ರೆಸ್ ಸೇರ್ಪಡೆಯಾದ ಸಿದ್ದರಾಮಯ್ಯ ಇಂದು ಅದನ್ನು ಮರೆತಂತಿದೆ ಎಂದು ಟೀಕಿಸಿದ ಯಡಿಯೂರಪ್ಪ, ಅಭಿವೃದ್ಧಿ ದಿಕ್ಕಿನತ್ತ ನಿಮ್ಮ ಕರ್ತವ್ಯವನ್ನು ನಿರ್ವಹಿಸಿ ಎಂದು ಸಲಹೆ ಮಾಡಿದರು.

‘ರಾಜ್ಯದಲ್ಲಿ ಭೀಕರ ಸ್ವರೂಪದ ಬರ ಪರಿಸ್ಥಿತಿ ಆವರಿಸಿರುವ ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಶಾಸಕರು ರೆಸಾರ್ಟ್‌ಗೆ ತೆರಳುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ನಮ್ಮ ಪಕ್ಷದ ಎಲ್ಲ ಶಾಸಕರು ನಾಳೆ ಬೆಂಗಳೂರಿಗೆ ಆಗಮಿಸಲಿದ್ದು, ಅವರೊಂದಿಗೆ ನಾನು ಬರ ಪೀಡಿತ ಪ್ರದೇಶಗಳಿಗೆ ಪ್ರವಾಸ ಕೈಗೊಳ್ಳಲಿದ್ದೇನೆ’

-ಬಿ.ಎಸ್.ಯಡಿಯೂರಪ್ಪ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News